ಮಳೆಗಾಲದವರೆಗೂ ಮಂಗಳೂರಿಗಿಲ್ಲ ನೀರಿನ ಸಮಸ್ಯೆ : ಮೇಯರ್ ಮನೋಜ್ ಕುಮಾರ್ ವಿಶ್ವಾಸ

New Project (7)
Published on

ಬಂಟ್ವಾಳ: ತುಂಬೆ ವೆಂಟೆಡ್ ಡ್ಯಾಂನಲ್ಲಿ ಪ್ರಸ್ತುತ 6 ಮೀಟರ್ ನೀರಿನ ಸಂಗ್ರಹವಿದ್ದು ಮುಂದಿನ ಮಳೆಗಾಲದವರೆಗೆ ಮಂಗಳೂರಿಗೆ ಕುಡಿಯುವ ನೀರಿನ ಕೊರತೆ ಬರುವುದಿಲ್ಲ ಎಂದು ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಮನೋಜ್ ಕುಮಾರ್ ಹೇಳಿದರು.

ಮಂಗಳೂರು ಮಹಾನಗರ ಪಾಲಿಕೆಗೆ ನೀರು ಪೂರೈಕೆಯಾಗುವ ತುಂಬೆ ವೆಂಟೆಡ್ ಡ್ಯಾಂನಲ್ಲಿ ಮಂಗಳವಾರ ಗಂಗಾಪೂಜೆ ನೆರವೇರಿಸಿ, ಬಳಿಕ ನದಿಗೆ ಬಾಗಿನ ಅರ್ಪಿಸಿ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಈಗಿನ ನೀರಿನ ಮಟ್ಟ ಗಮನಿಸಿದಾಗ ಏಪ್ರಿಲ್ ಅಂತ್ಯದವರೆಗೆ ಸಾಕಾಗಬಹುದು. ಈ ಮಧ್ಯೆ ಅಕಾಲಿಕ ಮಳೆ ಬಂದರೆ ನೀರಿನ ಒಳಹರಿವು ಹೆಚ್ಚಾಗಿ ನೀರಿನ ಸಂಕಷ್ಟ ಎದುರಾಗುವ ಸಾಧ್ಯತೆ ಕಡಿಮೆ ಇದೆ. ಮೇಲ್ಭಾಗದ ಡ್ಯಾಂನಲ್ಲೂ ನೀರಿನ ಸಂಗ್ರಹ ಇರುವುದರಿಂದ ಈ ವರ್ಷ ರೇಷನಿಂಗ್ ಮಾಡುವ ಅವಶ್ಯಕತೆಯೂ ಬರಲಾರದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವಿರೋಧ ಪಕ್ಷದ ನಾಯಕ ಅನಿಲ್ ಮಾತನಾಡಿ, 2003 ಹಾಗೂ 2019ರಲ್ಲಿ ನೀರಿನ ಅಭಾವ ಉಂಟಾಗಿತ್ತು. ಈ ಬಾರಿ ನೀರಿನ ಒಳಹರಿವು ಉತ್ತಮವಾಗಿದ್ದು ನೀರಿನ ಅಭಾವ ಉಂಟಾಗುವ ಸಾಧ್ಯತೆ ಕಡಿಮೆ ಎಂದರು.

ಮನಪಾ ಆಯುಕ್ತ ರವಿಚಂದ್ರ ನಾಯಕ್ ಮಾತನಾಡಿ, ದೈವ ಶಕ್ತಿಯ ಅನುಗ್ರಹದಿಂದ ನೀರಿನ ಕ್ಷಾಮ ಉಂಟಾಗದು. ಮುಂದಿನ 3 ತಿಂಗಳು ಸವಾಲಿನ ಸಮಯವಾಗಿದ್ದು ಜನರಿಗೆ ಯಾವುದೇ ರೀತಿಯ ಕುಂದು-ಕೊರತೆ ಬಾರದಂತೆ ಕೆಲಸ ನಿರ್ವಹಿಸುವ ಜವಾಬ್ದಾರಿ ಇದೆ ಎಂದರು.

ಉಪಮೇಯರ್ ಭಾನುಮತಿ, ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ, ಮಾಜಿ ಮೇಯರ್‌ಗಳಾದ ಶಶಿಧರ ಹೆಗ್ಡೆ, ಭಾಸ್ಕರ ಮೊಯಿಲಿ, ಜಯಾನಂದ ಅಂಚನ್, ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕದ್ರಿ ಮನೋಹರ ಶೆಟ್ಟಿ, ಸುಮಿತ್ರಾ, ವೀಣಾ ಮಂಗಳ, ಸರಿತಾ ಶಶಿಧರ್ ಉಪಸ್ಥಿತರಿದ್ದರು. ಮನಪಾ ಸದಸ್ಯರು, ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು. ರಾಜೇಶ್ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net