ವಿಘ್ನನಿವಾರಕ ಗಣಪನಿಗೆ ಅದ್ದೂರಿ ಸ್ವಾಗತ: ಜಿಲ್ಲಾದ್ಯಂತ ಸಂಭ್ರಮದಿಂದ ಹಬ್ಬ ಆಚರಣೆ

Ganesha Festival Mandya
Published on

ಮಂಡ್ಯ: ಗೌರಿ ಮತ್ತು ಗಣೇಶ ಹಬ್ಬವನ್ನು ಜಿಲ್ಲಾದ್ಯಂತ ಶುಕ್ರವಾರ ಮತ್ತು ಶನಿವಾರ ಸಂಭ್ರಮ, ಸಡಗರದಿಂದ ಅದ್ದೂರಿಯಾಗಿ ಆಚರಿಸಲಾಯಿತು.

ಹಬ್ಬದ ಅಂಗವಾಗಿ ಮಹಿಳೆಯರು, ಹೆಣ್ಣು ಮಕ್ಕಳು ಹೊಸ ವಸ್ತ್ರಧರಿಸಿ, ದೇವಾಲಯಗಳಿಗೆ ತೆರಳಿ, ವಿಶೇಷ ಪೂಜೆ ಸಲ್ಲಿಕೆಯೊಂದಿಗೆ ಸಂಭ್ರಮಿಸಿದರು. ಗೌರಿ ಗುಡಿಗಳಿಗೆ ತೆರಳಿ ಗೌರಿ ಮಾತೆಗೆ(ಪಾರ್ವತಿ) ಬಾಗಿನ ಸಲ್ಲಿಸಿ, ಭಕ್ತಿಭಾವ ಮೆರೆದರು. ನಗರದ ಚಾಮುಂಡೇಶ್ವರಿ ದೇವಾಲಯ, ಬನ್ನೂರು ರಸ್ತೆಯಲ್ಲಿನ ಶನೈಶ್ಚರಸ್ವಾಮಿ ದೇಗುಲ ಹಾಗೂ ಇತರೆಡೆ ಗೌರಿ ಮಾತೆಯ ಮೂರ್ತಿಯನ್ನಿಟ್ಟು ಪೂಜಿಸಲಾಯಿತು. ಶನಿವಾರ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಪೂಜಿಸಲಾಯಿತು. ಹುತ್ತಗಳು ಹಾಗೂ ನಾಗರಕಲ್ಲುಗಳ ಬಳಿ ಸಾರ್ವಜನಿಕರು ತನಿ ಎರೆದು ಭಕ್ತಿಭಾವ ಮೆರೆದರು.

ಹಬ್ಬದ ಅಂಗವಾಗಿ ಎಲ್ಲ ದೇವಾಲಯಗಳು ಸಹ ಭಕ್ತರಿಂದ ತುಂಬಿ ತುಳುಕಿದವು. ಮಹಿಳೆಯರು ಮತ್ತು ಮಕ್ಕಳು ಹೊಸಬಟ್ಟೆ ಧರಿಸಿ ದೇವಾಲಯಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿನ ಗೌರಿ ಗುಡಿಗಳಿಗೆ ತೆರಳಿ ಗೌರಿ ಮಾತೆಗೆ ಬಾಗಿನ ಅರ್ಪಿಸಿ, ಪ್ರಥಮ ಪೂಜೆ ಸಲ್ಲಿಸುವ ಮೂಲಕ ಧನ್ಯತಾಭಾವ ಮೆರೆದರು.

