

ಬೆಳಗಾವಿ: ಅಭಿಷೇಕ ಅಲಾಯ್ಸ ಸಹಯೋಗದೊಂದಿಗೆ ಬೆಳಗಾವಿಯ ರಂಗಸಂಪದದ ‘ಗಂಗಾವತರಣ ನಾಟಕ’ ಡಿ.25ರಂದು ಸಂಜೆ 6 ಗಂಟೆಗೆ ಕೋನವಾಳ ಬೀದಿಯಲ್ಲಿರುವ ಲೋಕಮಾನ್ಯ ರಂಗಮಂದಿರದಲ್ಲಿ ಪ್ರದರ್ಶನಗೊಳ್ಳಲಿದೆ ಎಂದು ರಂಗಸಂಪದ ಅಧ್ಯಕ್ಷ ಡಾ. ಅರವಿಂದ ಕುಲಕರ್ಣಿ ತಿಳಿಸಿದರು.
ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನ ರಂಗಸೌರಭ ನಾಟಕ ತಂಡ ರಂಗಪ್ರದರ್ಶನ ನೀಡುತ್ತಿದೆ. ರಾಜೇಂದ್ರ ಕಾರಂತರ ರಂಗರೂಪ, ವಿನ್ಯಾಸ ಮತ್ತು ನಿರ್ದೇಶನದ ಅಪರೂಪದ ನಾಟಕ ಇದಾಗಿದೆ. ರಂಗಾಸಕ್ತರು ನಾಟಕ ಪ್ರದರ್ಶನ ನೋಡಿ ಪ್ರೋತ್ಸಾಹಿಸಬೇಕು ಎಂದರು.
15 ವರ್ಷಗಳ ಹಿಂದೆ 65 ಕಲಾವಿದರನ್ನು ಸೇರಿಸಿಕೊಂಡು ಈ ನಾಟಕದ ನೂರಾರು ಪ್ರದರ್ಶನ ನೀಡಿದ್ದಾರೆ. ಆದರೆ, ಈ ನಾಟಕದಲ್ಲಿದ್ದ ಬಹಳಷ್ಟು ಕಲಾವಿದರು ದೂರದರ್ಶನ ಮತ್ತು ಚಲನಚಿತ್ರ ಸೇರಿಕೊಂಡಿದ್ದರಿಂದ 2-3 ವರ್ಷಗಳ ಕಾಲ ಈ ನಾಟಕ ನಿಂತಿತ್ತು. ಈಗ ಮತ್ತೆ ಹೊಸ ಕಲಾವಿದರನ್ನು ಸೇರಿಸಿಕೊಳ್ಳುವ ಮೂಲಕ ಆ ನಾಟಕಕ್ಕೆ ಕಾರಂತರು ಮರುಜೀವ ಕೊಟ್ಟಿದ್ದಾರೆ ಎಂದರು.
ವರಕವಿ ಬೇಂದ್ರೆಯವರ ಕವನ ಮತ್ತು ಜೀವನ ಘಟನೆಗಳನ್ನಾಧರಿಸಿದ ಗಂಗಾವತರಣ ನಾಟಕದ ಮುಖ್ಯ ಅಂಶವೆಂದರೆ ಬೇಂದ್ರೆ ಅವರ ಪದ್ಯಗಳಿಗೆ ಸಂಗೀತ ಅಳವಡಿಸಿ ಅದಕ್ಕೆ ತಕ್ಕಂತೆ ನೃತ್ಯ ಸಂಯೋಜನೆ ಮಾಡಿರುವುದು. ಇದರಿಂದ ಈ ನಾಟಕವನ್ನು ಸಂಗೀತ ನೃತ್ಯ ನಾಟಕವೆಂದೂ ಕರೆಯಬಹುದು ಎಂದು ಹೇಳಿದರು.
ಚಿದಾನಂದ ವಾಳಕೆ, ರಾಮಚಂದ್ರ ಕಟ್ಟಿ, ಗುರುರಾಜ ಕುಲಕರ್ಣಿ, ಎ.ಎಂ.ಕುಲಕರ್ಣಿ ಸುದ್ದಿಗೋಷ್ಠಿಯಲ್ಲಿದ್ದರು.