

ತುಮಕೂರು : ಗಂಗಾ ಕಲ್ಯಾಣ ಯೋಜನೆಯಲ್ಲಿ ಪರಿಶಿಷ್ಟ ಜಾತಿ, ಪಂಗಡಕ್ಕೆ ಉಚಿತ ಕೊಳವೆಬಾವಿ ಕೊರೆಸಿಕೊಡಲಾಗುವುದು ಎಂದು ನಂಬಿಸಿ ರೈತರಿಂದ ಲಕ್ಷಾಂತರ ರೂ. ಪಡೆದು ವಂಚಿಸಲಾಗುತ್ತಿದೆ.
ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರ ಸಣ್ಣ ನೀರಾವರಿ ಇಲಾಖೆ ಹೆಸರಿನಲ್ಲಿ 5 ಲಕ್ಷ ರೂ. ಮೌಲ್ಯದ ಕೊಳವೆಬಾವಿ, ಮೋಟರ್, ಪಂಪ್ ಹಾಗೂ ವಿದ್ಯುದ್ದೀಕರಣ ಮಾಡಿಕೊಡುವ ನಕಲಿ ಕಾರ್ಯಾದೇಶ ಪತ್ರ ಸೃಷ್ಟಿಸಿಕೊಂಡು ಗುಬ್ಬಿ, ಚಿಕ್ಕನಾಯಕನಹಳ್ಳಿ ತಾಲೂಕಿನ 300ಕ್ಕೂ ಹೆಚ್ಚು ರೈತರಿಂದ 4.50ಕೋಟಿ ರೂ. ವಂಚಿಸಿದ್ದು ರೈತರಿಗೆ ತಡವಾಗಿ ಮನವರಿಕೆಯಾಗುತ್ತಿದೆ.
ಗುಬ್ಬಿ ತಾಲೂಕಿನ ಪರಿಶಿಷ್ಟ ಜಾತಿ ಹಾಗೂ ಪಂಗಡದ ಲಾನುಭವಿಗಳನ್ನು ಗುರಿಯಾಗಿಸಿಕೊಂಡು ಸಣ್ಣ ನೀರಾವರಿ ಇಲಾಖೆ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಹೆಸರಿನಲ್ಲಿ ನಕಲಿ ಕಾರ್ಯದೇಶ ಸೃಷ್ಟಿಸಿ ರೈತರನ್ನು ನಂಬಿಸಲಾಗುತ್ತಿದೆ. ಈ ಪತ್ರದಲ್ಲಿ ಜಿ.ಎಸ್.ಪವನ್ ಎಂಬುವವರಿಗೆ ಕಾಮಗಾರಿ ಗುತ್ತಿಗೆ ನೀಡಲಾಗಿದ್ದು ಲಾನುಭವಿಗಳು ಸಹಕಾರ ನೀಡಬೇಕು ಎಂದು ಮನವಿ ಮಾಡಲಾಗಿದೆ.
ಡ್ರಿಲ್ಲಿಂಗ್ 600 ಅಡಿ, ಕೇಸಿಂಗ್ ಪೈಪ್ 60 ಅಡಿ, ಪಂಪ್‌ಸೆಟ್ ಮತ್ತು ವಿದ್ಯುತ್ ಸಲಕರಣೆ ಒದಗಿಸಲು 3.50 ಲಕ್ಷರೂ. ವೆಚ್ಚದಲ್ಲಿ ಕಾಮಗಾರಿ ನಡೆಸಲು ಅನುಮತಿ ನೀಡಲಾಗಿದ್ದು, 2021 ಏ.30ರೊಳಗೆ ಕಾಮಗಾರಿ ಪೂರ್ಣಗೊಳಿಸಬೇಕು ಹಾಗೂ ಕಾಮಗಾರಿ ಪೂರ್ಣಗೊಳಿಸಿ ರೈತರಿಂದ ನಿರಾಕ್ಷೇಪಣಾ ಪತ್ರ ಪಡೆಯಬೇಕು ಎಂದು ಬರೆದು ರೈತರನ್ನು ನಂಬಿಸಲಾಗುತ್ತಿದೆ.
