ಗಂಗಾವತಿಯಲ್ಲಿ 21 ಜನರಿಗೆ ವಕ್ಕರಿಸಿದ ಮಹಾಮಾರಿ ಕರೊನಾ

coronavirus-
Published on

ನಗರಸಭೆ ಸದಸ್ಯನಿಗೆ ಸೋಂಕು ದೃಢ

ಗಂಗಾವತಿ: ನಗರದಲ್ಲಿ 19 ಸೇರಿ ತಾಲೂಕಿನಲ್ಲಿ 21 ಕರೊನಾ ಸೋಂಕು ಪ್ರಕರಣ ಶನಿವಾರ ಪತ್ತೆಯಾಗಿದ್ದು, ಸಾರ್ವಜನಿಕರು ಆತಂಕಕ್ಕೊಳಗಾಗಿದ್ದಾರೆ.

ತಾಲೂಕಿನ ವಡ್ಡರಹಟ್ಟಿಯಲ್ಲಿ 2, ಅಗಡಿ ಸಂಗಣ್ಣ ಕ್ಯಾಂಪ್, ಮಹೆಬೂಬ್‌ನಗರ ಮಾರುತೇಶ್ವರ ಕ್ಯಾಂಪ್, ಗುಂಡಮ್ಮ ಕ್ಯಾಂಪ್, ಪೀರಜಾದ್ ಸ್ಟ್ರೀಟ್, ಜುಲಾಯಿನಗರ, ಮುರಾರಿನಗರ, ಲಕ್ಷ್ಮಿಕ್ಯಾಂಪ್, ಗೌಳೇರ್ ಓಣಿ ವ್ಯಾಪ್ತಿಯಲ್ಲಿ 19 ಪ್ರಕರಣ ಪತ್ತೆಯಾಗಿದೆ. ನಗರದ ಹಿರೇಜಂತಕಲ್‌ನ ವ್ಯಕ್ತಿಯೊಬ್ಬ ಮೃತಪಟ್ಟ ನಂತರ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಜನ ಭಯ ಭೀತರಾಗಿದ್ದಾರೆ. ಈಗಾಗಲೇ ಕಾಣಿಸಿಕೊಡ ಬಹುತೇಕ ಪ್ರದೇಶದಲ್ಲಿ ಸೀಲ್ ಡೌನ್ ಆಗಿದ್ದು, ಪೀರ್‌ಜಾದ್ ಸ್ಟ್ರೀಟ್, ಗೌಳೇರ್ ಓಣಿ ವ್ಯಾಪ್ತಿಯಲ್ಲಿ ಸೀಲ್‌ಡೌನ್ ಮಾಡಬೇಕಿದೆ. ಉಪ್ಪಾರ ಓಣಿ ವ್ಯಾಪ್ತಿಯಲ್ಲಿ ನಗರ ಸಭೆ ಸದಸ್ಯರೊಬ್ಬರಿಗೆ ಕರೊನಾ ಶಂಕೆ ಹಿನ್ನೆಲೆಯಲ್ಲಿ ಕೋವಿಡ್ ಆಸ್ಪತ್ರೆಗೆ ಕಳುಹಿಸಲಾಗಿದೆ. ಕರೊನಾ ನಿಯಂತ್ರಣಕ್ಕಾಗಿ ವಹಿವಾಟುಗಾರರು ಸಂಜೆ 4ರವರಿಗೆ ಮಾತ್ರ ವಹಿವಾಟು ನಡೆಸಲು ನಿರ್ಧರಿಸಿದ್ದರೂ ಜನಜಂಗುಳಿ ನಿಯಂತ್ರಣವಾಗುತ್ತಿಲ್ಲ.

ಮದ್ಯದಂಗಡಿಗಳನ್ನು 8 ಗಂಟೆವರೆಗೂ ವಹಿವಾಟು ನಡೆಸಲು ಬಿಡದಂತೆ ಸಾರ್ವಜನಿಕರು ಒತ್ತಾಯಿಸಿದ್ದು, ಸರ್ಕಾರದ ಅಧೀನದಲ್ಲಿ ಪರವಾನಗಿ ಇದ್ದರಿಂದ ಪೊಲೀಸರು ಅಸಹಾಯಕರಾಗಿದ್ದಾರೆ. ಆಶಾಕಾರ್ಯಕರ್ತೆಯರು ಅನಿರ್ದಿಷ್ಟಾವಧಿ ಧರಣಿಯಲ್ಲಿ ಪಾಲ್ಗೊಂಡ ಹಿನ್ನೆಲೆಯಲ್ಲಿ ಕರೊನಾ ನಿಯಂತ್ರಣದಲ್ಲಿ ಆರೋಗ್ಯಕಾರ್ಯಕರ್ತೆಯರು ಮಾತ್ರ ಸಕ್ರಿಯರಾಗಿದ್ದು, ಕರ್ತವ್ಯದ ಒತ್ತಡ ಹೆಚ್ಚುತ್ತಿದೆ.

ಪ್ರಕರಣ ದಾಖಲು: ಕರೊನಾದಿಂದ ಮೃತಪಟ್ಟ ವ್ಯಕ್ತಿಯ ಶವಸಂಸ್ಕಾರಕ್ಕೆ ಅಡ್ಡಿ ಪಡಿಸಲೆತ್ನಿಸಿದ ತಾಲೂಕಿನ ಸಂಗಾಪುರದ 18 ಜನರ ವಿರುದ್ಧ ಕರ್ತವ್ಯಕ್ಕೆ ಅಡ್ಡಿ ಆರೋಪದನ್ವಯ ಶುಕ್ರವಾರ ಪ್ರಕರಣ ದಾಖಲಿಸಲಾಗಿದೆ. ಸ.ನಂ.35ರ ಸರ್ಕಾರಿ ಭೂಮಿಯಲ್ಲಿ ಅಂತ್ಯಸಂಸ್ಕಾರಕ್ಕೆ ತೆರಳಿದಾಗ ಆರೋಪಿಗಳು ಅಡ್ಡಿಪಡಿಸಲೆತ್ನಿಸಿದರಲ್ಲದೆ ನಗರಸಭೆ ಜೆಸಿಬಿ ವಾಹನದ ಮೇಲೆ ಕಲ್ಲು ತೂರಾಟ ನಡೆಸಿದರು.

ಗ್ರಾಮಲೆಕ್ಕಿಗ ಆಸ್ಲಾಂಪಟೇಲ್ ನೀಡಿದ ದೂರಿನನ್ವಯ ಲಚಮಪ್ಪ, ಮಂಜುನಾಥ, ಪ್ರಶಾಂತ, ಕರಿಯಪ್ಪ, ಬಸಪ್ಪ, ರಾಘವೇಂದ್ರ, ಮಹಾದೇವಪ್ಪ, ಹುಲ್ಲೇಶ,ಈಶಪ್ಪ, ಹನುಮಂತ, ಯಲ್ಲಪ್ಪ, ಬಾಷಾಹೂಗಾರ್, ಕಳಕಪ್ಪ, ದುರುಗಪ್ಪ, ಹುಸೇನಪ್ಪ, ಶಂಕರ, ರಮೇಶ್, ಯಮನೂರನಾಯಕ ವಿರುದ್ಧ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net