

ಮೈಸೂರು: ಗಣೇಶೋತ್ಸವ ಸಂಭ್ರಮವನ್ನು ಎರಡು ವರ್ಷ ಕೋವಿಡ್ ಸೋಂಕು ಕಸಿದು ಕೊಂಡಿತ್ತು. ಆದರೆ, ಈ ಬಾರಿ ಕೋವಿಡ್ ಸೋಂಕು ಸಂಪೂರ್ಣ ದೂರವಾದ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ನಗರಿ ಮೈಸೂರಿನ ಜನರು ಸಡಗರ ಸಂಭ್ರಮದೊಂದಿಗೆ ಗಣೇಶ ಚುತುರ್ಥಿ ಹಬ್ಬವನ್ನು ಆಚರಿಸಿದರು.
ಕೋವಿಡ್ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷ ಗಣೇಶೋತ್ಸವ ಮೂರ್ತಿಗಳನ್ನು ತಯಾರಿಸಿರಲಿಲ್ಲ. ಹೀಗಾಗಿ ಮನೆಗಳಲ್ಲೂ ಹಬ್ಬದ ಸಂಭ್ರಮದ ಕಾಣಿಸಿಕೊಂಡಿರಲಿಲ್ಲ. ಈ ಬಾರಿ ಮನೆಗಳಲ್ಲಿ, ಬೀದಿ ಬೀದಿಗಳಲ್ಲಿ, ದೇವಸ್ಥಾನಗಳಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿತು. ನಗರದ ಎಲ್ಲ ಬಡಾವಣೆಗಳಲ್ಲೂ ಸಾರ್ವಜನಿಕರು ವಿವಿಧ ಗಣೇಶೋತ್ಸವ ಸಮಿತಿ ನೇತೃತ್ವದಲ್ಲಿ ಗಣೇಶೋತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದರು. ಸಾಕಷ್ಟು ಕಡೆಗಳಲ್ಲಿ ಮಕ್ಕಳು ಸಹ ಚಂದ ಎತ್ತಿ ಗಣೇಶೋತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಹಬ್ಬವನ್ನು ಸಂಭ್ರಮದಿಂದ ಬರ ಮಾಡಿಕೊಂಡರು.
ಗಣೇಶ ಚತುರ್ಥಿ ಪ್ರಯುಕ್ತ ನಗರದ ವಿವಿಧ ದೇವಸ್ಥಾನಗಳಲ್ಲಿ ಮಂಗಳವಾರ ಮತ್ತು ಬುಧವಾರ ವಿಶೇಷ ಪೂಜಾ ಕೈಂಕರ್ಯಗಳು ನಡೆಯಿತು. ಗಣಪತಿ ದೇವಸ್ಥಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಕಂಡು ಬಂದರು. ಭಕ್ತಾದಿಗಳು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ಪುನೀತರಾದರು. ದೇವಸ್ಥಾನಗಳಲ್ಲಿ ಬುಧವಾರ ಬೆಳಗ್ಗೆ ಗಣಪತಿಗೆ ಅಭಿಷೇಕ, ಗಣಹೋಮ, ಮಹಾ ಸಂಕಲ್ಪ, ಗಂಗಾಪೂಜೆ, ತೈಲಾಭಿಷೇಕ, ಕ್ಷೀರಾಭಿಷೇಕ, ಪಂಚಾಮೃತ, ಮಹಾರುದ್ರಾಭಿಷೇಕ, ಮಹಾನೈವೇದ್ಯ, ಮಹಾಮಂಗಳಾರತಿ, ಸಹಸ್ರಬಿಲ್ವ ದೂರ್ವ, ಕುಂಕುಮ ಅರ್ಚನೆ, 1008 ಮೋದಕಗಳಿಂದ ಮಹಾ ಗಣಪತಿ ಹೋಮ, 108 ತೆಂಗಿನ ಕಾಯಿಗಳಿಂದ ವಿದ್ಯಾಗಣಪತಿ ಹೋಗಮ ಸೇರಿದಂತೆ ವಿವಿಧ ದೇವತಾ ಕಾರ್ಯಗಳು ನಡೆಯಿತು.