ಗಣೇಶೋತ್ಸವ ನಿಯಮ ಪಾಲಿಸಲೇಬೇಕು

nrp meeting
ಎನ್.ಆರ್.ಪುರ ತಾಪಂನಲ್ಲಿ ಗಣೇಶೋತ್ಸವ ಹಾಗೂ ಈದ್ ಮಿಲಾದ್ ಹಬ್ಬಗಳ ಆಚರಣೆ ಹಿನ್ನೆಲೆಯಲ್ಲಿ ತಹಸೀಲ್ದಾರ್ ತನುಜಾ ಟಿ. ಸವದತ್ತಿ ಅಧ್ಯಕ್ಷತೆಯಲ್ಲಿ ಶಾಂತಿ ಸಭೆ ನಡೆಯಿತು. ಬಿ.ಎಸ್.ನಿರಂಜನ್‌ಗೌಡ, ಆರ್.ವಿ.ಮಂಜುನಾಥ್, ಎನ್.ಎಲ್.ಮನೀಶ ಇದ್ದರು.
Published on

ಎನ್.ಆರ್.ಪುರ: ಗಣೇಶೋತ್ಸವದ ಯಾವುದೇ ಕಾರ್ಯಕ್ರಮಕ್ಕೆ ರಾತ್ರಿ 10ವರೆಗೆ ಮಾತ್ರ ಅವಕಾಶ. ನಂತರ ಧ್ವನಿವರ್ಧಕ ಬಳಸುವಂತಿಲ್ಲ ಎಂದು ಪಿಎಸ್‌ಐ ಬಿ.ಎಸ್.ನಿರಂಜನ್‌ಗೌಡ ಹೇಳಿದರು.