ಏ.8ರಿಂದ ಜಿಲ್ಲೆಯಲ್ಲಿರುವ ವಂಚಕರು: ಸಣ್ಣ ನೀರಾವರಿ ಇಲಾಖೆ ಹೆಸರಿನಲ್ಲಿ ನಕಲಿ ಪತ್ರವಿಟ್ಟುಕೊಂಡು ತುರುವೇಕೆರೆ, ಗುಬ್ಬಿ, ತಿಪಟೂರು, ಚಿಕ್ಕನಾಯಕನಹಳ್ಳಿ ಹಾಗೂ ಶಿರಾ ತಾಲೂಕಿನಲ್ಲಿ ಈ ವಂಚಕರ ತಂಡ ಏ.8ರಿಂದ ಸುತ್ತುತ್ತಿದ್ದು, ಏ.30ರವರೆಗೂ ಜನರಿಂದ ಲಕ್ಷಾಂತರ ರೂ. ಸಂಗ್ರಹಿಸಿ ಒಂದೇ ಬಾರಿಗೆ ಜಿಲ್ಲೆಯಿಂದ ಕಾಲ್ಕೀಳುವ ಮಾಸ್ಟರ್ ಪ್ಲ್ಯಾನ್ ಇಟ್ಟುಕೊಂಡಿದೆ.
ನಿಮ್ಮೂರಿಗೂ ಬಂದಿರಬಹುದು ಎಚ್ಚರ!: ಗಂಗಾಕಲ್ಯಾಣ ಯೋಜನೆಯ 3.50 ಲಕ್ಷ ರೂ. ಮೌಲ್ಯದ ಕೊಳವೆಬಾವಿ ಕೊರೆಯಲು 1.50 ಲಕ್ಷ ರೂ. ಲಂಚ ಎಂದು ಸ್ಥಳೀಯರೊಬ್ಬರ ಮೂಲಕ ರೈತರನ್ನು ನಂಬಿಸುವ ವಂಚಕರು ಒಂದು ಊರಿನಲ್ಲಿ ಕನಿಷ್ಠ 10ರಿಂದ 20 ರೈತರಿಂದ ಹಣ ಪೀಕುತ್ತಿದ್ದಾರೆ. ಒಂದಿಬ್ಬರಿಗೂ ಕೊಳವೆಬಾವಿಯನ್ನು ಕೊರೆದು ನಂಬಿಕೆ ಹುಟ್ಟಿಸಿ ಉಳಿದವರಿಂದ ಹಣ ಸಂಗ್ರಹಿಸುತ್ತಿದ್ದಾರೆ.
ಒಮ್ಮೆಲೆ ಹೆಚ್ಚು ಜನರಿಂದ ಹಣ ಸಂಗ್ರಹವಾದ ನಂತರ ಜಿಲ್ಲೆಯಿಂದ ಕಾಲ್ಕೀಳುವ ‘ಉಂಡೂ ಹೋದ, ಕೊಂಡೂ ಹೋದ’ ಯೋಜನೆ ರೂಪಿಸಿದ್ದು, ರೈತರು ಎಚ್ಚರ ವಹಿಸಬೇಕು ಎಂದು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ರೈತರಲ್ಲಿ ಮನವಿ ಮಾಡಿದ್ದಾರೆ.
ಹಣ ಕೇಳಿದರೆ ಸಂಪರ್ಕಿಸಿ : ನಿಮ್ಮ ಗ್ರಾಮಗಳಿಗೂ ಇಂತಹ ವಂಚಕರು ಭೇಟಿ ನೀಡಿ ಹಣ ನೀಡಿದರೆ ಕೊಳವೆಬಾವಿ ಕೊರೆಯುವುದಾಗಿ ನಂಬಿಸಬಹುದು. ಈ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳ ಗಮನಕ್ಕೆ ಕೂಡಲೇ ತನ್ನಿ. ಹೆಚ್ಚಿನ ಮಾಹಿತಿ ಅಗತ್ಯವಿದ್ದರೆ ಸಣ್ಣ ನೀರಾವರಿ ಇಲಾಖೆ ಕಾರ್ಯನಿರ್ವಾಹಕ ಇಂಜಿನಿಯರ್ ರವಿ ಸೂರನ್ ಮೊ.9448433024 ಅಥವಾ ಖುದ್ದು ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರನ್ನು ಸಂಪರ್ಕಿಸಿ.