ಬೆಳಗ್ಗೆಯಿಂದ ಸಂಜೆಯವರೆಗೂ ನಿರಂತರವಾಗಿ ಯುವತಿಯರು, ಮಹಿಳೆಯರು ಹಾಗೂ ಎಲ್ಲ ಜನತೆ ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸುತ್ತಿದ್ದ ದೃಶ್ಯ ಕಂಡುಬಂದವು. ಗೌರಿ ಮಾತೆಗೆ ಅರಿಶಿಣ-ಕುಂಕುಮ, ಬಳೆ, ರವಿಕೆ ಕಣ, ಬಿಚ್ಚೋಲೆ ಸೇರಿದಂತೆ ಇನ್ನಿತರ ಪೂಜಾ ಸಾಮಗ್ರಿಗಳನ್ನು ಇಟ್ಟು ಪೂಜೆ ಸಲ್ಲಿಸಿದರು. ಬಳಿಕ ಸುಮಂಗಲಿಯರು ಪರಸ್ಪರ ತಾಂಬೂಲ ಹಾಗೂ ಬಳೆಯನ್ನು ವಿನಿಮಯ ಮಾಡಿಕೊಂಡು ಮುತ್ತೈದೆತನ ಶಾಶ್ವತವಾಗಿರಲೆಂದು ಪ್ರಾರ್ಥಿಸಿದರು.

ಕಾನೂನು ಸುವ್ಯವಸ್ಥೆ ಮತ್ತು ಸಮಾಜದ ಶಾಂತಿಗೆ ಭಂಗ ಉಂಟಾಗದಿರಲೆಂಬ ಕಾರಣಕ್ಕೆ ಗಣೇಶನನ್ನು ಕೂರಿಸಿರುವವರಿಗೆ ಒಂದಷ್ಟು ನಿಯಮಗಳು ಮತ್ತು ಷರತ್ತುಗಳನ್ನು ವಿಧಿಸಲಾಗಿದೆ. ಜತೆಗೆ, ಮಂಡ್ಯ ನಗರಸಭೆ ಸೇರಿದಂತೆ ಸ್ಥಳೀಯ ಸಂಸ್ಥೆಗಳು ಹಾಗೂ ಪೊಲೀಸ್ ಠಾಣೆಗಳ ಮೂಲಕ ಏಕಗವಾಕ್ಷಿ ಯೋಜನೆಯಡಿ ಗಣೇಶನ ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ನೀಡಲಾಗಿತ್ತು. ಪೊಲೀಸ್ ಇಲಾಖೆಯ ಮಾಹಿತಿ ಪ್ರಕಾರ ನಾನಾ ಠಾಣೆಗಳಲ್ಲಿ ಗಣೇಶೋತ್ಸವಕ್ಕೆ ಅನುಮತಿ ಕೋರಿ ಕೇವಲ 2500ಕ್ಕೂ ಹೆಚ್ಚು ಅರ್ಜಿಗಳು ಬಂದಿವೆ. ಇದರ ಹೊರತಾಗಿ ಸ್ಥಳೀಯ ಸಂಸ್ಥೆಗಳಲ್ಲೂ ಒಂದಷ್ಟು ಜನರು ಅರ್ಜಿ ಸಲ್ಲಿಸಿ ಅನುಮತಿ ಪಡೆದುಕೊಂಡಿದ್ದಾರೆ. ಒಟ್ಟಾರೆ ಬೀದಿ ಬೀದಿಗಳು, ಖಾಲಿ ನಿವೇಶನಗಳೆಲ್ಲ ಯುವಕರು ಗುಂಪು ಗೌರಿ-ಗಣೇಶನ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂಜಿಸುತ್ತಿವೆ. ಜಿಲ್ಲೆಯಲ್ಲಿ ಅಂದಾಜು 5,000ಕ್ಕೂ ಹೆಚ್ಚು ಸ್ಥಳಗಳಲ್ಲಿ ಗೌರಿ-ಗಣೇಶನ ಮೂರ್ತಿಗಳನ್ನು ಪೂಜಿಸಿ ಪ್ರತಿಷ್ಠಾಪಿಸಲಾಗಿತ್ತು. ಕೆಲವೆಡೆ ಚಿಣ್ಣರು ಮಣ್ಣಿನಲ್ಲಿ ಗಣೇಶ ಮತ್ತು ಗೌರಿ ಮೂರ್ತಿ ಮಾಡಿ ಹಬ್ಬವನ್ನು ಸಂಭ್ರಮಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net