

ರೋಣ: ತಾಲೂಕಿನ ಬಾಚಲಾಪುರ ಗ್ರಾಮದಲ್ಲಿ ಮಹಿಳೆಯರು ಮಳೆಗಾಗಿ ಪ್ರಾರ್ಥಿಸಿ ಕೆರೆಯ ದಂಡೆ ಮೇಲೆ ಗಂಗಾಪೂಜೆ ಸಲ್ಲಿಸಿ ಊರಲ್ಲಿ ಗುರ್ಜಿ ಆಟ ಆಡಿದರು.
ಹಳ್ಳಿಗಳಲ್ಲಿ ಮಳೆಯಾಗದೇ ಇದ್ದಾಗ ಗುರ್ಜಿ ಆಡುವುದು ಸಾಮಾನ್ಯ. ಗುರ್ಜಿ ಆಡಿ ಹೋದ ಏಳೆಂಟು ದಿನಗಳಲ್ಲಿ ಮಳೆ ಬರುತ್ತದೆ ಎಂಬ ಬಲವಾದ ನಂಬಿಕೆ ಇಲ್ಲಿನ ಜನರಲ್ಲಿದೆ. ರೊಟ್ಟಿ ಬೇಯಿಸುವ ಹೆಂಚಿನ ಮೇಲೆ ಸಗಣಿಯಿಂದ ಗುರ್ಜಿ ತಯಾರಿಸಿ (ಮೂರ್ತಿ ತರಹ) ಗರಿಕೆಯಿಂದ ಸಿಂಗರಿಸುತ್ತಾರೆ. ಅದನ್ನು ಹೆಂಚಿನ ಮೇಲಿಟ್ಟುಕೊಂಡು, ತಲೆಯ ಮೇಲೆ ಹೊತ್ತು ಗ್ರಾಮದ ಓಣಿಗಳಲ್ಲಿ ತಿರುಗುತ್ತಾರೆ. ಆಗ ಮನೆಯವರು ತಂಬಿಗೆಯಲ್ಲಿ ನೀರು ತಂದು ಗುರ್ಜಿಯ ಮೇಲೆ ಸುರಿಯುತ್ತಾರೆ.
ನೀರು ಹಾಕುವಾಗ ಗುರ್ಜಿ ಹೊತ್ತುಕೊಂಡ ಮಕ್ಕಳು ಗರಗರನೇ ತಿರುಗುತ್ತಾರೆ. ಆಗ ಪಕ್ಕದಲ್ಲಿನ ಯುವಕರು, ಮಕ್ಕಳು, ಮಹಿಳೆಯರು ಸೇರಿ ಗುರ್ಜಿಯ ಜಾನಪದ ಹಾಡು ಹಾಡುತ್ತಾರೆ. ನಂತರ ಗುರ್ಜಿಯಿಂದ ಸಂಗ್ರಹಿಸಿ ಗಿರಣಿಯಲ್ಲಿ ಜೋಳ ಒಡೆಸುತ್ತಾರೆ. ಊರ ದೇಗುಲದ ಆವರಣದಲ್ಲಿಯೇ ಜೋಳದ ನುಚ್ಚು ಸಾರು ತಯಾರಿಸಿ ಮೇಘರಾಜನಿಗೆ ಪೂಜೆ, ಪುನಸ್ಕಾರ ಮಾಡುತ್ತಾರೆ. ಈ ಸಂದರ್ಭದಲ್ಲಿ ನೂರಾರು ಮಹಿಳೆಯರು ಗಂಗಾ ಪೂಜೆ ನೆರವೇರಿಸಿದರು.