ಗೌರಿಸುತನ ವಿದಾಯಕ್ಕೆ ‘ಗಂಗಾರತಿ’ ಮೆರುಗು

19 LXR
Published on

ಲಕ್ಷ್ಮೇಶ್ವರ: ಪಟ್ಟಣದ ಸೊಪ್ಪಿನಕೇರಿ ಯುವಕ ಮಂಡಳ ಪ್ರತಿಷ್ಠಾಪನೆ ಮಾಡಿದ್ದ ಗಣೇಶ ಮೂರ್ತಿಯನ್ನು ಗುರುವಾರ ಸಂಪ್ರದಾಯಬದ್ಧವಾಗಿ ವಿಸರ್ಜನೆ ಮಾಡಲಾಯಿತು. ಮಹಾಮಂಗಳಾರತಿ ಮತ್ತು ಗಂಗಾರತಿಯನ್ನು ಸಾವಿರಾರು ಜನರು ಕಣ್ತುಂಬಿಕೊಂಡರು.

ಸೊಪ್ಪಿನಕೇರಿ ಯುವಕ ಮಂಡಳಿಯವರು ಸುಮಾರು 18- 20 ಅಡಿಯಷ್ಟು ದೊಡ್ಡದಾದ ಗಣೇಶನ ಸುಂದರ ಮೂರ್ತಿ ಪ್ರತಿಷ್ಠಾಪಿಸಿದ್ದರು. ನಿತ್ಯ ನೂರಾರು ಜನರು ಗಣೇಶನ ದರ್ಶನ ಪಡೆದುಕೊಂಡಿದ್ದರು. ಗಣೇಶ ವಿಸರ್ಜನೆ ಕಾರ್ಯಕ್ರಮವನ್ನೂ ಅಷ್ಟೇ ಅಚ್ಚುಕಟ್ಟಾಗಿ ಸಿದ್ಧ್ದಪಡಿಸಿ ಹುಬ್ಬಳ್ಳಿಯ ಸಿದ್ದಾರೂಢ ಮಠದ ಯುವಪಡೆಯನ್ನು ಮೆರವಣಿಗೆಗೆ ಆಹ್ವಾನಿಸಿದ್ದರು. ಗುರುವಾರ ರಾತ್ರಿ ಪೇಠೆಯ ಮಧ್ಯಭಾಗದಲ್ಲಿ ಗಂಗಾರತಿ ಮತ್ತು ಮಹಾಮಂಗಳಾರತಿ ನಡೆಸಿದ ಅಪೂರ್ವ ದೃಶ್ಯವನ್ನು 8-10 ಸಾವಿರ ಜನರು ರಸ್ತೆಯ ಇಕ್ಕೆಲಗಳಲ್ಲಿ ನಿಂತು ವೀಕ್ಷಿಸಿದರು. ಗಂಗಾರತಿ, ಮಹಾಮಂಗಳಾರತಿಗೆ ತಕ್ಕಂತೆ ಗಣೇಶನ ಸ್ತುತಿಗಳು ಡಿಜೆಯಿಂದ ತೇಲಿಬಂದವು. ಸಾವಿರಾರು ಜನರಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಗಣೇಶ ಮೂರ್ತಿಯ ಮೆರವಣಿಗೆ ವಿಭಿನ್ನ ಅನುಭವ ನೀಡಿತು. ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಸಾವಿರಾರು ಜನರು ಡಿಜೆ ಅಬ್ಬರಕ್ಕೆ ಕುಣಿದು ಕುಪ್ಪಳಿಸಿದರು. ಡಿಎಸ್‌ಪಿ ಮುರ್ತುಜಾ ಖಾದ್ರಿ, ಡಿಎಆರ್ ಡಿಎಸ್‌ಪಿ, ಸಿಪಿಐ ನಾಗರಾಜ ಮಾಡಳ್ಳಿ ಸ್ಥಳದಲ್ಲಿ ಹಾಜರಿದ್ದು ಮಾರ್ಗದರ್ಶನ ಮಾಡಿದರು. ಪಿಎಸ್‌ಐ ನಾಗರಾಜ ಗಡಾದ, ಕ್ರೈಂ ಪಿಎಸ್‌ಐ ಟಿ.ಕೆ. ರಾಥೋಡ ಹಾಗೂ ಪೊಲೀಸ್ ಸಿಬ್ಬಂದಿ ಬಿಗಿ ಬಂದೋಬಸ್ತ್ ಕೈಗೊಂಡಿದ್ದರು.

ಸಾರ್ವಜನಿಕ ಮಹಾಮಂಡಳದ ಅಧ್ಯಕ್ಷ ಈರಣ್ಣ ಪೂಜಾರ, ಸುನೀಲ ಮಹಾಂತಶೆಟ್ಟರ, ವಿಜಯ ಹತ್ತಿಕಾಳ, ಚನ್ನಪ್ಪ ಚಿಂಚಲಿ, ಬಂಗಾರೆಪ್ಪ ಮುಳಗುಂದ, ಈರಣ್ಣ ಮುಳಗುಂದ, ಗಂಗಾಧರ ಮೆಣಸಿನಕಾಯಿ, ಅಮಿತ್ ಗುಡಗೇರಿ, ವಿಜಯ ಮೆಕ್ಕಿ, ಭರಮಪ್ಪ ಕೊಡ್ಲಿ, ಆದೇಶ ಸವಣೂರ, ಸೋಮು ನರೇಗಲ್ಲ, ಶಿವು ಮೆಕ್ಕಿ ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net