

ಚಿಕ್ಕಬಳ್ಳಾಪುರ: ಗಣೇಶ ಚತುರ್ಥಿಗೆ ದಿನಗಣನೇ ಆರಂಭವಾಗಿರುವುದರ ನಡುವೆ ಜಿಲ್ಲಾದ್ಯಂತ ವಿವಿಧ ಬಗೆಯ, ವಿವಿಧ ಗಾತ್ರದ ವಿಘ್ನ ವಿನಾಯಕನ ಮೂರ್ತಿಗಳು ಮಾರುಕಟ್ಟೆಗೆ ಬಂದಿದ್ದು ಲಕ್ಷಾಂತರ ರೂ ಬಂಡವಾಳ ಹೂಡಿರುವ ಮಾರಾಟಗಾರರು ಪ್ರತಿ ಬಾರಿಯಂತೆ ಪ್ರಸಕ್ತ ಹಬ್ಬದ ಸಂದರ್ಭದಲ್ಲೂ ಒಳ್ಳೆಯ ವ್ಯಾಪಾರದ ನಿರೀಕ್ಷೆಯಲ್ಲಿದ್ದಾರೆ.
ಹೌದು! ಸ್ಥಳೀಯ ಜತೆಗೆ ಬೆಂಗಳೂರು, ಆಂಧ್ರದ ತಿರುಪತಿ, ಹಿಂದೂಪುರ ಸೇರಿದಂತೆ ನಾನಾ ಭಾಗಗಳಿಂದ ಪ್ರತಿದಿನ ಆಕರ್ಷಕ ಮೂರ್ತಿಗಳನ್ನು ತರಿಸಿಕೊಳ್ಳುತ್ತಿದ್ದು ಪ್ರಮುಖ ರಸ್ತೆಗಳ ಬದಿ, ಖಾಸಗೀ ಗೋದಾಮಿನಲ್ಲಿಟ್ಟು ಗ್ರಾಹಕರನ್ನು ಸೆಳೆಯಲಾಗುತ್ತಿದೆ. ಗರಿಷ್ಠ 17 ಅಡಿ ಗಣಪನ ಮೂರ್ತಿಗಳು ಕಾಣಿಸುತ್ತಿವೆ. ಕನಿಷ್ಠ 100 ರೂಗಳಿಂದ ಹಿಡಿದು 60 ಸಾವಿರ ರೂಗಳಿಗೂ ಹೆಚ್ಚು ಹಣವನ್ನು ನಿಗದಿಪಡಿಸಲಾಗಿದೆ.
ಜಿಲ್ಲಾ ಕೇಂದ್ರದಲ್ಲಿನ ಬಿ.ಬಿ.ರಸ್ತೆಯ ಕೆಇಬಿ ಕಚೇರಿ, ಸೆಂಥ್ ಕ್ಸೇವಿಯರ್ ಚರ್ಚ್, ಜೀವನ್ ಆಸ್ಪತ್ರೆ ಮುಂಭಾಗ, ಬಜಾರ್ ರಸ್ತೆ, ಭುವನೇಶ್ವರಿ ವೃತ್ತ ಸೇರಿದಂತೆ ಹಲವೆಡೆ 25 ಕ್ಕೂ ಹೆಚ್ಚು ವ್ಯಾಪಾರಿಗಳು 2 ಸಾವಿರಕ್ಕೂ ಹೆಚ್ಚು ಗಣಪತಿ ಮೂರ್ತಿಗಳನ್ನು ಮಾರಾಟಕ್ಕಿಟ್ಟಿದ್ದು ಮುಂಬರುವ ದಿನಗಳಲ್ಲಿ ಮತ್ತಷ್ಟು ತರಿಸಿಕೊಳ್ಳಲಾಗುತ್ತಿದೆ. ನವಿಲು, ರಾಜಾಸನ, ವೀಣೆಯ ಸೇರಿದಂತೆ ವಿವಿಧ ಮಾದರಿಯಲ್ಲಿನ ಗಣಪ ಗಮನ ಸೆಳೆಯುತ್ತಿದ್ದಾನೆ.
