

ಬೆಳಗಾವಿ : ಇಡೀ ದೇಶದಲ್ಲಿಯೇ ಗಣಪತಿ ಉತ್ಸವ ಮಾಡುವ ಎರಡನೇ ದೊಡ್ಡ ನಗರವಾಗಿ ಬೆಳಗಾವಿ ಗುರುತಿಸಿಕೊಂಡಿದೆ. ಇಂತಹ ಐತಿಹಾಸಿಕ ಪರಂಪರೆಯ ಇತಿಹಾಸವುಳ್ಳ ಬೆಳಗಾವಿ ಗಣೇಶ ಉತ್ಸವವನ್ನು ಅಚ್ಚಕಟ್ಟಾಗಿ ಆಚರಿಸುವ ನಿಟ್ಟಿನಲ್ಲಿ ರಸ್ತೆ ದುರಸ್ಥಿ, ವಿದ್ಯುತ್ ದೀಪ ಅಳವಡಿಕೆ ಹಾಗೂ ಗಣೇಶ ವಿಸರ್ಜಣೆಗೆ ಹೊಂಡ-ಬಾವಿ ಹೂಳೆತ್ತಿ, ಸ್ವಚ್ಛಗೊಳಿಸಬೇಕು ಎಂದು ಶ್ರೀಲೋಕಮಾನ್ಯ ತಿಲಕ ಗಣೇಶ ಮಹಾಮಂಡಳದ ವತಿಯಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ನಗರದಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಗುರುವಾರ ಜಮಾಯಿಸಿದ ಮಹಾಮಂಡಳಿ ಪದಾಧಿಕಾರಿಗಳು, ಮಹಾನಗರದಲ್ಲಿ ನೂರಾರು ವರ್ಷಗಳಿಂದ ಭಾದ್ರಪದ ಮಾಸದಲ್ಲಿ ಸಾರ್ವಜನಿಕ ಗಣೇಶ ಉತ್ಸವ ಮಾಡುತ್ತ ಬರಲಾಗಿದ್ದು, ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡುವ ಕಪಿಲೇಶ್ವರ ದೇವಸ್ಥಾನದ ಕರೆ-ಬಾವಿ- ಜಕ್ಕೇರಿ ಹೊಂಡಗಳ ಹೂಳೆತ್ತಿ, ಸ್ವಚ್ಛ ಮಾಡಬೇಕು. ಮಳೆಗೆ ರಸ್ತೆಗಳೆಲ್ಲ ಹದಗಟ್ಟು ಗುಂಡಿ ಬಿದ್ದಿರುವುದರಿಂದ ರಸ್ತೆ ಸುಧಾರಣೆ ಮಾಡಬೇಕು. ಸಚ್ಛತೆಯ ಕಡೆಗೂ ಗಮನ ಹರಿಸಬೇಕು ಎಂದು ಮನವಿ ಮಾಡಿದರು.
ಗಣೇಶ ಮಂಟಪಗಳಿಗೆ ದೀಪಾಲಂಕಾರ ಮಾಡುವುದರಿಂದ, ವಿದ್ಯುತ್ ತಂತಿಗಳ ವಿಷಯವಾಗಿ ಒಂದಿಷ್ಟು ಕಾಳಜಿ ವಹಿಸಬೇಕಾಗಿದೆ. ಗಣೇಶ ಉತ್ಸವದ ಮೆರವಣಿಗೆ ದೊಡ್ಡ ಪ್ರಮಾಣದಲ್ಲಿ ನಡೆಯುವುದರಿಂದ ಈಗಲೇ ಮಾರ್ಗವನ್ನು ಗುರುತಿಸಿ, ಕ್ರಮಕೈಕೊಳ್ಳಬೇಕು. ಲಕ್ಷಾಂತರ ಜನರು ಗಣೇಶ ಮೂರ್ತಿಗಳನ್ನು ವೀಕ್ಷಿಸಲು ಬರುವುದರಿಂದ ಯಾವುದೇ ತೊಂದರೆಯಾಗದಂತೆ ಭದ್ರತಾ ವ್ಯವಸ್ಥೆ ಕಲ್ಪಿಸಬೇಕು. ಮಹಿಳೆಯರಿಗೆ ವಿಶೇಷವಾದ ಭದ್ರತೆ ಒದಗಸಿಬೇಕು. ಅಲ್ಲದೇ, ಇಲೆಕ್ಟ್ರಾನಿಕ್ಸ್ ವಸ್ತುಗಳು, ಬಟ್ಟೆಗಳ ಖರೀದಿಗಾಗಿ ಲಕ್ಷಾಂತರ ಜನ ಬೆಳಗಾವಿ ನಗರಕ್ಕೆ ಬರುವುದರಿಂದ ಬಟ್ಟೆ ಅಂಗಡಿ, ಇಲೆಕ್ಟ್ರಾನಿಕ್ಸ್ ಇನ್ನಿತರ ಅಂಗಡಿಗಳನ್ನು ತಡರಾತ್ರಿ ವರೆಗೂ ತೆರೆಯಲು ಅವಕಾಶ ಕಲ್ಪಿಸುವುದು ಸೇರಿದಂತೆ ಗಲಭೆಗಳು ನಡೆಯದಂತೆ ಜಿಲ್ಲಾಡಳಿತ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಅಧ್ಯಕ್ಷ ವಿಜಯ ಜಾದವ್, ಕಾರ್ಯದರ್ಶಿ ಹೇಮಂತ ಹವಳ, ಗಿರಿಶ ದೋಮಡಿ, ಪ್ರವೀಣ , ಸುನಿಲ ಜಾದವ್, ನಿತಿನ್ ಜಾಧವ್, ರವಿ ಕಲಘಟಗಿ, ಡಾ.ಬಸವರಾಜ ಬಾಗೋಜಿ, ಸೋಮು ಹಿರೇಮಠ, ಸುನಿಲ ಕನ್ನೇರಿ, ರೋಹಿತ್ ರಾವಳ, ಅರುಣ ಪಾಟೀಲ ಸೇರಿದಂತೆ ಇತರರು ಇದ್ದರು.