

ಹುಬ್ಬಳ್ಳಿ: ಇಲ್ಲಿಯ ಗೋಕುಲ ರಸ್ತೆಯ ಹೆಬಸೂರ ಭವನದಲ್ಲಿ ಗಂಗಾ ಕೋ-ಆಪ್ ಕ್ರೆಡಿಟ್ ಸೊಸೈಟಿಯ ರಜತ ಮಹೋತ್ಸವ ಕಾರ್ಯಕ್ರಮ ಇತ್ತೀಚೆಗೆ ಏರ್ಪಡಿಸಲಾಗಿತ್ತು.
ಶಾಸಕ ಮಹೇಶ ಟೆಂಗಿನಕಾಯಿ ಉದ್ಘಾಟಿಸಿ ಮಾತನಾಡಿ, ಕಳೆದ 25 ವರ್ಷಗಳಿಂದ ಸದಸ್ಯರ ಹಿತ ಕಾಪಾಡುವಲ್ಲಿ ಗಂಗಾ ಸೊಸೈಟಿ ಯಶಸ್ವಿಯಾಗಿದೆ. ಸಹಕಾರ ಸೊಸೈಟಿಗಳು ಶೇರುದಾರರ, ಠೇವಣಿದಾರರ ಹಣ ಸಂಗ್ರಹಿಸಿ ಸಾಲ ವಿತರಣೆ ಮಾಡುತ್ತವೆ. ಸಾಲಗಾರರು ಸರಿಯಾದ ಸಮಯದಲ್ಲಿ ಸಾಲ ಮರುಪಾವತಿಸಿದರೆ ಮಾತ್ರ ಸೊಸೈಟಿ ಅಭಿವೃದ್ಧಿ ಸಾಧ್ಯ. ಈ ಕೆಲಸದಲ್ಲಿ ಗಂಗಾ ಸೊಸೈಟಿಯು ಯಶಸ್ವಿಯಾಗಿದೆ. ಮುಂದಿನ ದಿನಗಳಲ್ಲಿ ಸುವರ್ಣಮೋತ್ಸವ ಆಚರಿಸಲಿ ಎಂದು ಹಾರೈಸಿದರು.
ಗಂಗಾಮೃತ ಸ್ಮರಣ ಸಂಚಿಕೆ ಸಂಪಾದಕ ಪ್ರೊ.ಕೆ.ಎಸ್. ಕೌಜಲಗಿ ಮಾತನಾಡಿ, ಗಂಗಾಮತ ಸಮಾಜ ಹಿಂದುಳಿದಿದೆ. ಈ ಸಮುದಾಯವು ನಿಷ್ಠೆ, ಪ್ರಾಮಾಣಿಕತೆ, ನಂಬಿಕೆಗೆ ಹೆಸರಾಗಿದೆ. ಸಮಾಜದ ಮುಖಂಡರೇ ಸಮಾಜದ ಅಭಿವೃದ್ಧಿಗೆ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದರು.
ಶ್ರೀ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ಮಾತನಾಡಿ, ಗಂಗಾ ಸೊಸೈಟಿ ಇನ್ನೂ ಹೆಚ್ಚಿನ ಅಭಿವೃದ್ಧಿ ಹೊಂದಲಿ ಎಂದು ಆಶೀರ್ವದಿಸಿದರು. ಅಧ್ಯಕ್ಷ ಹನುಮಂತಪ್ಪ ಎಸ್. ನಾಯ್ಕೋಡಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಮಾಜಿ ನಿರ್ದೇಶಕರು, ಲೆಕ್ಕಪರಿಶೋಧಕರು, ಕಾನೂನು ಸಲಹೆಗಾರರನ್ನು ಸನ್ಮಾನಿಸಲಾಯಿತು.
ಹೊಸಮಠದ ಶ್ರೀ ಚಂದ್ರಶೇಖರ ಸ್ವಾಮೀಜಿ, ವಿ.ಜಿ. ಕುಲಕರ್ಣಿ, ಉಪಾಧ್ಯಕ್ಷ ಲಕ್ಷ್ಮಣ ಅಂಬಿಗೇರ, ಹಿರಿಯ ನಿರ್ದೇಶಕರಾದ ವೈ.ಆರ್. ಗೇಟಿಯವರ, ಎನ್.ಎಂ. ಮಡ್ಡೇರ, ರಾಮಣ್ಣ ಹರಪನಹಳ್ಳಿ, ಪಿ.ಡಿ. ನಾಟಿಕಾರ ಹಾಗೂ ನಿರ್ದೇಶಕ ಮಂಡಳಿ ಸದಸ್ಯರು ಹಾಜರಿದ್ದರು. ಬಿ.ಎಸ್. ಮಾಳವಾಡ ನಿರೂಪಿಸಿದರು. ಬಸವರಾಜ ಗುರ್ಕಿ ವಂದಿಸಿದರು.