ಚುನಾವಣೆಯಲ್ಲಿ ಗಂಗಾಮತಸ್ಥರಿಗೆ ಆದ್ಯತೆ ನೀಡಿ

Published on

ಹಾವೇರಿ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಸೇರಿದಂತೆ ಎಲ್ಲ ರಾಜಕೀಯ ಪಕ್ಷಗಳು ಗಂಗಾಮತಸ್ಥ ಸಮಾಜದ ಮುಖಂಡರಿಗೆ ಆದ್ಯತೆಯ ಮೇರೆಗೆ ಟಿಕೆಟ್ ನೀಡಬೇಕು ಎಂದು ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಜಿಲ್ಲಾ ಗಂಗಾಮತಸ್ಥರ ಸಂಘದ ಜಿಲ್ಲಾಧ್ಯಕ್ಷ ಮಂಜುನಾಥ ಬೋವಿ ಒತ್ತಾಯಿಸಿದರು. ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ನಮ್ಮ ಸಮಾಜ 45 ಲಕ್ಷ ಜನಸಂಖ್ಯೆ ಹೊಂದಿದ್ದರೂ ರಾಜಕೀಯ ಪಕ್ಷಗಳು ಈ ಹಿಂದೆ ಕೇವಲ ಇಬ್ಬರು, ಮೂವರಿಗೆ ಮಾತ್ರ ಟಿಕೆಟ್ ನೀಡುತ್ತಿದ್ದವು. ಇದರಿಂದ ಸಮಾಜಕ್ಕೆ ಅನ್ಯಾಯವಾಗಿದ್ದು, ಈ ಬಾರಿ ಕನಿಷ್ಠ ಹತ್ತು ಟಿಕೆಟ್‌ಗಳನ್ನು ಸಮಾಜದವರಿಗೆ ನೀಡಬೇಕು ಎಂದರು.
ಜಿಲ್ಲೆಯಲ್ಲಿ ಒಂದೂವರೆ ಲಕ್ಷ ಮತದಾರರು ಇದ್ದು, ಹಾನಗಲ್ಲ ಕ್ಷೇತ್ರವೊಂದರಲ್ಲೇ 40 ಸಾವಿರ ಮತದಾರರಿದ್ದಾರೆ. ರಾಜಕೀಯ ನಾಯಕರು ಸಾಮಾಜಿಕ ನ್ಯಾಯ ಎಂದು ಭಾಷಣಕ್ಕೆ ಮಾತ್ರ ಸೀಮಿತಗೊಳಿಸದೇ ನಮ್ಮ ಸಮಾಜಕ್ಕೆ ನ್ಯಾಯ ದೊರಕಿಸಿಕೊಡಬೇಕು. ಇಲ್ಲದಿದ್ದಲ್ಲಿ ಇದೀಗ ನಾವು ಸಂಘಟಿತರಾಗಿದ್ದು, ಸಮುದಾಯಕ್ಕೆ ಆದ್ಯತೆ ನೀಡದಿದ್ದಲ್ಲಿ ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲಿ ಸಮಾಜದ ಮುಖಂಡರು ಪಕ್ಷೇತರರಾಗಿ ಕಣಕ್ಕೆ ಇಳಿದು ಶಕ್ತಿ ಪ್ರದರ್ಶನ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಮಾಜದ ಮುಖಂಡರಾದ ಶಂಕರ ಸುತಾರ, ನಾಗೇಂದ್ರಪ್ಪ ತುಮರಿಕೊಪ್ಪ, ರಾಜು ಜಾಡಮಲಿ, ಅಣ್ಣಪ್ಪ ಚಾಕಾಪುರ, ಚಂದ್ರಕಾಂತ ಕುಂದೂರು, ಹೊನ್ನಪ್ಪ ಬಾಸೂರ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net