

ಚಿಕ್ಕಬಳ್ಳಾಪುರ: ಪರಿಸರ ಸ್ನೇಹಿ ಗೌರಿ ಗಣೇಶ ಹಬ್ಬ ಆಚರಿಸಿ, ನೈಸರ್ಗಿಕ ಜಲ ಸಂಪನ್ಮೂಲ ಸಂರಕ್ಷಿಸುವ ನಿಟ್ಟಿನಲ್ಲಿ ಮಾರ್ಗಸೂಚಿ ಸಲಹೆಗಳನ್ನು ನೀಡಿದೆ.
ಪ್ರತಿ ವರ್ಷದಂತೆ ಈ ಬಾರಿಯು ಸ್ವರ್ಣಗೌರಿ ಹಾಗೂ ವರಸಿದ್ಧಿ ವಿನಾಯಕ ಚತುರ್ಥಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ವಿವಿಧ ಸಂಘ ಸಂಸ್ಥೆಗಳು ಈಗಾಗಲೇ ಸಿದ್ಧತೆಯಲ್ಲಿ ತೊಡಗಿದ್ದು ಸಂಪನ್ಮೂಲ ಕ್ರೋಢೀಕರಣ, ಪ್ರತಿಷ್ಠಾಪನಾ ಸ್ಥಳದಲ್ಲಿ ಸ್ವಚ್ಛತೆ ನಿರ್ವಹಣೆ, ಭಕ್ತರನ್ನು ಸೆಳೆಯುವ ನಿಟ್ಟಿನಲ್ಲಿ ಅಲಂಕೃತ ವಿಶೇಷ ಮಂಟಪಗಳ ನಿರ್ಮಾಣ, ಸಂದೇಶವನ್ನು ಸಾರುವುದಕ್ಕೆ ಪೂರಕವಾಗಿ ಗಣಪನ ಮೂರ್ತಿ ಪ್ರತಿಷ್ಠಾಪನೆ ಸೇರಿದಂತೆ ನಾನಾ ಯೋಜನೆಗಳನ್ನು ರೂಪಿಸಿವೆ. ಇದರ ನಡುವೆ ಪರಿಸರಸ್ನೇಹಿ ಗೌರಿ ಗಣೇಶನ ಹಬ್ಬ ಆಚರಣೆಗೆ ಸಲಹೆ ಸೂಚನೆಗಳನ್ನು ನೀಡಿರುವ ಜಿಲ್ಲಾಡಳಿತವು, ಚಾಚೂ ತಪ್ಪದೇ ಮಾರ್ಗಸೂಚಿ ನಿಯಮಗಳನ್ನು ಪಾಲಿಸಲು ತಿಳಿಸಿದೆ.
*ಪಿಒಪಿ ಮೂರ್ತಿಗಳಿಗಿಲ್ಲ ಅವಕಾಶ
ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿ.ಒ.ಪಿ) ಮತ್ತು ಬಣ್ಣದ ವಿಗ್ರಹಗಳ ಸ್ಥಾಪನೆ, ಬಳಿಕ ಪೂಜಿಸಿದ ನಂತರ ಕೆರೆ, ಬಾವಿ ಸೇರಿದಂತೆ ಜಲಮೂಲಗಳಿಗೆ ವಿಸರ್ಜಿಸಲು ಅವಕಾಶ ಇಲ್ಲ. ಮಾರಕ ರಾಸಾಯಾನಿಕಗಳನ್ನು ಹೊಂದಿರುವ ಮೂರ್ತಿಗಳು ನೀರಿನಲ್ಲಿ ಕರಗಿ, ನೈಸರ್ಗಿಕ ಜಲಮೂಲಗಳು ಕಲುಷಿತಗೊಳಿಸುತ್ತವೆ. ಪರಿಸರದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಜತೆಗೆ ಪ್ರಾಣಿ, ಪಕ್ಷಿ ಹಾಗೂ ಜಲಚರಗಳ ಜೀವಕ್ಕೆ ಅಪಾಯವಾಗುತ್ತದೆ. ಇದೇ ರೀತಿ ಸಾರ್ವಜನಿಕ ಆರೋಗ್ಯಕ್ಕೂ ಧಕ್ಕೆ ಉಂಟಾಗುತ್ತದೆ. ಇದಕ್ಕೆ ರಾಜ್ಯ ಮಾಲಿನ್ಯ ಮಂಡಳಿಯು ಹಬ್ಬದ ಆಚರಣೆಯ ಸಂದರ್ಭದಲ್ಲಿ ನೈಸರ್ಗಿಕ ಜಲ ಮೂಲಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ ಮತ್ತು ಬಣ್ಣ ಲೇಪಿತವಾದ ವಿಗ್ರಹಗಳನ್ನು ಪ್ರತಿಷ್ಠಾಪಿಸಿ, ವಿಸರ್ಜಿಸುವಂತಿಲ್ಲ. ಒಂದು ವೇಳೆ ನಿಯಮವನ್ನು ಉಲ್ಲಂಘಿಸಿದ್ದಲ್ಲಿ ಐಪಿಎಸ್ ಸೆಕ್ಷನ್ 1860 ರ ಪ್ರಕಾರ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಜಿಲ್ಲಾಡಳಿತವು ಎಚ್ಚರಿಕೆ ನೀಡಿದೆ.
