

ಹುಬ್ಬಳ್ಳಿ: ಪ್ರತಿ ವರ್ಷದಂತೆ ನಗರದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವವನ್ನು ಅದ್ದೂರಿಯಾಗಿ ಆಚರಿಸುವುದು ಹಾಗೂ ಸೆ. 19ರಂದು ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುವುದು, ಸೆ. 28ರಂದು ವಿಸರ್ಜಣೆ ಕಾರ್ಯಕ್ರಮ ಏರ್ಪಡಿಸಲು ನಿರ್ಧರಿಸಲಾಯಿತು.
ಹುಬ್ಬಳ್ಳಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಗಳ ಮಹಾಮಂಡಳದ ವತಿಯಿಂದ ನಗರದ ಮೂರು ಸಾವಿರ ಮಠದ ಸಭಾಭವನದಲ್ಲಿ ಶನಿವಾರ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಸಮಿತಿ ಪದಾಧಿಕಾರಿಗಳ ಅಭಿಪ್ರಾಯ ಪಡೆದು ಈ ತೀರ್ಮಾನ ಕೈಗೊಳ್ಳಲಾಯಿತು. ತಿಥಿ ಲೋಪವಾಗಿದ್ದರಿಂದ ಈ ಬಾರಿ 10 ದಿನ ಗಣೇಶ ಪ್ರತಿಷ್ಠಾಪಿಸಲಾಗುವುದು ಎಂದು ತಿಳಿಸಲಾಯಿತು.
ಉತ್ಸವ ನೋಡಲು ಹೆಚ್ಚು ಜನರು ಬರಬೇಕು. ಅದಕ್ಕಾಗಿ ಆಕರ್ಷಕ ಮಂಟಪ, ಲೈಟಿಂಗ್, ಅಲಂಕಾರ ಮಾಡಬೇಕು, ಕಲಾವಿದರು, ಗಾಯಕರನ್ನು ಕರೆಸಿ ಕಾರ್ಯಕ್ರಮಗಳನ್ನು ಮಾಡಬೇಕು, ಮನೆಗೆ ಉಚಿತ ವಿದ್ಯುತ್ ಕೊಟ್ಟಂತೆ ಸಾರ್ವಜನಿಕ ಗಣೇಶೋತ್ಸವಕ್ಕೆ ಸರ್ಕಾರ ಉಚಿತ ವಿದ್ಯುತ್ ಕೊಡಬೇಕು ಎಂದು ಸಮಿತಿ ಪದಾಧಿಕಾರಿಗಳು ಆಗ್ರಹಿಸಿದರು.
ಉತ್ಸವದ ಮೂಲಕ ಪ್ರತಿಭಾವಂತರಿಗೆ ವೇದಿಕೆ ಕಲ್ಪಿಸಿಕೊಡಬೇಕು, ನಾವು ಮಾಡುವ ಉತ್ಸವ ಮತ್ತೊಬ್ಬರಿಗೆ ತೊಂದರೆಯಾಗದಂತೆಯೂ ಗಮನ ಹರಿಸಬೇಕು. ಉತ್ಸವ ಸೌಹಾರ್ದಯುತವಾಗಿರಲಿ ಎಂಬ ಅಭಿಪ್ರಾಯಗಳನ್ನು ಸದಸ್ಯರು ನೀಡಿದರು.
ಗಣೇಶ ಮೂತಿರ್ ವಿಸರ್ಜಣೆಗೆ ಪ್ರತಿ ಬಡಾವಣೆಯ ಓಣಿಯಲ್ಲಿ ನೀರಿನ ಟ್ಯಾಂಕರ್ ವ್ಯವಸ್ಥೆ ಮಾಡಬೇಕು. ಇದರಿಂದ ಪರಿಸರ ರಕ್ಷಣೆಗೆ ಅನುಕೂಲವಾಗಲಿದೆ ಎಂದು ಅನೇಕರು ಸೂಚಿಸಿದರು.
ಮಹಾಮಂಡಳ ಉಪಾಧ್ಯಕ್ಷ ಶಾಂತರಾಜ ಪೋಳ ಮಾತನಾಡಿ, ಮೈಸೂರು ದಸರಾ ಮಾದರಿಯಲ್ಲಿ ಹುಬ್ಬಳ್ಳಿ ಗಣೇಶೋತ್ಸವ ನಡೆಯುತ್ತದೆ. ಇದಕ್ಕೂ ಸರ್ಕಾರ ಆಥಿರ್ಕ ನೆರವು ನೀಡಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಮಹಾಮಂಡಳದ ಅಧ್ಯಕ್ಷ ಮೋಹನ ಲಿಂಬಿಕಾಯಿ ಮಾತನಾಡಿ, ವಿವಿಧ ಗಣೇಶೋತ್ಸವ ಸಮಿತಿಗಳ ಪದಾಧಿಕಾರಿಗಳು ಉತ್ಸವದ ಯಶಸ್ಸಿಗೆ ಅತ್ಯುತ್ತಮ ಸಲಹೆಗಳನ್ನು ನೀಡಿದ್ದಾರೆ. ಎಲ್ಲರ ಸಲಹೆ ಜಾರಿ ಮಾಡಬೇಕಾದರೆ ಮಹಾಮಂಡಳ ಸದೃಡವಾಗಬೇಕು. ಇದಕ್ಕಾಗಿ ಎಲ್ಲರೂ ವಂತಿಗೆಯನ್ನು ಪಾವತಿಸಬೇಕು ಎಂದು ಹೇಳಿದರು.
ಮಹಾಮಂಡಳದ ಗೌರವ ಕಾರ್ಯದರ್ಶಿ ಅಮರೇಶ ಹಿಪ್ಪರಗಿ ಕಾರ್ಯಕ್ರಮ ನಿರ್ವಹಿಸಿದರು.
ಸಂತೋಷ ಕಟ್ಟಿ ಪ್ರಾರ್ಥನೆ ಹಾಡಿದರು.
ಮಹೇಶ ಶೇಟ್, ಶ್ರೀನಿವಾಸ ಬೋಚಗೇರಿ, ಸರಸ್ವತಿ ಮೆಹರವಾಡೆ, ಎಸ್.ಎಸ್. ಕಮಡೊಳ್ಳಿಶೆಟ್ರು, ಸಂತೋಷ ಕಾಟವೆ, ವಿ.ಎಸ್. ಧೋತ್ರದ, ಬಿ.ಎಸ್. ಗಬ್ಬೂರ, ಎ್.ಬಿ. ಬಳ್ಳೊಳ್ಳಿ. ಬಿ.ಆರ್. ಹಿರೇಗೌಡರ, ಎಂ.ಎಸ್. ಶಿರಗಣ್ಣವರ, ಅನಿಲ ಬೇವಿನಕಟ್ಟಿ, ಮೃತ್ಯುಂಜಯ ಮಟ್ಟಿ, ಈಶ್ವರ ನಾಯ್ಕರ, ಇತರರು ಪಾಲ್ಗೊಂಡರು.