102 ಕೆಜಿ ಜೋಳದ ಚೀಲ ಹೊತ್ತು ಬೆಟ್ಟ ಹತ್ತಿದ ರೈತ, ಅಂಜನಾದ್ರಿ ಗಿರಿ ಏರಿ ಶ್ರೀ ಆಂಜನೇಯ ಸ್ವಾಮಿಗೆ ವಿಶೇಷ ಹರಕೆ ಸಲ್ಲಿಕೆ

ANJANADRI BETTA
ಗಂಗಾವತಿ ತಾಲೂಕಿನ ಹನುಮನಹಳ್ಳಿಯ ಐತಿಹಾಸಿಕ ಪ್ರಸಿದ್ಧ ಅಂಜನಾದ್ರಿ ಬೆಟ್ಟವನ್ನು 102 ಕೆಜಿ ಜೋಳದ ಚೀಲದೊಂದಿಗೆ ಹತ್ತುತ್ತಿರುವ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಹುನ್ನೂರಿನ 61 ವರ್ಷ ವಯಸ್ಸಿನ ನಿಂಗಪ್ಪ ಸಿದ್ದಪ್ಪ ಸವಣೂರು.
Published on

ಗಂಗಾವತಿ: ಬಾಗಲಕೋಟೆ ಮೂಲದ ಹಿರಿಯ ರೈತರೊಬ್ಬರು 102 ಕೆಜಿ ಜೋಳದ ಚೀಲವನ್ನು ಹೊತ್ತು ಹನುಮನ ಜನ್ಮಸ್ಥಳ ಗಂಗಾವತಿ ತಾಲೂಕಿನ ಹನುಮನಹಳ್ಳಿಯ ಐತಿಹಾಸಿಕ ಅಂಜನಾದ್ರಿ ಬೆಟ್ಟವನ್ನು ಮಂಗಳವಾರ ಹತ್ತುವ ಮೂಲಕ ಹರಕೆ ಸಲ್ಲಿಸಿದ್ದಾರೆ.

ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಹುನ್ನೂರಿನ 61 ವರ್ಷದ ನಿಂಗಪ್ಪ ಸಿದ್ದಪ್ಪ ಸವಣೂರು ಜೋಳದ ಚೀಲ ಹೊತ್ತು ಬೆಟ್ಟ ಹತ್ತುವ ಮೂಲಕ ವಿನೂತನ ರೀತಿಯ ಹರಕೆ ಸಲ್ಲಿಸಿದ್ದಾರೆ. ಎಲ್ಲಿಯೂ ನಿಲ್ಲದೇ 1 ಗಂಟೆ 2 ನಿಮಿಷದಲ್ಲಿ 575 ಮೆಟ್ಟಿಲುಗಳನ್ನು ಹತ್ತಿದ್ದು, ಜತೆಗಿದ್ದವರೂ ಹುರುಪು ತುಂಬುವ ಮೂಲಕ ಸಾಥ್ ನೀಡಿದ್ದಾರೆ. ಚೀಲವನ್ನು ದೇವಾಲಯಕ್ಕೆ ಸಮರ್ಪಿಸಿ, ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಈ ಬಗ್ಗೆ ನಿಂಗಪ್ಪ ಸಿದ್ದಪ್ಪ ಸವಣೂರು ಪ್ರತಿಕ್ರಿಯಿಸಿ, ಈ ಹಿಂದೆ ದೇವಾಲಯಕ್ಕೆ ಬಂದಿದ್ದು, ಏನಾದರೂ ಹರಕೆ ಸಲ್ಲಿಸಬೇಕೆಂಬ ಸಂಕಲ್ಪದೊಂದಿಗೆ ವಾಪಸ್ಸಾಗಿದ್ದೆ. ಎರಡು ವರ್ಷದ ನಂತರ ಕ್ವಿಂಟಾಲ್ ಭರ್ತಿ ಚೀಲವನ್ನು ಹೊತ್ತು ಹರಕೆ ಸಲ್ಲಿಸಿದ್ದೇನೆ ಎಂದರು. ಭಕ್ತರ ಬಳಗದ ಪ್ರತಿನಿಧಿಗಳಾದ ಶ್ರೀಶೈಲ ಸವಣೂರು, ಶಿವಾನಂದ, ಗುರುಲಿಂಗಪ್ಪ ಯರಗುದ್ರಿ, ಹನುಮಂತ ಮುಧೋಳ, ರವಿ ಮುಧೋಳ, ಚನ್ನಬಸಪ್ಪ ಸವದಿ, ಶ್ರೀಶೈಲ ತೆಲಿ, ಚನ್ನಬಸವ ಸವದಿ, ಪಂಡಿತ ಸಿ.ಕೋರನವರ್, ನಿಂಗಪ್ಪ ಕೋರನವರ್, ಸುಭಾಷ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net