ಬ್ಯಾಂಕ್​ಗೆ ವಂಚಿಸುತ್ತಿದ್ದ ಗ್ಯಾಂಗ್ ಸೆರೆ: ನಕಲಿ ಕಂಪನಿ, ಸೈಟ್ ದಾಖಲೆ ಸೃಷ್ಟಿಸಿ ಕೋಟ್ಯಂತರ ರೂ. ಸಾಲ ಪಡೆದು ಮೋಸ

ಬ್ಯಾಂಕ್​
Published on

ಬೆಂಗಳೂರು: ನಕಲಿ ಕಂಪನಿ, ನಿವೇಶಗಳ ದಾಖಲೆ ಸೃಷ್ಟಿಸಿ ಬ್ಯಾಂಕ್​ಗಳಿಂದ ನೂರಾರು ಕೋಟಿ ರೂ.ಸಾಲ ಪಡೆದು ವಂಚಿಸುತ್ತಿದ್ದ ಗ್ಯಾಂಗ್​ನ್ನು ಸಿಐಡಿಯ ಸೈಬರ್ ಕ್ರೖೆಂ ಠಾಣೆ ಪೊಲೀಸರು ಪತ್ತೆಹಚ್ಚಿದ್ದು, ನಾಲ್ವರನ್ನು ಬಂಧಿಸಿದ್ದಾರೆ.

ಬನ್ನೇರುಘಟ್ಟ ರಸ್ತೆಯ ಅರಕೆರೆಯ ಉದಯ್ಪ್ರತಾಪ್(48), ಆಯೂಬ್ ಖಾನ್ ಅಲಿ (42) ಶಿವಮೊಗ್ಗದ ಮಹದೇಶ್ ಅಲಿಯಾಸ್ ಮಹೇಶ್(36) ಮತ್ತು ರಾಮೇಗೌಡ (30) ಬಂಧಿತರು. ನಕಲಿ ದಾಖಲೆ ಸೃಷ್ಟಿಸಿ 1.5 ಕೋಟಿ ರೂ. ಸಾಲ ಪಡೆದು ವಂಚನೆ ಮಾಡಿರುವ ಬಗ್ಗೆ ಆಕ್ಸಿಸ್ ಬ್ಯಾಂಕ್ ಅಧಿಕಾರಿಗಳು ದೂರು ನೀಡಿದ್ದರು. ಅದರ ತನಿಖೆ ಕೈಗೊಂಡ ಸಿಐಡಿ ಸೈಬರ್ ಕ್ರೖೆಂ ವಿಭಾಗದ ಎಸ್​ಪಿ ಎಂ.ಡಿ. ಶರತ್​ಕುಮಾರ್, ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ 45 ಪ್ರಕರಣಗಳು ಪತ್ತೆಯಾಗಿವೆ ಎಂದು ಸಿಐಡಿ ಅಧಿಕಾರಿಗಳು ತಿಳಿಸಿದ್ದಾರೆ.

ಅಪರಿಚಿತ ವ್ಯಕ್ತಿಯ ಸೈಟ್​ನ ಕ್ರಯಪತ್ರದ ಕಲರ್ ಜೆರಾಕ್ಸ್ ಮಾಡಿ ನಕಲಿ ನಿವೇಶನದ ದಾಖಲೆ ಸೃಷ್ಟಿಸುತ್ತಿದ್ದರು. ಅದಕ್ಕೆ ತಕ್ಕಂತೆ ಫೋಟೋ ಒಬ್ಬರದು, ಹೆಸರು ಮತ್ತು ವಿಳಾಸ ಮತ್ತೊಬ್ಬರದ್ದನ್ನು ನಮೂದಿಸಿ ನಕಲಿ ಆಧಾರ್ ಮತ್ತು ಪಾನ್​ಕಾರ್ಡ್, ಬ್ಯಾಂಕ್ ಖಾತೆ ತೆರೆದು ದಾಖಲೆ ಸಿದ್ಧಪಡಿಸುತ್ತಿದ್ದರು.

