

ಶಿವರಾಜ ಎಂ. ಬೆಂಗಳೂರು ಗ್ರಾಮಾಂತರ
ಗೌರಿ-ಗಣೇಶ ಹಬ್ಬಕ್ಕೆ ದಿನಗಣನೆ ಆರಂಭವಾಗುತ್ತಿದ್ದಂತೆ ತರಹೇವಾರಿ ಗಣಪ ಮೂರ್ತಿಗಳು ತಯಾರಕರ ಕರಗಳಲ್ಲಿ ರೂಪುಗೊಳ್ಳುತ್ತಿವೆೆ. ಇತ್ತೀಚಿನ ದಿನಗಳಲ್ಲಿ ಪರಿಸರಸ್ನೇಹಿ ಗಣಪ ಮೂರ್ತಿಗಳ ಪ್ರತಿಷ್ಠಾಪನೆಗೆ ಜನ ಒಲವು ತೋರಿಸುತ್ತ್ತಿರುವುದರಿಂದ ಬಣ್ಣರಹಿತ ಮಣ್ಣಿನ ಮೂರ್ತಿಗಳಿಗೆ ಬೇಡಿಕೆ ಹೆಚ್ಚಿದೆ. ಇದರ ಮಧ್ಯೆ ವಿಶೇಷವಾಗಿ ಈ ಬಾರಿ ಪರಿಸರಸ್ನೇಹಿ ಗಣಪ ‘ಮರಗೆಣಸಿನಪುಡಿ’ಯಿಂದ ರೂಪುಗೊಳ್ಳುತ್ತಿದ್ದು, ಮಾರುಕಟ್ಟೆಗೆ ಲಗ್ಗೆ ಇಡಲು ಸಿದ್ಧವಾಗುತ್ತಿವೆ.
ಹೌದು. ದೊಡ್ಡಬಳ್ಳಾಪುರ ತಾಲೂಕು ಗುಂಡಮಗೆರೆ ಹೊಸಹಳ್ಳಿಯ ಆದಿನಾರಾಯಣ ಕುಟುಂಬ ಇಂಥದ್ದೊಂದು ಪ್ರಯೋಗದಲ್ಲಿ ಯಶಸ್ವಿ ಕಂಡಿದ್ದು, ಪರಿಸರಕ್ಕೆ ಪೂರಕವಾಗಿರುವ ಮರಗೆಣಸಿನ ಪುಡಿಯಿಂದ ಪುಟ್ಟಪುಟ್ಟ ಗಣಪಮೂರ್ತಿಗಳಿಗೆ ರೂಪ ನೀಡುತ್ತಿದ್ದಾರೆ. ಪ್ಲಾಸ್ಟರ್ ಆ್ಯಪ್ ಪ್ಯಾರೀಸ್ (ಪಿಒಪಿ) ಮೂರ್ತಿಗಳ ನಿಷೇಧದ ಹಿನ್ನೆಲೆಯಲ್ಲಿ ಇಂಥ ಪರಿಸರಸ್ನೇಹಿ ಗಣಪ ಮೂರ್ತಿ ತಯಾರಿಕೆಯಲ್ಲಿ ತೊಡಗಿರುವುದು ಗಣಪನ ಭಕ್ತರ ಗಮನ ಸೆಳೆದಿದೆ.
ಕುಂಬಾರಿಕೆ ವೃತ್ತಿ, ಗಣಪ ಪ್ರವೃತ್ತಿ: ಸ್ವಂತ ಕುಂಬಾರಿಕೆ ವೃತ್ತಿ ಮಾಡುವ ಆದಿನಾರಾಯಣ್ ಅವರು 20 ವರ್ಷದಿಂದ ಗಣೇಶ ಮೂರ್ತಿಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಹೊಟ್ಟೆಪಾಡಿಗೆ ಇನ್ನಿತರ ಕೆಲಸಗಳನ್ನು ಅವಲಂಬಿಸಿದರೂ ಕುಲಕಸುಬು ಮರೆಯಬಾರದು ಎಂಬ ಕಾರಣ ಒಂದಾದರೆ ತರಹೇವಾರಿ ಗಣಪ ಮೂರ್ತಿಗಳಿಗೆ ರೂಪ ಕೊಡುವುದು ಇವರ ಮೆಚ್ಚಿನ ಹವ್ಯಾಸವಾಗಿದೆ.
