

ಗಂಗಾವತಿ: ತಾಲೂಕಿನ ಆನೆಗೊಂದಿ ಗ್ರಾಪಂ ವ್ಯಾಪ್ತಿಯ ಕೃಷ್ಣಾಪುರಕ್ಕೆ ದಿನದ 24 ಗಂಟೆ ನೀರು ಪೂರೈಸುವ ಯೋಜನೆಗೆ ಶನಿವಾರ ಚಾಲನೆ ನೀಡಲಾಗಿದ್ದು, ತಾಲೂಕಿನ ಮೊದಲ ಗ್ರಾಮವಾಗಿದೆ. 24/7 ನೀರು ಪೂರೈಕೆ ಜಲ ಜೀವನ ಮಿಷನ್ ಯೋಜನೆ 3 ವರ್ಷಗಳ ಹಿಂದೆ ಅನುಷ್ಠಾನಗೊಳಿಸಿದ್ದರೂ, ನೀರು ಪೂರೈಕೆಯಾಗಿರಲಿಲ್ಲ.
ನೀರು ಪೂರೈಕೆಗೆ ಚಾಲನೆ ನೀಡಿದ ಗ್ರಾಪಂ ಅಧ್ಯಕ್ಷೆ ಹುಲಿಗೆಮ್ಮ ಹೊನ್ನಪ್ಪ ನಾಯಕ ಮಾತನಾಡಿ, ತುಂಗಭದ್ರಾ ನದಿ ತೀರದಲ್ಲಿ ಗ್ರಾಮವಿದ್ದರೂ, ಕುಡಿವ ನೀರು ಪೂರೈಸಿರಲಿಲ್ಲ. ಜೆಜೆಎಂ ಯೋಜನೆಯಡಿ ಚಾಲನೆ ನೀಡಲಾಗಿದ್ದು, ನೀರನ್ನು ಮಿತವಾಗಿ ಬಳಸಬೇಕು. ನೀರು ಪೋಲಾಗದಂತೆ ಗ್ರಾಮಸ್ಥರು ಎಚ್ಚರಿಕೆವಹಿಸುವಂತೆ ಸಲಹೆ ನೀಡಿದರು.
ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಎಇಇ ದೇವಣ್ಣ ಕಟ್ಟಿ, ಜೆಇ ಸುಮನ್, ಗ್ರಾಪಂ ಕಾರ್ಯದರ್ಶಿ ಮನೋರಮಾ, ಮುಖಂಡ ಹೊನ್ನಪ್ಪ ನಾಯಕ ಹಾಗೂ ಗ್ರಾಮಸ್ಥರಿದ್ದರು.