ವಿವಿಧ 5 ಬ್ಯಾಂಕ್​ಗಳಿಗೆ ಅರ್ಜಿ ಸಲ್ಲಿಸಿ ತಕ್ಷಣ ದಾಖಲೆ ಪರಿಶೀಲನೆ ನಡೆಸುವ ಏಜೆಂಟ್​ಗಳನ್ನು ಭೇಟಿ ಮಾಡುತ್ತಿದ್ದರು. ಸೈಟ್ ನೋಡಲು ಬಂದಾಗ ಯಾರದೋ ಜಾಗವನ್ನು ತೋರಿಸುತ್ತಿದ್ದರು. ದಾಖಲೆ ಪರಿಶೀಲನೆಗೆ ಸಬ್ ರಿಜಿಸ್ಟ್ರಾರ್ ಕಚೇರಿಗೆ ಬಂದಾಗ ಅಲ್ಲಿ ಒಬ್ಬ ವ್ಯಕ್ತಿಗೆ ಲಂಚಕೊಟ್ಟು ಅವರ ಕಡೆಯಿಂದ ಎಲ್ಲವೂ ಸರಿಯಾಗಿದೆ ಎಂದು ಹೇಳಿಸುತ್ತಿದ್ದರು. ಕೆಲವೊಮ್ಮೆ ಬ್ಯಾಂಕ್ ಏಜೆಂಟರನ್ನು ಬುಕ್ ಮಾಡಿಕೊಂಡು ಸಾಲ ಪಡೆಯುತ್ತಿದ್ದರು.

ಏಜೆಂಟ್​ಗೆ ಸಮಸ್ಯೆ ಆಗದಂತೆ ಮೊದಲ 6 ತಿಂಗಳು ಸರಿಯಾದ ಸಮಯಕ್ಕೆ ಸಾಲದ ಹಣದಲ್ಲೇ ಕಂತು ಪಾವತಿಸುತ್ತಿದ್ದರು. ಉಳಿದ ಹಣ ಹಂಚಿಕೊಳ್ಳುತ್ತಿದ್ದರು. ಇದೇ ರೀತಿ ಆಕ್ಸಿಸ್ ಬ್ಯಾಂಕ್​ನಲ್ಲಿ ಮೊದಲ ಸಲ ವಾಹನ ಸಾಲ ಪಡೆದು ತೀರಿಸಿ ನಂಬಿಕೆ ಗಳಿಸಿದ್ದರು. ನಂತರ ನಕಲಿ ದಾಖಲೆ ಕೊಟ್ಟು 1.5 ಕೋಟಿ ರೂ. ಸಾಲ ಪಡೆದು ವಂಚಿಸಿದ್ದರು. ಕಂತು ಪಾವತಿ ಮಾಡದಿದ್ದಾಗ ವಿಳಾಸ ಹುಡುಕಿಕೊಂಡು ಹೋದಾಗ ವಿಳಾಸ ನಕಲಿ ಎಂಬುದು ಗೊತ್ತಾಗಿದೆ. ಬಳಿಕ ಒಂದೊಂದೇ ದಾಖಲೆ ಪರಿಶೀಲನೆ ನಡೆಸಿದಾಗ ಎಲ್ಲವೂ ನಕಲಿ ಎಂಬುದು ಬಯಲಾಗಿದೆ. ಎಸ್​ಪಿ ಶರತ್ ನೇತೃತ್ವದ ತಂಡ ತಾಂತ್ರಿಕ ದಾಖಲೆ ಆಧರಿಸಿ ಆರೋಪಿಗಳಿಗೆ ಬಲೆಬೀಸಿದಾಗ ಮಹದೇಶ್ ಮೊದಲು ಸೆರೆಸಿಕ್ಕಿದ್ದು, ನಂತರ ಇತರರನ್ನು ಬಂಧಿಸಲಾಯಿತು.