ಜಲಚರಗಳಿಗೆ ಆಹಾರ: ಈ ಮರಗೆಣಸಿನ ಪುಡಿಯ ಗಣಪ ಹಗುರವಾಗಿದ್ದು, ನೀರಿನಲ್ಲಿ ಸುಲಭವಾಗಿ ಕರಗುತ್ತದೆ. ಅದಲ್ಲದೆ ಕರಗಿದ ಮೇಲೆ ಜಲಚರ ಜೀವಿಗಳಿಗೂ ಆಹಾರವಾಗುತ್ತದೆ ಎನ್ನುತ್ತಾರೆ ನಾರಾಯಣ್, ದೊಡ್ಡಮಟ್ಟದಲ್ಲಿ ಪರಿಸರ ಜಾಗೃತಿ ಮೂಡಿಸುತ್ತಿರುವ ಪ್ರಸ್ತುತ ಸನ್ನಿವೇಶದಲ್ಲಿ ಮರಗೆಣಸಿನಪುಡಿ ಗಣಪ ಪರಿಸರ ಪ್ರೇಮಿಗಳಿಗೆ ವರವಾಗಲಿದ್ದಾನೆ.
ಮೂರ್ತಿ ರೂಪ ಪಡೆಯುವುದು ಹೇಗೆ?: ಮೊದಲಿಗೆ ನೀರಿಗೆ ಪುಡಿ ಹಾಕಿ ಪೇಸ್ಟ್ ರೀತಿ ಬೇಯಿಸಬೇಕು, ಒಂದು ದಿನದ ನಂತರ ಮರಗೆಣಸಿನ ೇಸ್ಟ್ ಅನ್ನು ಗಣಪನ ಅಚ್ಚಿನ ಪೇಪರ್‌ಗೆ ಮೆತ್ತಿ ವಿಗ್ರಹ ರೂಪ ಕೊಡಲಾಗುತ್ತದೆ. ಚೆನ್ನಾಗಿ ಒಣಗಿದ ನಂತರ ಹೂವುಗಳಿಂದ ತಯಾರಿಸಲಾದ ನೈಸರ್ಗಿಕ ಬಣ್ಣಗಳನ್ನು ಬಳಸಲಾಗುತ್ತದೆ. ಒಂದು ವಿಗ್ರಹ ತಯಾರಿಸಲು 4 ದಿನ ತೆಗೆದುಕೊಳ್ಳುತ್ತದೆ.ಇಡೀ ಕುಟುಂಬ ಮೂರ್ತಿ ತಯಾರಿಕೆಯಲ್ಲಿ ತೊಡಗಿಸಿಕೊಂಡಿದೆ, ಪ್ರತಿ ವರ್ಷ ಜನವರಿಯಿಂದಲೇ ಕೆಲಸಕ್ಕೆ ಅಣಿಯಾಗುವ ಕುಟುಂಬ ಆಗಸ್ಟ್ ಎರಡನೇ ವಾರದೊಳಗೆ ಮೂರ್ತಿಗಳನ್ನು ಸಿದ್ಧಗೊಳಿಸುತ್ತದೆ.