* ಪರಿಶೀಲನೆ ಪ್ರಕ್ರಿಯೆ
ಪ್ರಸ್ತುತ ಗಣಪತಿ ಪ್ರತಿಷ್ಠಾನ ಮಹೋತ್ಸವ ಸಮಿತಿಗಳು, ಯುವ ಬಳಗ, ಸಂಘ ಸಂಸ್ಥೆಗಳ ಪದಾಕಾರಿಗಳು ಖರೀದಿಗೆ ಆಕರ್ಷಕ ಮೂರ್ತಿಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ. ಅಲ್ಲಲ್ಲಿ ಬುಕ್ಕಿಂಗ್ ಪ್ರಕ್ರಿಯೆಗಳು ನಡೆಯುತ್ತಿವೆ. ಗಣೇಶ ಚತುರ್ಥಿ ಹಬ್ಬದ ದಿನದವರೆಗೂ ವಹಿವಾಟು ನಡೆಯುತ್ತದೆ. ಇನ್ನು ಮನೆಯಲ್ಲಿ ಪ್ರತಿಷ್ಠಾಪಿಸಲು ಒಂದು ಎರಡು ಅಡಿ ಎತ್ತರದ ಮಣ್ಣಿನ ಮೂರ್ತಿಗಳನ್ನು ಮಾತ್ರ ಖರೀದಿಸಲಾಗುತ್ತಿದೆ. ದೊಡ್ಡ ಗಾತ್ರಗಳ ಮಾರಾಟವು ಹೆಚ್ಚಿನ ಲಾಭದಾಯಕ ಎನ್ನುತ್ತಿರುವ ಬಹುತೇಕ ವ್ಯಾಪಾರಿಗಳು, ಗ್ರಾಹಕರಿಗಾಗಿ ಎದುರು ನೋಡುತ್ತಿದ್ದಾರೆ. ಹೂಡಿರುವ ಬಂಡವಾಳಕ್ಕೆ ಅನುಗುಣವಾಗಿ ಒಳ್ಳೆಯ ಆದಾಯ ಸಿಗಲಿ ಎಂಬ ನಿರೀಕ್ಷೆಯಲ್ಲಿದ್ದಾರೆ.
*ದಾನ ಧರ್ಮಿಗಳ ಸಮಸ್ಯೆ
ಆಯಾ ವ್ಯಾಪ್ತಿಯಲ್ಲಿ ದಾನ ಧರ್ಮಿಗಳು ಉಚಿತವಾಗಿ ಮೂರ್ತಿಗಳ ಹಂಚಿಕೆ ಮಾಡುವುದರಿಂದ ಆದಾಯಕ್ಕೆ ಖೋತಾ ಬೀಳುವ ಆಂತಕ ವ್ಯಾಪಾರಸ್ಥರನ್ನು ಕಾಡುತ್ತಿದೆ.
ಕಳೆದ ಐದು ವರ್ಷಗಳಿಂದಲೂ ಒಲವು ವೃದ್ಧಿಯ ಪ್ರಚಾರ, ಯುವ ಶಾಸಕರು, ಮಾಜಿ ಶಾಸಕರು, ಸ್ಥಳೀಯ ರಾಜಕಾರಣಿಗಳು ಹಾಗೂ ಸಮಾಜ ಸೇವಕರು ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಯುವಕರ ಬಳಗಳಿಗೆ ಉಚಿತವಾಗಿ ಗಣಪತಿ ಮೂರ್ತಿಗಳನ್ನು ವಿತರಿಸುತ್ತಿದ್ದರು. ಇದರಿಂದ ಹಲವರು ದಾನ ಪಡೆಯಲು ಕಾಯುತ್ತಿರುತ್ತಾರೆ.
ಕೋಟ್ 1
ಕಳೆದ 21 ವರ್ಷಗಳಿಂದಲೂ ಗಣಪತಿ ಹಬ್ಬಕ್ಕೆ ವಿಗ್ರಹಗಳನ್ನು ಮಾರಲಾಗುತ್ತಿದೆ. ಅದರಂತೆ ಈ ಬಾರಿಯೂ ವ್ಯಾಪಾರ ಕೈಗೊಳ್ಳಲಾಗುತ್ತಿದೆ. ವಿವಿಧ ಭಾಗಗಳಿಂದ ಮೂರ್ತಿಗಳ ಸಾಗಾಣೆ, ಗೋದಾಮು ಬಾಡಿಗೆ, ಸುರಕ್ಷತಾತ್ಮಕ ಕ್ರಮಗಳ ನಿರ್ವಹಣೆ, ಕೆಲಸಗಾರರಿಗೆ ಕೂಲಿ ಸೇರಿದಂತೆ ನಿರ್ವಹಣೆ ವೆಚ್ಚ ಹೆಚ್ಚಾಗುತ್ತಿದೆ. ಇದಕ್ಕೆ ಅನುಗುಣವಾಗಿ ಬೆಲೆ ನಿಗದಿಪಡಿಸಿ, ಗಣಪತಿ ವಿಗ್ರಹಗಳನ್ನು ಮಾರಲಾಗುತ್ತಿದೆ. ಒಮ್ಮೊಮ್ಮೆ ಹೆಚ್ಚಿನ ಆದಾಯ, ಒಮ್ಮೊಮ್ಮೆ ನಷ್ಟ ಸಹಜ.
ನರಸಿಂಹಮೂರ್ತಿ, ವ್ಯಾಪಾರಿ, ಚಿಕ್ಕಬಳ್ಳಾಪುರ