ಗಣೇಶ ಉತ್ಸವ ಆಚರಣೆಗೆ ಹಲವು ಮಾರ್ಗಸೂಚಿ

mng-sep3-ganapathi
Published on



ಮಂಗಳೂರು : ದ.ಕ. ಜಿಲ್ಲಾ ಪೊಲೀಸ್ ಘಟಕ ವ್ಯಾಪ್ತಿಯಲ್ಲಿ ಸೆ.6ರಿಂದ 13ರವರೆಗೆ ಒಟ್ಟು 221 ಕಡೆಗಳಲ್ಲಿ ಸಾರ್ವಜನಿಕ ಗಣೇಶೋತ್ಸವ ನಡೆಯಲಿದೆ. ಸೆ.15 ಮತ್ತು 16ರಂದು ಈದ್ ಮಿಲಾದ್ ಆಚರಣೆ ನಡೆಯಲಿದೆ. ಧಾರ್ಮಿಕ ಹಬ್ಬಗಳನ್ನು ಶಾಂತಿ ಮತ್ತು ಸೌಹಾರ್ದತೆಯಿಂದ ಆಚರಿಸುವ ಹಿನ್ನೆಲೆಯಲ್ಲಿ ಎಲ್ಲ ಧರ್ಮದ ಹಿರಿಯ ಮುಖಂಡರೊಂದಿಗೆ ಎಲ್ಲ ಪೊಲೀಸ್ ಠಾಣೆಗಳಲ್ಲಿ ಶಾಂತಿ ಸಭೆ ನಡೆಸಲಾಗಿದೆ. ಗಣೇಶ ಉತ್ಸವದ ಕಾರ್ಯಕ್ರಮಗಳ ಆಯೋಜಕರಿಗೆ ಹಲವು ಸೂಚನೆಗಳನ್ನು ನೀಡಲಾಗಿದೆ.
ಪ್ರತಿಷ್ಠಾಪನೆಯ ಮೊದಲು ಮೆಸ್ಕಾಂ, ಅಗ್ನಿಶಾಮಕ ನಿಗಮ, ಸ್ಥಳೀಯ ಸಂಸ್ಥೆಗಳಿಂದ ಅನುಮತಿಯನ್ನು ಪಡೆದುಕೊಳ್ಳಬೇಕು. ಸ್ಥಳದ ಮಾಲೀಕರ ಅನುಮತಿ ಪಡೆದುಕೊಳ್ಳಬೇಕು. ಸಾಂಸ್ಕೃತಿಕ , ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವವರ ಪ್ರಮುಖರ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ ವಿವರವಾದ ಪಟ್ಟಿಯನ್ನು ಮುಂಚಿತವಾಗಿ ಪೊಲೀಸ್ ಠಾಣೆಗೆ ನೀಡಬೇಕು. ಸಾರ್ವಜನಿಕ ಸ್ಥಳದಲ್ಲಿ ಪ್ಲೆಕ್ಸ್ ಮತ್ತು ಬ್ಯಾನರ್‌ಗಳನ್ನು ಅಳವಡಿಸುವ ಪೂರ್ವದಲ್ಲಿ ಸ್ಥಳೀಯ ಪ್ರಾಧಿಕಾರದಿಂದ ಕಡ್ಡಾಯವಾಗಿ ಅನುಮತಿ ಪಡೆದುಕೊಳ್ಳಬೇಕು. ಯಾವುದೇ ಪ್ರಚೋದನಾತ್ಮಕ ಬರಹಗಳು, ಚಿತ್ರಗಳನ್ನು ಬಳಸಬಾರದು. ರಾತ್ರಿ 10 ಗಂಟೆಯ ನಂತರ ಸುಡುಮದ್ದು ಪಟಾಕಿಗಳನ್ನು ಬಳಸುವಂತಿಲ್ಲ.