ಬಾಗಲಗುಂಟೆ ಲೋಕೇಶ್ ಮಾಸ್ಟರ್ ಮೈಂಡ್: ಆರೋಪಿಗಳಿಗೆ 2008-09ರಿಂದ ಬಾಗಲಗುಂಟೆಯ ಲೋಕೇಶ್ ಎಂಬಾತ ಮಾಸ್ಟರ್ ಮೈಂಡ್ ಎಂಬುದು ಸಿಐಡಿ ತನಿಖೆ ವೇಳೆ ಬೆಳಕಿಗೆ ಬಂದಿದೆ. ಆದರೆ, ಆಕ್ಸಿಸ್ ಬ್ಯಾಂಕಿನ ದೂರಿನಲ್ಲಿ ಆತನ ಪಾತ್ರ ಕಂಡು ಬಂದಿಲ್ಲ. ಇತರ ಪ್ರಕರಣಗಳಲ್ಲಿ ಆತನ ಬಗ್ಗೆ ತನಿಖೆ ಮುಂದುವರಿಸಿದ್ದಾರೆ. ನಕಲಿ ದಾಖಲೆ ಸೃಷ್ಟಿಸುತ್ತಿದ್ದ ಹಾಗೂ ಅಧಿಕಾರಿಗಳನ್ನು ಬುಟ್ಟಿಗೆ ಹಾಕಿಕೊಳ್ಳುತ್ತಿದ್ದ ಲೋಕೇಶ್, ತನ್ನ ಸಹಚರರ ಮೂಲಕ ಸಾಲ ಪಡೆದು ವಂಚನೆ ಮಾಡುತ್ತಿದ್ದ. ಕಳೆದ 1 ವರ್ಷದಿಂದ ಮಹದೇಶ್ ಪ್ರತ್ಯೇಕವಾಗಿ ವಂಚನೆಗೆ ಇಳಿದಿದ್ದ. ವೇಶ್ಯಾವಾಟಿಕೆ ಪ್ರಕರಣದಲ್ಲಿ ಉದಯ್, ಮೆಡಿಕಲ್ ಸೀಟು ವಂಚನೆ ಪ್ರಕರಣದಲ್ಲಿ ಆಯೂಬ್ ಈ ಹಿಂದೆ ಬಂಧಿತರಾಗಿದ್ದರು. ಲೋಕೇಶ್ ಪತ್ನಿ ಕರ್ನಾಟಕ ರೈತ ಮಹಿಳಾ ಸಂಘಟನೆ ಅಧ್ಯಕ್ಷೆಯಾಗಿ ಗುರುತಿಸಿಕೊಂಡಿದ್ದಾರೆ.

ಕೂಲಿಗಾರರೇ ಟೆಕ್ಕಿಗಳು!: ಸೈಟ್ ಮಾದರಿಯಲ್ಲೇ ನಕಲಿ ಕಂಪನಿ ತೆರೆದು ಸಾಲ ಪಡೆದಿದ್ದಾರೆ. ಬಾಡಿಗೆ ಕೊಠಡಿಯಲ್ಲಿ ನಕಲಿ ಕಂಪನಿ ತೆರೆದು ದಾಖಲೆ ಸೃಷ್ಟಿಸುತ್ತಿದ್ದರು. 10 ಕೂಲಿ ಕಾರ್ವಿುಕರ ಆಧಾರ್, ಬ್ಯಾಂಕ್ ಪಾಸ್ ಬುಕ್ ಪಡೆದು ಅವರನ್ನು ತನ್ನ ಕಂಪನಿ ನೌಕರರು ಎಂದು ಸ್ಯಾಲರಿಸ್ಲಿಪ್, ಐಡಿ ಕಾರ್ಡ್ ಸಿದ್ಧಪಡಿಸಿದ್ದರು. ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ 50 ಸಾವಿರ ರೂ. ಜಮೆ ಮಾಡಿ ಕೆಲದಿನಕ್ಕೆ ಮತ್ತೆ ಡ್ರಾ ಮಾಡಿ ವಾಪಸ್ ಜಮೆ ಮಾಡುತ್ತಿದ್ದರು. ಜತೆಗೆ ಟಿವಿ, ವಾಷಿಂಗ್​ವುಷಿನ್​ಗೆಂದು ಸಾಲ ಪಡೆದು ಕಂತು ಪಾವತಿಸಿ ಸಿಬಿಲ್ ಸ್ಕೋರ್ ಹೆಚ್ಚಿಸುತ್ತಿದ್ದರು. ಬಳಿಕ ಸಾಲಕ್ಕೆ ಅರ್ಜಿ ಸಲ್ಲಿಸಿ ತಲಾ 1 ಕೋಟಿ ರೂ. ಸಾಲ ಪಡೆದು ಕಾರ್ವಿುಕರಿಗೆ ಕಮಿಷನ್ ನೀಡಿದ್ದರು. 6 ತಿಂಗಳವರೆಗೆ ಕಂತು ಪಾವತಿಸಿ ಉಳಿದ ಹಣ ಹಂಚಿಕೊಂಡಿದ್ದರು.