*ಅನುಮತಿ ಕಡ್ಡಾಯ
ಸಾರ್ವಜನಿಕ ಸ್ಥಳದಲ್ಲಿ ಗಣಪತಿ ಪ್ರತಿಷ್ಠಾಪನೆಗೆ ಸಂಬಂಧಪಟ್ಟ ಸ್ಥಳೀಯ ಆಡಳಿತ ಸಂಸ್ಥೆಗಳ ಪೂರ್ವಾನುಮತಿಯನ್ನು ಪಡೆಯಬೇಕು.
ಗೌರಿ ಗಣೇಶ ಹಬ್ಬದ ಸಂದರ್ಭದಲ್ಲಿ ಬಣ್ಣ ರಹಿತ ಮಣ್ಣಿನ/ನೈಸರ್ಗಿಕ ಮೂರ್ತಿಗಳೊಂದಿಗೆ ಹಬ್ಬ ಆಚರಿಸಿದ ಬಳಿಕ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಸೇರಿದಂತೆ ಆಯಾ ವ್ಯಾಪ್ತಿಯಲ್ಲಿ ನಿಗದಿತ ಕೆರೆ ಕುಂಟೆ ಪ್ರದೇಶಗಳಲ್ಲಿ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸಂಚಾರಿ ವಾಹನದಲ್ಲಿಯೇ ಮೂರ್ತಿಗಳನ್ನು ವಿಸರ್ಜಿಸಬೇಕು. ಇದೇ ವೇಳೆ ಹಸಿ ಕಸ (ಹೂವು, ಹಣ್ಣು, ಬಾಳೆ ಕಂಬ, ಮಾವಿನ ತೋರಣ ಸೇರಿದಂತೆ ಅಲಂಕಾರಿಕ ವಸ್ತುಗಳು) ಪ್ರತ್ಯೇಕಿಸಿ, ಮೂರ್ತಿಗಳೊಂದಿಗೆ ನೀರಿಗೆ ವಿಸರ್ಜಿಸದೇ ಸ್ಥಳೀಯ ಆಡಳಿತ ಸಂಸ್ಥೆಗಳು ಸಂಗ್ರಹಣ ವಾಹನಕ್ಕೆ ನೀಡಬೇಕು. ಉತ್ಸವದ ಚಪ್ಪರಕ್ಕೆ ಪರಿಸರ ಸ್ನೇಹಿ ವಸ್ತುಗಳನ್ನು ಬಿಟ್ಟು ನಿಷೇಧಿತ ಪ್ಲಾಸ್ಟಿಕ್ ವಸ್ತುಗಳ ಬಳಸಬಾರದು.
*ಗಣಪತಿ ಹಬ್ಬ ಆಚರಣೆಯ ಸಂದರ್ಭದಲ್ಲಿ ಪ್ರತಿಯೊಬ್ಬರು ಪರಿಸರ ಸ್ನೇಹಿ ಕ್ರಮಗಳನ್ನು ಅನುಸರಿಸಬೇಕು. ಮಾರ್ಗಸೂಚಿ ನಿಯಮಗಳನ್ನು ಉಲ್ಲಂಘಿಸಬಾರದು.
ಪಿ.ಎನ್.ರವೀಂದ್ರ, ಜಿಲ್ಲಾಧಿಕಾರಿ, ಚಿಕ್ಕಬಳ್ಳಾಪುರ