

ಅಥಣಿ: ಪಟ್ಟಣದ ಪೊಲೀಸ್ ಸಮುದಾಯ ಭವನದಲ್ಲಿ ಗಣೇಶೋತ್ಸವ ಅಂಗವಾಗಿ ಶನಿವಾರ ಶಾಂತಿಪಾಲನಾ ಸಭೆ ಜರುಗಿತು.
ಸಿಪಿಐ ರವೀಂದ್ರ ನಾಯ್ಕೋಡಿ ಮಾತನಾಡಿ, ಗಣೇಶ ಉತ್ಸವದಲ್ಲಿ ಅಹಿತಕರ ಘಟನೆ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಶಾಂತಿಯುತ ಗಣೇಶೋತ್ಸವ ಆಚರಿಸಬೇಕು. ಮುಖ್ಯವಾಗಿ ವ್ಯಸನಮುಕ್ತ ಹಾಗೂ ಡಾಲ್ಬಿರಹಿತ ಗಣೇಶೋತ್ಸವ ಆಚರಣೆ ಮಾಡುವಂತೆ ಕರೆ ನೀಡಿದರು.
ಪಟ್ಟಣದಲ್ಲಿ ನಡೆಯುವ ಪ್ರತಿ ಘಟನೆಗಳ ಮೇಲೆ ಪೊಲೀಸರು ಗಮನ ಹರಿಸಲಿದ್ದಾರೆ. ಇಡೀ ಪಟ್ಟಣ ಸಿಸಿ ಕ್ಯಾಮರಾ ಕಣ್ಗಾವಲಿನಲ್ಲಿದೆ. ಅರ್ಥಪೂರ್ಣ ಗಣೇಶೋತ್ಸವ ಆಚರಿಸೋಣ ಎಂದರು.
ಪಿಎಸ್‌ಐ ಶಿವಶಂಕರ ಮುಕರಿ, ಅಪರಾಧ ವಿಭಾಗದ ಪಿಎಸ್‌ಐ ರಾಕೇಶ ಬಗಲಿ, ಚಂದ್ರಶೇಖರ ಸಾಗನೂರ, ಅಶೋಕ ಯಲ್ಲಡಗಿ, ಅಜಿತ ಪವಾರ, ವಿನಯ ಪಾಟೀಲ, ಶ್ರೀಶೆಲ ಸಂಕ, ಮಹೇಶ ಚುನಮುರಿ, ವಿಕಾಸ ತಾಂಬಟ, ಪ್ರಶಾಂತ ತೊಡಕರ ಇತರರಿದ್ದರು.