ಶುಕ್ರವಾರ ತಾಪಂನಲ್ಲಿ ನಡೆದ ಗಣೇಶೋತ್ಸವ ಹಾಗೂ ಈದ್ ಮಿಲಾದ್ ಹಬ್ಬ ಆಚರಣೆ ಶಾಂತಿ ಸಭೆಯಲ್ಲಿ ಮಾತನಾಡಿ, ಯಾವುದೇ ಹಬ್ಬವನ್ನು ಇನ್ನೊಂದು ಧರ್ಮಕ್ಕೆ ಅಥವಾ ಇನ್ನೊಬ್ಬರಿಗೆ ಧಕ್ಕೆ ಆಗದಂತೆ ಆಚರಿಸಬೇಕು. ಗಣೇಶನ ವಿಗ್ರಹಕ್ಕೆ ಬೆಲೆ ಬಾಳುವ ಚಿನ್ನಾಭರಣ ತೊಡಿಸುವಂತಿದ್ದರೆ, ಪೆಂಡಾಲ್‌ನಲ್ಲಿ ಸಿಸಿ ಕ್ಯಾಮರಾ ಅಳವಡಿಸಿಕೊಳ್ಳಬೇಕು. ಎಲ್ಲ ಕಡೆ ಪೊಲೀಸ್ ಸಿಬ್ಬಂದಿ ನಿಯೋಜಿಸಬೇಕಾಗಿರುವುದರಿಂದ ಪೆಂಡಾಲ್‌ನಲ್ಲಿ ರಾತ್ರಿ ಕಾವಲುಗಾರರನ್ನು ನೇಮಿಸಿಕೊಳ್ಳಬೇಕು. ಸ್ವಯಂ ಸೇವಕರನ್ನು ನಿಯೋಜಿಸಿಕೊಳ್ಳಬೇಕು ಎಂದರು.
ಗಣೇಶನ ಪ್ರತಿಷ್ಠಾಪನೆ ಅನುಮತಿಗಾಗಿ ಸೆ.3ರೊಳಗೆ ಅರ್ಜಿ ಸಲ್ಲಿಸಬೇಕು. ಪಟ್ಟಣ ವ್ಯಾಪ್ತಿಯ ಎಲ್ಲ ಗಣೇಶನ ವಿಗ್ರಹಗಳನ್ನು ಮೆಣಸೂರು ಭದ್ರಾ ಹಿನ್ನೀರಿನಲ್ಲಿ ವಿಸರ್ಜಿಸಲು ನಿರ್ಧರಿಸಲಾಗಿದೆ. ವಿಸರ್ಜನಾ ಸ್ಥಳದಲ್ಲಿ ಮೆಸ್ಕಾಂನಿಂದ ಬೆಳಕಿನ ವ್ಯವಸ್ಥೆ ಮಾಡಿಕೊಡಲಾಗುವುದು ಎಂದು ತಿಳಿಸಿದರು.
ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಹಬ್ಬಕ್ಕೆ ಸಂಬಂಧಿಸಿದಂತೆ ಇಲಾಖೆಯಿಂದ ವ್ಯಾಟ್ಸ್‌ಆ್ಯಪ್ ಗ್ರೂಪ್ ಮಾಡಿದ್ದು, ಅದರಲ್ಲಿ ಹಬ್ಬದ ಆಚರಣೆ, ಇಲಾಖೆ ಆದೇಶ, ಸೂಚನೆಗಳನ್ನು ಹಾಕಲಾಗುವುದು ಎಂದರು.
ಮಸೀದಿ ಮುಖ್ಯಸ್ಥ ಸೈಯದ್ ಸಾಕ್ ಬಾಷಾ ಮಾತನಾಡಿ, ಸೆ.16ರಂದು ಈದ್ ಮಿಲಾದ್ ಆಚರಿಸುತ್ತೇವೆ. ರಾತ್ರಿ 9 ರಿಂದ ಎಲ್ಲ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ಮಾಡಲಾಗುವುದು. ಮೆರವಣಿಗೆ ಇತರ ಕಾರ್ಯಕ್ರಮಗಳನ್ನು ಆಯೋಜಿಸಿದರೆ ಇಲಾಖೆ ಗಮನಕ್ಕೆ ತರಲಾಗುವುದು. ಗಣೇಶೋತ್ಸವಕ್ಕೆ ನಮ್ಮ ಶುಭಾಶಯಗಳು. ಎಲ್ಲರೂ ಹಬ್ಬಗಳನ್ನು ಶಾಂತಿಯುತವಾಗಿ ಆಚರಿಸೋಣ ಎಂದರು.
ಮೆಸ್ಕಾಂ ಜೆಇ ಸುರೇಶ್ ಮಾತನಾಡಿ, ವಿದ್ಯುತ್ ತಂತಿ ಹಾದು ಹೋಗಿರುವ ಕೆಳಗೆ ಪೆಂಡಾಲ್ ನಿರ್ಮಿಸಬಾರದು. ಶುಲ್ಕ ಪಾವತಿಸಿ ವಿದ್ಯುತ್ ಸಂಪರ್ಕ ಪಡೆಯಬೇಕು. ಸುರಕ್ಷತೆಗೆ ಪ್ರಾಮುಖ್ಯತೆ ನೀಡಿ ಎಂದು ತಿಳಿಸಿದರು.
ತಾಪಂ ನರೇಗಾ ಸಹಾಯಕ ನಿರ್ದೇಶಕ ಎನ್.ಎಲ್.ಮನೀಶ ಮಾತನಾಡಿ, ಪ್ಲಾಸ್ಟಿಕ್ ಬಳಸಬೇಡಿ. ಗ್ರಾಮದ ಸ್ವಚ್ಛತೆಗೆ ಗ್ರಾಪಂ ಸಿಬ್ಬಂದಿ ಜತೆ ಸಹಕರಿಸಬೇಕೆಂದು ಮನವಿ ಮಾಡಿದರು.
ತಹಸೀಲ್ದಾರ್ ತನುಜಾ ಟಿ. ಸವದತ್ತಿ ಮಾತನಾಡಿ, ಸರ್ಕಾರದ ಆದೇಶ ಹಾಗೂ ಮಾರ್ಗಸೂಚಿಯಂತೆ ಹಬ್ಬ ಆಚರಿಸಿ. ಶಾಂತಿಗೆ ಭಂಗ ತರುವಂತಹ ಘಟನೆಗಳಿಗೆ ಆಸ್ಪದ ನೀಡಬೇಡಿ ಎಂದರು.
ಪಪಂ ಮುಖ್ಯಾಧಿಕಾರಿ ಆರ್.ವಿ.ಮಂಜುನಾಥ್, ತಾಲೂಕಿನ ವಿವಿಧ ಗಣೇಶೋತ್ಸವ ಆಚರಣಾ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು, ವಿವಿಧ ಮಸೀದಿಗಳ ಮುಖ್ಯಸ್ಥರು, ಹಿಂದು ಹಾಗೂ ಮುಸ್ಲಿಂ ಸಮುದಾಯದ ಮುಖಂಡರು, ಪಿಡಿಒಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net