ಯೋಚನೆ ಬಂದಿದ್ದು ಹೇಗೆ?: ಈ ಮೊದಲು ಮಣ್ಣಿನ ಗಣಪ ಮೂರ್ತಿಗಳನ್ನು ತಯಾರು ಮಾಡುತ್ತಿದ್ದ ಆದಿನಾರಾಯಣ್ ಕಳೆದ 8 ವರ್ಷದ ಹಿಂದೆ ತಮಿಳುನಾಡಿಗೆ ಹೋಗಿದ್ದಾಗ ಅಲ್ಲಿ ಮರಗೆಣಸಿನ ಪುಡಿ ಗಣಪ ತಯಾರಿಕೆ ದೃಶ್ಯ ಗಮನ ಸೆಳೆದಿತ್ತು. ಅದರ ಬಗ್ಗೆ ಅಲ್ಲಿನ ತಯಾರಕರಿಂದ ಸಂಪೂರ್ಣ ಮಾಹಿತಿ ಕಲೆ ಹಾಕಿ ಮೊದಲ ಬಾರಿಗೆ ಸ್ಥಳೀಯವಾಗಿ ಪ್ರಯೋಗ ಮಾಡಿದರು. ಸಾರ್ವಜನಿಕರಿಂದ ಮೊದಲಿಗೆ ಅಷ್ಟೇನೂ ಸ್ಪಂದನೆ ಸಿಗಲಿಲ್ಲ, ಆದರೂ ಛಲಬಿಡದೆ ಪ್ರಯತ್ನ ಮುಂದುವರಿಸಿದರು. ಪ್ರಯತ್ನ ಲನೀಡಿದೆ, ತಾಲೂಕು ಅಲ್ಲದೆ ನೆರೆ-ಹೊರೆಯ ಜಿಲ್ಲೆಗಳಿಂದಲೂ ಮರಗೆಣಸಿನ ಗಣಪ ಬೇಡಿಕೆ ಕುದುರಿಸಿಕೊಂಡಿದ್ದಾನೆ.
ಮರಗೆಣಸಿನ ಪುಡಿಯಿಂದ ತಯಾರಿಸಿದ ಗಣೇಶ ಮೂರ್ತಿಗಳನ್ನು ನೀರಿನಲ್ಲಿ ವಿಸರ್ಜನೆ ಮಾಡಿದಾಗ ವೇಗವಾಗಿ ನೀರಿನಲ್ಲಿ ಕರಗುತ್ತೆ, ನೀರಿನಲ್ಲಿ ಕರಗಿದ ಮೂರ್ತಿ ಜಲಚರಗಳಿಗೆ ಆಹಾರವಾಗುತ್ತೆ, ಅಲಂಕಾರಕ್ಕೆ ಬಳಸಿದ ಬಣ್ಣ ನೈಸರ್ಗಿಕವಾದ್ದರಿಂದ ಮಾಲಿನ್ಯಕ್ಕೆ ಆಸ್ಪದವಾಗುವುದಿಲ್ಲ.
ಪಿಒಪಿ ಮತ್ತು ರಾಸಾಯನಿಕ ಬಣ್ಣಗಳ ಗಣೇಶನ ಮೂರ್ತಿಗಳನ್ನು ಜಲಮೂಲಗಳಿಗೆ ವಿಸರ್ಜನೆ ಮಾಡುವುದರಿಂದ ಪರಿಸರ ಮಾಲಿನ್ಯವಾಗುತ್ತದೆ ಮತ್ತು ಜಲಚರಗಳಿಗೂ ಹಾನಿಯಾಗುತ್ತದೆ. ಮರಗೆಣಸಿನಪುಡಿಯಿಂದ ತಯಾರು ಮಾಡುವ ಗಣಪ ಮೂರ್ತಿಗಳು ಸಂಪೂರ್ಣವಾಗಿ ಪರಿಸರಸ್ನೇಹಿಯಾಗಿದ್ದು, ಭಕ್ತರು ಇಂಥ ಮೂರ್ತಿಗಳ ಪ್ರತಿಷ್ಠಾಪನೆಗೆ ಮುಂದಾಗಬೇಕು.