ಗಣೇಶ ವಿಸರ್ಜನೆಯ ದಿನಾಂಕ, ವೇಳೆ, ಮಾರ್ಗ ಮುಂತಾದ ವಿವರಗಳನ್ನು ಮುಂಚಿತವಾಗಿ ಸಂಬಂಧಿಸಿದ್ದ ಠಾಣಾಧಿಕಾರಿ ಮತ್ತು ಡಿವೈ ಎಸ್‌ಪಿ ಅವರಿಗೆ ನೀಡಿ ಮಂಜೂರಾತಿ ಪಡೆದುಕೊಳ್ಳಬೇಕು. ಪೋಲಿಸ್ ಇಲಾಖೆಯಿಂದ ಅಂತಿಮಗೊಳಿಸಲಾದ ಮಾರ್ಗದಲ್ಲಿ ಮಾತ್ರ ಮೆರವಣಿಗೆ ಸಾಗಬೇಕು. ವಿಸರ್ಜನ ಮೆರವಣಿಗೆ ಸಮಯದಲ್ಲಿ ಇತರ ಧರ್ಮಗಳ ವಿರುದ್ಧ ಪ್ರಚೋದನಕಾರಿ ಘೋಷಣೆಯನ್ನು ಕೂಗಬಾರದು. ಸುಗಮ ಸಂಚಾರಿ ವ್ಯವಸ್ಥೆಗೆ ಅಡೆತಡೆ ಉಂಟಾಗದಂತೆ ನೋಡಿಕೊಳ್ಳಬೇಕು. ಸ್ಥಳದ ಮಾಲೀಕರ ಅನುಮತಿಯನ್ನು ಪಡೆದುಕೊಳ್ಳಬೇಕು. ಮೆರವಣಿಗೆಯಲ್ಲಿ ಒಂದು ಸುಸಜ್ಜಿತ ಆಂಬುಲೆನ್ಸ್ ವ್ಯವಸ್ಥೆಗೊಳಿಸಬೇಕು.
ಮೆರವಣಿಗೆ ಸಮಯದಲ್ಲಿ ಸ್ವಯಂಸೇವಕರಿಗೆ ಒಂದೇ ರೀತಿಯ ಬಣ್ಣದ ಉಡುಪು ನೀಡಬೇಕು. ಸ್ವಯಂಸೇವಕರನ್ನು ಗುಂಪುಗಳನ್ನಾಗಿ ವಿಂಗಡಿಸಿ ಮೆರವಣಿಗೆ ಸಾಗುವ ಮಾರ್ಗದಲ್ಲಿ ನಿಯೋಜಿಸಿ ಮೆರವಣಿಗೆ ಸುಲಲಿತವಾಗಿ ಸಾಗುವಂತೆ ಮಾಡಬೇಕು. ಮೆರವಣಿಗೆ ಹಾದುಹೋಗುವ ರಸ್ತೆಯಲ್ಲಿ ವಾಹನ ನಿಲುಗಡೆಯಾಗದಂತೆ ಸ್ವಯಂಸೇವಕರನ್ನು ನಿಯೋಜಿಸಬೇಕು. ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ಬಂದೋಬಸ್ತ್ ಕರ್ತವ್ಯದಲ್ಲಿ ಇರುವ ಪೊಲೀಸ್ ಅಧಿಕಾರಿಗಳ ಸೂಚನೆಗಳನ್ನು ಪಾಲಿಸಬೇಕು .
ಸ್ತಬ್ಧ ಚಿತ್ರಗಳಲ್ಲಿ, ಕಾರ್ಯಕ್ರಮ ಸ್ಥಳಗಳಲ್ಲಿ ಧ್ವನಿವರ್ಧಕವನ್ನು ಅಳವಡಿಸುವ ಮೊದಲು ಪೊಲೀಸ್ ಇಲಾಖೆಯಿಂದ ಪಡೆಯಲಾದ ಪರವಾನಿಗೆಯನ್ನು ಪರಿಶೀಲಿಸಿ ಅನುಮತಿ ಇದ್ದಲ್ಲಿ ಮಾತ್ರ ಧ್ವನಿವರ್ಧಕ ಅಳವಡಿಸಬೇಕು. ಡಿಜೆ ಬಳಸಲು ಅವಕಾಶ ಇರುವುದಿಲ್ಲ. ಆಸ್ಪತ್ರೆ ಶಿಕ್ಷಣ ಸಂಸ್ಥೆಗಳ ಬಳಿ ಧ್ವನಿವರ್ಧಕ ಅಳವಡಿಸಬಾರದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net