ಗಣೇಶೋತ್ಸವ ಮೂರ್ತಿಗಳ ತಯಾರಿಕೆಗೆ ಪೇಜಾವರ ಶ್ರೀ ಚಾಲನೆ

Pejavara
Published on

ಮೈಸೂರು: ಮೈಸೂರು ಧಾರ್ಮಿಕ ಪ್ರತಿಷ್ಠಾನ ಮತ್ತು ಮೈಸೂರು ಗಣೇಶ ಉತ್ಸವ ಸಮಿತಿ ಸೆ.16 ರಿಂದ 24ರವರೆಗೆ ಗಣೇಶೋತ್ಸವ ಹಮ್ಮಿಕೊಂಡಿದ್ದು, ಈ ಪ್ರಯುಕ್ತ ನಗರದ ಜೆಎಲ್‌ಬಿ ರಸ್ತೆಯ ಮಾಧವ ಕೃಪಾದಲ್ಲಿ ಶುಕ್ರವಾರ ಗಣೇಶೋತ್ಸವ ಮೂರ್ತಿ ತಯಾರಿಕೆಗೆ ಚಾಲನೆ ದೊರೆಯಿತು.

ಶ್ರೀ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಮೃತ್ತಿಕೆ ಹಾಗೂ ಸಪ್ತ ನದಿಗಳ ಪವಿತ್ರ ತೀರ್ಥಕ್ಕೆ ಪೂಜೆ ಸಲ್ಲಿಸುವ ಮೂಲಕ ಈ ಬಾರಿಯ ಗಣೇಶೋತ್ಸವ ಮೂರ್ತಿ ತಯಾರಿಕೆಗೆ ಚಾಲನೆ ನೀಡಿದರು. 21 ಪುಣ್ಯ ಕ್ಷೇತ್ರಗಳಿಂದ ತರಿಸಲಾದ ಮೃತ್ತಿಕೆ ಹಾಗೂ ಗಂಗಾ, ಯಮುನಾ, ಗೋದಾವರಿ, ತುಂಗಾ, ಕಾವೇರಿ ಸೇರಿದಂತೆ ಸಪ್ತ ನದಿಗಳ ಪವಿತ್ರ ತೀರ್ಥ ಬಳಸಿ ಪರಿಸರ ಸ್ನೇಹಿ ಗಣೇಶೋತ್ಸವ ಮೂರ್ತಿ ತಯಾರಿಸಲಾಗುವುದು.

ಈ ಸಂದರ್ಭ ಶಾಸಕ ಟಿ.ಎಸ್.ಶ್ರೀವತ್ಸ, ಮೇಯರ್ ಶಿವಕುಮಾರ್, ವಿಜಯ ವಿಠ್ಠಲ ವಿದ್ಯಾಸಂಸ್ಥೆ ಕಾರ್ಯದರ್ಶಿ ವಾಸುದೇವ ಭಟ್, ಗಣೇಶ ಉತ್ಸವ ಸಮಿತಿ ಸದಸ್ಯ ಮಂಜುನಾಥ್, ಪ್ರತಿಷ್ಠಾನದ ಅಧ್ಯಕ್ಷ ಚರಣ್, ಸದಸ್ಯ ಮೋಹಿತ್ ಅರಸ್ ಇದ್ದರು.

