

ಬೆಳಗಾವಿ: ನಗರದ ಗಣೇಶ ವಿಸರ್ಜನೆ ಮೆರವಣಿಗೆ ಮಾರ್ಗಗಳು ದುರಸ್ತಿ ಹಾಗೂ ಕಪಿಲೇಶ್ವರ ಹೊಂಡದ ಗೋಡೆ ನಿರ್ಮಾಣ, ಸ್ವಚ್ಛತಾ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ತಿಳಿಸಿದರು.
ನಗರದ ಕಪಿಲೇಶ್ವರ ಹೊಂಡ ಗೋಡೆ ನಿರ್ಮಾಣ ಹಾಗೂ ಇತರ ಕಾಮಗಾರಿಗಳಿಗೆ ಶುಕ್ರವಾರ ಚಾಲನೆ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಣೇಶ ವಿಸರ್ಜನೆ ಸಾಂಪ್ರದಾಯಿಕ ಕೆರೆಯಾಗಿರುವ ಹಳೆಯ ಕಪಿಲೇಶ್ವರ ಕೆರೆಯ ಒಂದು ಬದಿಯ ಗೋಡೆ ಕುಸಿದಿದೆ. ಹಾಗಾಗಿ, ಅಲ್ಲಿ ಹೊಸ ಗೋಡೆ ನಿರ್ಮಿಸಿ ಕೆರೆ ದುರಸ್ತಿ, ಸ್ವಚ್ಛತೆ ಇತರ ಕಾಮಗಾರಿ ಮಾಡಲಾಗುತ್ತಿದೆ. ಗಣೇಶೋತ್ಸವ ಮುನ್ನ ಈ ಎಲ್ಲ ಕಾಮಗಾರಿ ಪೂರ್ಣಗೊಳ್ಳಲಿವೆ ಎಂದರು.
ರಸ್ತೆಯ ಗುಂಡಿ ಮುಚ್ಚಲು ಹಾಗೂ ರಸ್ತೆ ದುರಸ್ತಿ ಮಾಡಲು ಅಂದಾಜು 44 ಲಕ್ಷ ರೂ. ವೆಚ್ಚ ಹಾಗೂ ಗಣೇಶ ವಿರ್ಜನೆ ಹೊಂಡಗಳ ಸ್ವಚ್ಛತೆ ಸೇರಿ ವಿವಿಧ ಕಾಮಗಾರಿಗೆ 40 ಲಕ್ಷ ರೂ. ವೆಚ್ಚದ ಟೆಂಡರ್ ಕರೆದು ಕಾಮಗಾರಿ ಆರಂಭಿಸಲಾಗುತ್ತಿದೆ. ಗುಣಮಟ್ಟ ಕಾಪಾಡಲು ಆದ್ಯತೆ ನೀಡಲಾಗುತ್ತಿದೆ ಎಂದರು.
ಮೇಯರ್ ಶೋಭಾ ಸೋಮನಾಚೆ, ಉಪಮೇಯರ್ ರೇಷ್ಮಾ ಪಾಟೀಲ, ಸ್ಥಾಯಿ ಸಮಿತಿ ಅಧ್ಯಕ್ಷೆ ವಾಣಿ ಜೋಶಿ, ಸದಸ್ಯರಾದ ರಾಜು ಭಾತಖಾಂಡೆ, ಮಂಗೇಶ ಪವಾರ, ಸಂತೋಷ ಪೆಡ್ನೆಕರ, ಗಿರೀಶ ಧೋಂಗಡಿ, ಇಂಜಿನಿಯರ್ ಲಕ್ಷ್ಮೀ ನಿಪ್ಪಾಣಿಕರ ಇತರರಿದ್ದರು.