ಕೊಡ್ಲಿಪೇಟೆ ನಂದಿಪುರ ಕೆರೆಗೆ ಬಾಗಿನ ಅರ್ಪಣೆ

18ss2swamijigalu bagina arpane
Published on

ಗಂಗಾಪೂಜೆ, ಗಂಗಾರತಿ ನೆರವೇರಿಸಿದ ಮಾತೆಯರು
ಶನಿವಾರಸಂತೆ: ಕೊಡಗಿನ ಕುಲದೇವತೆ ಕಾವೇರಿ ಮಾತೆ ತಲಕಾವೇರಿಯಲ್ಲಿ ತೀಥೋದ್ಭವಗೊಂಡ ಸಂದರ್ಭದಲ್ಲಿ ಸಮೀಪದ ಕೊಡ್ಲಿಪೇಟೆ ನಂದಿಪುರ ಕೆರೆಗೆ ಬಾಗಿನ ಅರ್ಪಣೆ ಮತ್ತು ಗಂಗಾ ಪೂಜೆಯನ್ನು ನೆರವೇರಿಸಲಾಯಿತು.
ಕೊಡ್ಲಿಪೇಟೆ ಬಸವೇಶ್ವರ ದೇವಸ್ಥಾನ ಸೇರಿದಂತೆ ವಿವಿಧ ದೇವಸ್ಥಾನದ ಅರ್ಚಕರ ತಂಡ ಪೂಜಾ ವಿಧಿ, ವಿಧಾನ ನೆರವೇರಿಸಿತು. ಕೊಡ್ಲಿಪೇಟೆ ಕಲ್ಲುಮಠದ ಶ್ರೀ ಮಹಾಂತ ಸ್ವಾಮೀಜಿ, ಮನೆಹಳ್ಳಿ ಮಠದ ಶ್ರೀ ಮಹಾಂತ ಶಿವಲಿಂಗ ಸ್ವಾಮೀಜಿ, ಕಲ್ಲಳ್ಳಿ ಮಠದ ಶ್ರೀ ರುದ್ರಮುನಿ ಸ್ವಾಮೀಜಿ ಸಾನ್ನಿಧ್ಯದಲ್ಲಿ ನೆರವೇರಿದ ಕಾರ್ಯಕ್ರಮದಲ್ಲಿ ಮಂತ್ರ ಘೋಷದ ಸಹಿತ ಕೆರೆಗೆ ಬಾಗಿನ ಸಮರ್ಪಣೆ ಮಾಡಿದ್ದು ಗಮನ ಸೆಳೆಯಿತು. ಕೊಡಗು ವಿವಿ ಕುಲಪತಿ ಡಾ.ಅಶೋಕ ಆಲೂರ, ಕೊಡ್ಲಿಪೇಟೆ ಗ್ರಾ.ಪಂ.ಅಧ್ಯಕ್ಷೆ ಗೀತಾ ತ್ಯಾಗರಾಜ ಹಾಜರಿದ್ದು ಗಂಗಾಪೂಜೆ ನೆರವೇರಿಸಿದರು.
ಹೈಕೋರ್ಟ್ ವಕೀಲ ಎಚ್.ಎಸ್.ಚಂದ್ರಮೌಳಿ, ವೀರಶೈವ ಸಮಾಜದ ಮುಖಂಡರಾದ ಸಿದ್ದೇಶ್, ಮಂಜುಳಾ ಸುರೇಶ್, ಡಾ.ಉದಯ್‌ಕುಮಾರ್, ಕಾಂತರಾಜು, ಶರತ್‌ಶೇಖರ್, ಎಚ್.ಸಿ.ಯತೀಶ್, ಜಿ.ಆರ್.ಸುಬ್ರಮಣ್ಯ, ಕೆ.ಸಿ.ಪ್ರಸನ್ನ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಪಂಕಜಾ, ವಕೀಲ ಜಗದೀಶ್ ಇತರರು ಹಾಜರಿದ್ದರು.
ಪೂರ್ಣಕಂಭಸಹಿತ ಮೆರವಣಿಗೆ
ಕೊಡ್ಲಿಪೇಟೆ ಕಡೆಪೇಟೆ ಗಣಪತಿ ದೇವಸ್ಥಾನದಿಂದ ನಂದಿಪುರ ಕೆರೆ ವರೆಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಸದಸ್ಯರು ಮತ್ತು ಗಂಗಾ ವೀರಶೈವ ಸಮಾಜದ ಮಾತೆಯರು ಪೂರ್ಣಕಂಭ ಹೊತ್ತು ಸಾಗಿದ್ದು ಭಕ್ತಿ ಭಾವದ ಪ್ರತೀಕವಾಗಿತ್ತು. ಎಲ್ಲ ಮಹಿಳೆಯರೂ ಹಸಿರು ಬಣ್ಣದ ಸೀರೆ ಧರಿಸಿ ಮೆರವಣಿಗೆಯಲ್ಲಿ ಸಾಗಿಬಂದು ಕೆರೆಗೆ ಗಂಗಾರತಿ ನೆರವೇರಿಸಿದ್ದು ವಿಶೇಷವಾಗಿತ್ತು.
ಅಭಿವೃದ್ಧಿ ಕಾಮಗಾರಿ: ಕೊಡ್ಲಿಪೇಟೆ ನಂದಿಪುರ ಕೆರೆಯನ್ನು ಸಣ್ಣ ನೀರಾವರಿ ಇಲಾಖೆಯಿಂದ 4 ಕೋಟಿ ವೆಚ್ಚದಲ್ಲಿ ಇತ್ತೀಚೆಗೆ ಅಭಿವೃದ್ದಿ ಪಡಿಸಲಾಗಿದೆ. ಉದ್ಯಾನವನ ನಿರ್ಮಾಣದ ಕಾಮಗಾರಿ ಪ್ರಗತಿಯಲ್ಲಿದೆ. ಇದು ಕೊಡ್ಲಿಪೇಟೆ ಭಾಗದ ಪುರಾತನ ಕೆರೆಯಾಗಿದ್ದು, ಈ ಕೆರೆ ನೀರನ್ನು ನಂಬಿ ಸಾವಿರಾರು ಕೃಷಿಕರು ವ್ಯವಸಹಾಯ ಮಾಡುತ್ತಾರೆ. ಕಾವೇರಿ ತೀರ್ಥೋದ್ಬವ ದಿನದಂದೇ ಇಲ್ಲಿ ಪ್ರಥಮ ಬಾರಿಗೆ ಬಾಗಿನ ಅರ್ಪಣೆ ಮತ್ತು ಗಂಗಾರತಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಗ್ರಾಮಸ್ಥರ ಸಂಭ್ರಮ ಹೆಚ್ಚಿಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net