

ಕಾರವಾರ: ಮಾಘ ಶುದ್ಧ ಚೌತಿ ಆಚರಣೆ ನಗರದಲ್ಲಿ ಮಂಗಳವಾರ ವಿಜೃಂಭಣೆಯಿಂದ ಜರುಗಿತು. ಕಾರವಾ ತಾಲೂಕಿನ ನೂರಾರು ಮನೆಗಳಲ್ಲಿ ಮಂಗಳವಾರ ಮಣ್ಣಿನ ಗಣಪತಿ ವಿಗ್ರಹಗಳನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಯಿತು.
ಆಗಸ್ಟ್ ಅಥವಾ ಸೆಪ್ಟೆಂಬರ್ ತಿಂಗಳಲ್ಲಿ ಬರುವ ಬಾದ್ರಪದ ಶುದ್ಧ ಚೌತಿಯಂದು ಮನೆ, ಮನೆಯಲ್ಲಿ ಗಣಪತಿ ಕೂರಿಸಿ, ಪೂಜಿಸುವ ರೂಢಿ ಎಲ್ಲೆಡೆ ಇದೆ. ಆದರೆ, ಈಗ ಫೆಬ್ರವರಿಯಲ್ಲಿ ಗಣಪತಿ ಮೂರ್ತಿ ಪ್ರತಿಷ್ಠಾಪಿಸಿ ಪೂಜಿಸುವ ಸಂಪ್ರದಾಯ ಕಾರವಾರ ಭಾಗದ ವಿಶೇಷ.
ತಮ್ಮ ಇಷ್ಟಾರ್ಥ ಸಿದ್ಧಿಗೆ ಹರಕೆ ಹೇಳಿಕೊಂಡ ಕೆಲವರು ಮಾಘ ಶುದ್ಧ ಚೌತಿಯಂದು ಗಣಪತಿ ಕರೆಸಿ ಒಂದು ದಿನ ಪೂಜಿಸುವ ಪದ್ಧತಿ ಮೊದಲಿನಿಂದಲೂ ಇತ್ತು. ಇತ್ತೀಚಿನ ವರ್ಷಗಳಲ್ಲಿ ವಿಜೃಂಭಣೆಯ ಆಚರಣೆ ಹೆಚ್ಚಿದ್ದು, ತಾಲೂಕಿನ ನೂರಕ್ಕೂ ಅಽಕ ಮನೆಗಳಲ್ಲಿ ಪ್ರತಿ ವರ್ಷವೂ ಗಣೇಶನ ಮೂರ್ತಿಯನ್ನು ಮಾಘ ಚೌತಿಗೆ ಪ್ರತಿಷ್ಠಾಪಿಸಲಾಗುತ್ತಿದೆ. ಕೆಲವರು ಒಂದುವರೆ ದಿನ ಇಟ್ಟು ಪೂಜೆ ಮಾಡಿದರೆ, ಇನ್ನೂ ಕೆಲವರ ಮನೆಯಲ್ಲಿ ಐದು ದಿನ ಪೂಜೆ ಮಾಡುತ್ತಿರುವುದು ವಿಶೇಷ. ಕಾರವಾರದ ಮಾಜಾಳಿಯ ಮುಡಗೇರಿ ಕ್ರಾಸ್‌ನಲ್ಲಿ ಸಾರ್ವಜನಿಕವಾಗಿ ಬೃಹತ್ ಗಣೇಶನ ಮೂರ್ತಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಯಿತು.
ಜಾತ್ರೆ:
ಇಲ್ಲಿನ ಹಬ್ಬುವಾಡದ ಗಣಪತಿ ದೇವಸ್ಥಾನ ಜಾತ್ರೆಯು ಮಂಗಳವಾರ ವಿಜೃಂಭಣೆಯಿಂದ ಜರುಗಿತು. ಬೆಳಗಿನಿಂದ ದೇವರಿಗೆ ಪಂಚಾಮೃತ ಅಭಿಷೇಕ, ತುಲಾಭಾರ ಸೇವೆಗಳು ಜರುಗಿದವು. ನೂರಾರು ಭಕ್ತರು ಆಗಮಿಸಿ ದೇವರ ದರ್ಶನ ಪಡೆದು, ಹಣ್ಣು, ಕಾಯಿ ಮಾಡಿಸಿದರು. ಮಧ್ಯಾಹ್ನ ವಿಶೇಷ ಅಲಂಕಾರದೊಂದಿಗೆ ದೇವರಿಗೆ ಮಹಾ ಮಂಗಳಾರತಿ ನೆರವೇರಿಸಲಾಯಿತು. ಸಾಯಂಕಾಲ ದೇವರ ಉತ್ಸವ ಮೂರ್ತಿಯ ಲಾಲಕಿ ಮೆರವಣಿಗೆ ಜರುಗಿತು. ಮಹಾದೇವ ವಿನಾಯಕ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ, ಸದಸ್ಯರು, ಗಣಪತಿ ದೇವಸ್ಥಾನದ ಪ್ರಧಾನ ಅರ್ಚಕರ ನೇತೃತ್ವದಲ್ಲಿ ಪೂಜಾ ಕಾರ್ಯಗಳು ನೆರವೇರಿದವು. ಫೆ. 14 ರಂದು ರಾತ್ರಿ ಗಜಾನನ ನಾಟ್ಯ ಮಂಡಳಿಯಿAದ ಪ್ರೇಮ ತ್ಯಾಗ ಎಂಬ ನಾಟಕ ಪ್ರದರ್ಶನ ನಡೆಯಲಿದೆ.
ಅಖಂಡ ಭಜನೆ:
ನರಗದ ಮಾರುಕಟ್ಟೆ ಗಣಪತಿ ದೇವಸ್ಥಾನದಲ್ಲಿ ಮಾಘ ಶುದ್ಧ ಚೌತಿಯ ಅಂಗವಾಗಿ ಮಂಗಳವಾರ ರಾತ್ರಿಯಿಂದ ಅಖಂಡ ಭಜನಾ ಕಾರ್ಯಕ್ರಮ ಆಯೋಜಿಸಲಾಯಿತು. ಸಾಯಂಕಾಲ 6.30 ರಿಂದ ಭಜನಾ ಕಾರ್ಯಕ್ರಮ ಪ್ರಾರಂಭವಾಗಿದ್ದು, ಸತ್ಯ ಸಾಯಿ ಸೇವಾ ಸಮಿತಿ, ವಾಜಂತ್ರಿವಾಡ, ಹಿರೇಶಿಟ್ಟಾ, ದೇವಳಿವಾಡ ಸೇರಿ ನಗರದ ವಿವಿಧ ಭಜನಾ ಮಂಡಳಿಗಳ ಸದಸ್ಯರು ಭಜನೆ ನೆರವೇರಿಸಿದರು. ಫೆ. 14 ರ ಬೆಳಗಿನವರೆಗೂ ನಡೆಯಲಿದೆ.
ಇದನ್ನೂ ಓದಿ: ಅಪ್ರಾಪ್ತರಿಗೆ ವಾಹನ ಕೊಡುವ ಮುಂಚೆ ಎಚ್ಚರ