

ಚಿಕ್ಕೋಡಿ: ಶಿಕ್ಷಕರ ಮಾರ್ಗದರ್ಶನದಿಂದ ಸಾಧನೆ ಸುಲಭ ಎಂದು ಸಿದ್ಧಲಿಂಗ ದೇವರು ಹೇಳಿದರು. ಇಲ್ಲಿನ ಸಿಎಲ್‌ಇ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳ ಬಳಗದಿಂದ ಶಿಕ್ಷಕರ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ಬಿ.ಸಿ.ಗಂಗಾಲ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
ಸಾಹಿತಿ ಡಾ.ವಿ.ಎಸ್ ಮಾಳಿ ಮಾತನಾಡಿ, ಶಿಕ್ಷಕರು ಬಿ.ಸಿ ಗಂಗಾಲ ಗುರುಗಳ ಆದರ್ಶಗಳನ್ನು ರೂಢಿಸಿಕೊಳ್ಳಬೇಕು ಎಂದರು. ಶಿವಾಜಿ ಕೇಸರಕರ ಮಾತನಾಡಿ, ಮಕ್ಕಳ ಪ್ರತಿಭೆ ಹೊರಬರಲು ಶಿಕ್ಷಕರ ಮಾರ್ಗದರ್ಶನ ಅವಶ್ಯ ಎಂದರು.
ಶಿಕ್ಷಕ ಶಿವಾಜಿ ಕೇಸರಕರ ಅವರಿಗೆ ಬಿ.ಸಿ ಗಂಗಾಲ ಶಿಕ್ಷಕ ಪ್ರಶಸ್ತಿ ವಿತರಿಸಲಾಯಿತು. ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಗ್ರಂಥಾರ್ಪಣೆ ಮಾಡಲಾಯಿತು. ಸಿಎಲ್‌ಇ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳ ಬಳಗದ ಜಂಟಿ ಕಾರ್ಯದರ್ಶಿ ಡಾ.ದರ್ಶನ ಪೂಜಾರಿ, ಕಾರ್ಯದರ್ಶಿ ಮಹೇಶ ಭಾತೆ, ಅಧ್ಯಕ್ಷರಾದ ಶ್ರೀಶೈಲ ಹೆಡಗೆ, ಸಾಗರ ಬಿಸ್ಕೋಪ್ ಇತರರಿದ್ದರು.