

ಬೆಳಗಾವಿ: ಗಣೇಶೋತ್ಸವ ಮಂಡಳಿಗಳಿಗೆ ಸುಲಭ ಹಾಗೂ ಶೀಘ್ರ ಅನುಮತಿ ನೀಡಲು ಅನುಕೂಲವಾಗುವಂತೆ ಆಯಾ ಪೊಲೀಸ್ ಠಾಣೆಗಳಲ್ಲೇ ಏಕಗವಾಕ್ಷಿ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದರು.
ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಜರುಗಿದ ಗಣೇಶೋತ್ಸವ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಹೆಸ್ಕಾಂ, ಪೊಲೀಸ್, ಮಹಾನಗರ ಪಾಲಿಕೆ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಕಮೀಷನರೇಟ್ ವ್ಯಾಪ್ತಿಯ 12 ಪೊಲೀಸ್ ಠಾಣೆಯ ಏಕಗವಾಕ್ಷಿ ಕೇಂದ್ರದಲ್ಲಿ ಬೆಳಗ್ಗೆ 8ರಿಂದ ರಾತ್ರಿ 8 ಗಂಟೆವರೆಗೆ ಉಪಸ್ಥಿತರಿದ್ದು ಅನುಮತಿ ನೀಡಲಿದ್ದಾರೆ ಎಂದರು.
ಏಕಗವಾಕ್ಷಿ ತಂಡಗಳಿಗಾಗಿ ಅಗತ್ಯ ಸಿಬ್ಬಂದಿ ನಿಯೋಜಿಸಬೇಕು. ಸಾರ್ವಜನಿಕ ಸಂಚಾರಕ್ಕೆ ತೊಂದರೆಯಾಗದಂತೆ ಗಣೇಶ ಮಂಟಪ ನಿರ್ಮಿಸಬೇಕು. ಸಾರ್ವಜನಿಕರ ಸಂಚಾರಕ್ಕೆ, ಮಹಾನಗರ ಪಾಲಿಕೆಯ ಕಸ ವಿಲೇವಾರಿ ಹಾಗೂ ಆಂಬುಲೆನ್ಸ್ ಸಂಚಾರಕ್ಕೆ ತೊಂದರೆಯಾಗದಂತೆ ಮಂಟಪದ ಅಳತೆ ಮಿತಿಯೊಳಗೆ ಇರುವಂತೆ ನಿಗಾ ವಹಿಸಬೇಕು. ಗಣೇಶ ಮೂರ್ತಿಗಳ ಆಗಮನ ಹಾಗೂ ವಿಸರ್ಜನೆ ಸಂದರ್ಭದಲ್ಲಿ ರಸ್ತೆಯಲ್ಲಿನ ವಿದ್ಯುತ್ ಹಾಗೂ ವಿವಿಧ ದೂರ ಸಂಪರ್ಕ ಕೇಬಲ್‌ಗಳನ್ನು ಮೇಲಸ್ತರಕ್ಕೆ ಎತ್ತರಿಸಲು ಸೂಚಿಸಿದರು. ಅರಣ್ಯ ಇಲಾಖೆ ವತಿಯಿಂದ ಗಿಡಗಳ ರೆಂಬೆಗಳನ್ನು ಕತ್ತರಿಸಲು ಕ್ರಮ ವಹಿಸಬೇಕು. ಹೆಸ್ಕಾಂ, ಪೊಲೀಸ್, ಪಾಲಿಕೆ, ಅರಣ್ಯ, ಅಗ್ನಿಶಾಮಕ, ಬಿಎಸ್‌ಎನ್‌ಎಲ್ ಹಾಗೂ ಇತರ ಇಲಾಖೆ ಅಧಿಕಾರಿಗಳು ಮೆರವಣಿಗೆ ಮಾರ್ಗದಲ್ಲಿ ಜಂಟಿಯಾಗಿ ಸಮೀಕ್ಷೆ ಮಾಡಿ ನಿಖರ ವರದಿ ಒದಗಿಸಲು ಸೂಚಿಸಿದರು.
ಗಣೇಶ ಆಗಮನ ಹಾಗೂ ವಿಸರ್ಜನೆ ಮಾರ್ಗದಲ್ಲಿನ ರಸ್ತೆ ದುರಸ್ತಿಗೆ ಪಾಲಿಕೆ ಕ್ರಮ ವಹಿಸಬೇಕು. ಕತ್ತಲೆ ಹೆಚ್ಚಿರುವ ಪ್ರದೇಶಗಳಲ್ಲಿ ಬೆಳಕಿನ ವ್ಯವಸ್ಥೆ, ಕಣ್ಗಾವಲು ಸ್ಥಾವರ ಹಾಗೂ ಸಾರ್ವಜನಿಕರ ಗ್ಯಾಲರಿ ನಿರ್ಮಾಣಕ್ಕೆ ಸೂಚಿಸಿದರು.
ನಗರದಲ್ಲಿ ಬಂಟಿಂಗ್, ಬ್ಯಾನರ್ ಅಳವಡಿಕೆ ಕುರಿತು ನೀಡಲಾಗುವ ಅನುಮತಿಗಳ ವಿವರಗಳನ್ನು ಪೊಲೀಸ್ ಇಲಾಖೆಗೆ ನೀಡಲು ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು. ಪಿಒಪಿ ಗಣೇಶ ಮೂರ್ತಿ ಬಳಸದಂತೆ ಜಾಗೃತಿ ಮೂಡಿಸುವಂತೆ ಪಾಲಿಕೆಗೆ ತಿಳಿಸಿದರು.
ಪೊಲೀಸ್ ಆಯುಕ್ತ ಇಡಾ ಮಾರ್ಟಿನ್ ಮಾರ್ಬನ್ಯಾಂಗ್, ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ, ಡಿಸಿಪಿ ರೋಹನ ಜಗದೀಶ, ಎಸಿಪಿ ಶ್ರೀಕಾಂತ ಕಟ್ಟಿಮನಿ, ಬೆಳಗಾವಿ ಉಪವಿಭಾಗಾಧಿಕಾರಿ ಶ್ರವಣ ನಾಯಕ ಇತರರು ಇದ್ದರು.