ಕಾರ್ಯಾಗಾರ: ಗಣೇಶೋತ್ಸವ ಹಿನ್ನೆಲೆಯಲ್ಲಿ ಸೆ.16 ರಂದು ಮೈಸೂರು ಧಾರ್ಮಿಕ ಪ್ರತಿಷ್ಠಾನ ಮತ್ತು ಮೈಸೂರು ಗಣೇಶ ಉತ್ಸವ ಸಮಿತಿಯು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಹಕಾರದೊಂದಿಗೆ ಸಾರ್ವಜನಿಕರು ಹಾಗೂ ಶಾಲಾ ಮಕ್ಕಳಿಗೆ ಪರಿಸರಸ್ನೇಹಿ ಗಣೇಶ ಮೂರ್ತಿ ತಯಾರಿಸುವ ಕಾರ್ಯಾಗಾರವನ್ನು ನಗರದ ವಿವಿಧ ಶಾಲೆಗಳಲ್ಲಿ ಹಮ್ಮಿಕೊಳ್ಳಲಾಗುವುದು. 5 ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ಪರಿಸರ ಸ್ನೇಹಿ ಗಣೇಶ ವಿಗ್ರಹ ತಯಾರಿಸುವ ತರಬೇತಿ ನೀಡುವ ಗುರಿ ಹೊಂದಲಾಗಿದೆ ಎಂದು ಮೈಸೂರು ಗಣೇಶ ಉತ್ಸವ ಸಮಿತಿ ಸದಸ್ಯ ಮಂಜುನಾಥ್ ಹೇಳಿದರು.

ಮಕ್ಕಳು ತಾವು ತಯಾರಿಸಿದ ಬೀಜದುಂಡೆಯ ಗಣೇಶೋತ್ಸವ ಮೂರ್ತಿಯನ್ನು ಮನೆಗಳಲ್ಲಿ ಪೂಜಿಸಿ ನಂತರ ಮನೆಯ ಬಳಿಯಲ್ಲಿಯಲ್ಲಿಯೇ ವಿಸರ್ಜಿಸುತ್ತಾರೆ. ಗಣೇಶೋತ್ಸವ ಮೂರ್ತಿಯಲ್ಲಿರುವ ಬೀಜವು ನಂತರ ಮೊಳಕೆಯೊಡೆದು ಮರವಾಗಲಿದ್ದು, ಗಣೇಶೋತ್ಸವ ಮೂಲಕ ಪರಿಸರ ಉಳಿವಿಗೆ ಕೊಡುಗೆ ನೀಡಿದಂತಾಗಲಿದೆ. ಗಣೇಶೋತ್ಸವ ಪ್ರಯುಕ್ತ ಪ್ರತಿನಿತ್ಯ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ವಿವಿಧ ಸ್ಪರ್ಧೆಗಳನ್ನು ನಡೆಸಲಾಗುವುದು. ಅಲ್ಲದೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದರು.

ನಗರದಲ್ಲಿ ವಿವಿಧ ಸಂಘ ಸಂಸ್ಥೆಗಳಿಂದ ಪ್ರತಿಷ್ಠಾಪಿಸುವ 50ಕ್ಕೂ ಹೆಚ್ಚು ಗಣೇಶೋತ್ಸವ ಮೂರ್ತಿಗಳ ಸಾಮೂಹಿಕ ವಿಸರ್ಜನೆ ಸೆ.24 ರಂದು ಹಮ್ಮಿಕೊಳ್ಳಲಾಗಿದ್ದು, ಅಂದು ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಆವರಣದಲ್ಲಿ ಸಂಜೆ 4ಕ್ಕೆ ಎಲ್ಲ ಉತ್ಸವ ಮೂರ್ತಿಗಳು ಒಟ್ಟು ಸೇರಲಿದ್ದು, ನಂತರ ಸಭಾ ಕಾರ್ಯಕ್ರಮ ನಡೆಸಿ ಶ್ರೀರಂಗಪಟ್ಟಣದಲ್ಲಿ ಉತ್ಸವ ಮೂರ್ತಿಗಳನ್ನು ವಿಸರ್ಜಿಸಲಾಗುವುದು ಎಂದರು. ಸುದ್ದಿಗೋಷ್ಠಿಯಲ್ಲಿ ಪ್ರತಿಷ್ಠಾನದ ಅಧ್ಯಕ್ಷ ಚರಣ್, ಸದಸ್ಯ ಮೋಹಿತ್ ಅರಸ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net