

ಮನೋಜ ಮೊಹಿತೆ ವಿಜಯಪುರ
ನಗರದ ವಿವಿಧ ಬಡಾವಣೆಗಳಲ್ಲಿ ಸ್ಥಾಪಿಸಿದ ಸಾರ್ವಜನಿಕ ಗಣೇಶ ಮೂರ್ತಿಗಳ ವಿಸರ್ಜನೆ ಶುಕ್ರವಾರ ನಡೆಯಲಿದ್ದು, ವಿಘ್ನ ವಿನಾಶಕನಿಗೆ ಅದ್ದೂರಿ ವಿದಾಯ ಹೇಳಲು ಮಂಡಳಿಗಳು ಸಕಲ ಸಿದ್ಧತೆ ನಡೆಸಿವೆ.
ಬಹುತೇಕ ಮಂಡಳಿಗಳು ಡಿಜೆ ಸಂಗೀತದೊಂದಿಗೆ ವಿಸರ್ಜನೆ ಮೆರವಣಿಗೆ ನಡೆಸಲು ಮುಂದಾಗಿದ್ದರೆ, ಜೋರಾಪುರ ಪೇಟೆಯ ಶಂಕರಲಿಂಗ ದೇವಸ್ಥಾನದ ಸಂಕಲ್ಪ ಸಿದ್ಧಿ ಗಜಾನನ ತರುಣ ಮಂಡಳಿ ಮಾತ್ರ ದೇಶಿ ಸಂಸ್ಕೃತಿಯೊಂದಿಗೆ ಗಣಪತಿಯನ್ನು ಬೀಳ್ಕೊಡಲು ಸಿದ್ಧತೆ ಕೈಗೊಂಡಿದೆ.
ಪಾಶ್ಚಾತ್ಯ ಶೈಲಿಯ ಡಿಜೆ ಸಂಸ್ಕೃತಿಯಿಂದಾಗಿ ನಶಿಸಿ ಹೋಗುತ್ತಿರುವ ನಮ್ಮ ದೇಶಿ ಸಂಸ್ಕೃತಿ ಉಳಿಸಲು ಸಂಕಲ್ಪ ಸಿದ್ಧಿ ಗಜಾನನ ತರುಣ ಮಂಡಳಿ ವಿಭಿನ್ನ ಹೆಜ್ಜೆ ಇಟ್ಟಿದೆ.
ಪ್ರತಿ ವರ್ಷವೂ ಒಂದಿಲ್ಲೊಂದು ಹೊಸ ಪ್ರಯತ್ನ ಮಾಡುತ್ತಿರುವ ಮಂಡಳಿಯವರು, ಈ ಬಾರಿ ಸ್ವತಃ ತಾವೇ ಪ್ರಸಿದ್ಧ ನಾಸಿಕ್ ಡೋಲು ಮತ್ತು ವಾರಕರಿ ನೃತ್ಯ ಮಾಡಲು ಹಲವು ದಿನಗಳಿಂದ ತಾಲೀಮು ನಡೆಸಿದ್ದು, ಏಳನೇ ದಿನ ನಡೆಯುವ ಮಂಡಳಿಯ ಗಣೇಶ ವಿಸರ್ಜನೆಯಲ್ಲಿ ತಮ್ಮ ಕಲೆ ಪ್ರದರ್ಶಿಸಲು ಮುಂದಾಗಿದ್ದಾರೆ. 30 ಜನ ಡೋಲು ವಾದಕರು, 15 ಜನ ಡಮರು, 15 ಜನ ಚಳ್ಳಂ, 5 ಶಂಖ ವಾದಕರು ಮತ್ತು 10 ಜನ ತಾಶಾ ವಾದಕರು ಸೇರಿ ಒಟ್ಟು 90 ಜನರಿರುವ ತಂಡದಲ್ಲಿ ಮಹಿಳೆಯರೇ ಅಧಿಕ ಸಂಖ್ಯೆಯಲ್ಲಿದ್ದಾರೆ.
ಹದಿನೈದು ದಿನಗಳಿಂದ ನಿತ್ಯವೂ ಶಂಕರಲಿಂಗ ದೇವಸ್ಥಾನದಲ್ಲಿ ತಾಲೀಮು ನಡೆಸಿದ್ದು, ಸೊಲ್ಲಾಪುರದ ಡ್ಯಾನ್ಸ್ ಮಾಸ್ಟರ್ ಅಕ್ಷಯ ಭಡಂಗೆ ತರಬೇತಿ ನೀಡುತ್ತಿದ್ದಾರೆ.
ಗಣೇಶ ಹಬ್ಬ ನೋಡಲು ಮೊದಲೆಲ್ಲ ಮಹಾರಾಷ್ಟ್ರದ ಪುಣೆ ಮತ್ತು ಮುಂಬೈ ಮಹಾನಗರಗಳಿಗೆ ತೆರಳುತ್ತಿದ್ದೇವು. ಅಲ್ಲಿನ ಗಣೇಶನ ಮೆರವಣಿಗೆ, ಅಲಂಕಾರ ಮತ್ತು ನಾಸಿಕ್ ಡೋಲು ನಮ್ಮನ್ನು ಹೆಚ್ಚು ಆಕರ್ಷಿಸಿತ್ತು. ನಾಸಿಕ್ ಡೋಲು ಕಲಾ ತಂಡದವರು ಇಲ್ಲಿಗೆ ಬಂದು ಪ್ರದರ್ಶನ ನೀಡಲು 8-10 ಲಕ್ಷ ರೂ. ಖರ್ಚಾಗುತ್ತದೆ. ಅದನ್ನು ನಾವೇ ಕಲಿತು ಪ್ರದರ್ಶಿಸಬೇಕೆಂಬ ಸಂಕಲ್ಪದೊಂದಿಗೆ ನಮ್ಮ ಮಂಡಳಿಯವರು ನಾಸಿಕ್ ಡೋಲು ನೃತ್ಯ ಕಲಿತು ಪ್ರದರ್ಶನಕ್ಕೆ ಸಿದ್ಧರಾಗಿದ್ದಾರೆ ಎಂದು ಮಂಡಳಿ ನೇತೃತ್ವ ವಹಿಸಿರುವ ಶಿವರುದ್ರ ಬಾಗಲಕೋಟ ಅವರು ಪತ್ರಿಕೆಗೆ ತಿಳಿಸಿದರು.