ತನಿಖೆ ವೇಳೆಯೇ 1 ಕೋಟಿ ರೂ. ಜಮೆ!: ಆರೋಪಿ ಉದಯ್ ಪ್ರತಾಪ್​ನನ್ನು ವಿಚಾರಣೆ ನಡೆಸುತ್ತಿ ದ್ದಾಗ ಆತನ ಬ್ಯಾಂಕ್ ಖಾತೆಗೆ 1 ಕೋಟಿ ರೂ. ಜಮೆ ಆಗಿತ್ತು. ಒಂದೇ ಬಾರಿ ಇಷ್ಟೊಂದು ಹಣ ಎಲ್ಲಿಂದ ಬಂದಿದೆ ಎಂದು ಪರಿಶೀಲನೆ ನಡೆಸಿದಾಗ ಉದಯ್ಗೆ ಬ್ಯಾಂಕ್​ವೊಂದು ಸಾಲ ಮಂಜೂರು ಮಾಡಿರುವುದು ಗೊತ್ತಾಗಿದೆ. ಬಂಧಿತ ಆರೋಪಿಗಳಿಂದ 80 ಲಕ್ಷ ರೂ. ನಗದು ಮತ್ತು ಸಾಲದಲ್ಲಿ ಪಡೆದಿದ್ದ ಐಷಾರಾಮಿ ಕಾರನ್ನು ಸಿಐಡಿ ಜಪ್ತಿ ಮಾಡಿದೆ.

45 ವಂಚನೆ ಪ್ರಕರಣಗಳು ಬೆಳಕಿಗೆ: ನಗರದ ಬಹುತೇಕ ಬ್ಯಾಂಕ್​ಗಳಲ್ಲಿ ಸಾಲ ಪಡೆದು ವಂಚನೆ ಮಾಡಿದ್ದಾರೆ. ತನಿಖೆ ವೇಳೆ ನಗರದ ವಿವಿಧೆಡೆ ಎಸ್​ಬಿಐ ದಾಖಲಿಸಿರುವ 22 ಪ್ರಕರಣ, ಕೆನರಾ ಬ್ಯಾಂಕಿನ 5, ಎಚ್​ಡಿಎಫ್​ಸಿ, ಕ್ಯಾಪಿಟಲ್ ಫೈನಾನ್ಸ್ ಸೇರಿ ಹಲವು ಬ್ಯಾಂಕ್​ಗಳಿಗೆ ವಂಚನೆ ಮಾಡಿರುವ ಬಗ್ಗೆ ಆರೋಪಿಗಳು ಒಪ್ಪಿಕೊಂಡಿದ್ದು, ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಬೇಕಾಗಿದೆ ಎಂದು ತನಿಖಾಧಿಖಾರಿಗಳು ತಿಳಿಸಿದ್ದಾರೆ.

ಪ್ರತಿ ಬ್ಯಾಂಕಿಗೆ ಸಾಲಕ್ಕೆ ಅರ್ಜಿ ಸಲ್ಲಿಸುವಾಗ ಫೋಟೋಗಳನ್ನು ಬೇರೆ ಬೇರೆ ಕೋನಗಳಲ್ಲಿ ತೆಗೆಸಿ ಕೊಡುತ್ತಿದ್ದರು. ಪ್ರತಿಷ್ಠಿತ ಸಾಫ್ಟ್​ವೇರ್ ಕಂಪನಿ ನೌಕರನ ಸೋಗಿನಲ್ಲಿಯೂ ಸಾಲ ಪಡೆದಿದ್ದಾರೆ. | ಎಂ.ಡಿ. ಶರತ್​ಕುಮಾರ್ ಸಿಐಡಿ, ಸೈಬರ್ ಕ್ರೖೆಂ ವಿಭಾಗದ ಎಸ್​ಪಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net