

ವಿಜಯವಾಣಿ ಸುದ್ದಿಜಾಲ ನೆಲಮಂಗಲ
ಗಣೇಶ ಚತುರ್ಥಿಯನ್ನು ನಗರ ಮತ್ತು ತಾಲೂಕಿನಾದ್ಯಂತ ಸಂಭ್ರಮದಿಂದ ಆಚರಿಸಲಾಯಿತು.
ನಗರದ ವಿವಿಧ ಬಡಾವಣೆ ಹಾಗೂ ತಾಲೂಕಿನ ವಿವಿಧ ಗ್ರಾಮಗಳಲ್ಲಿ ವಿದ್ಯುತ್‌ದೀಪಾಲಂಕೃತವಾದ ವೇದಿಕೆಗಳಲ್ಲಿ ವಿವಿಧ ಗಾತ್ರ, ಎತ್ತರದ ಜತೆಗೆ ವಿಭಿನ್ನ ಮಾದರಿ ಗಣೇಶನ ಮೂರ್ತಿಗಳನ್ನು ಶಾಸ್ತ್ರೋಕ್ತವಾಗಿ ಪ್ರತಿಷ್ಠಾಪಿಸಿ ಪೂಜಿಸಿದರು.
ಶ್ರೀಕೃಷ್ಣನಂತೆ ಕೊಳಲು ಊದುತ್ತಾ ಗೋವಿನ ಜತೆಯಲ್ಲಿರುವ ಗಣಪ, ನವಿಲಿನ ಮೇಲೆ ಕುಳಿತಿರುವ ಗಣಪ, ನಾಟ್ಯ ಮಾಡುತ್ತಿರುವ ಗಣಪನ ಮೂರ್ತಿ ಭಕ್ತರ ಗಮನ ಸೆಳೆಯುತ್ತಿವೆ. ಮೆನೆಗಳಲ್ಲಿ ಪ್ರತಿಷ್ಠಾಪಿಸಿ, ಪೂಜಿಸಿದ ಬಹುತೇಕ ಗೌರಿ ಗಣೇಶನ ಮೂರ್ತಿಗಳನ್ನು ಹಬ್ಬದ ದಿನ ರಾತ್ರಿ ವಿಸರ್ಜಿಸಲಾಯಿತು.
ನಗರದ ಪರಮಣ್ಣ ಬಡಾವಣೆ, ಸುಭಾಷ್‌ನಗರ, ದಾದಾಫಿರ್, ರಾಯನ್‌ನಗರ, ಕೋಟೆಬೀದಿ, ಚನ್ನಪ್ಪ ಬಡಾವಣೆ, ತಾಲೂಕಿನ ಬೂದಿಹಾಲ್, ಬಾವಿಕೆರೆ, ಹಂಚೀಪುರ, ಯಂಟಗಾನಹಳ್ಳಿ, ಯಲಚಗೆರೆ ಮತ್ತು ಗ್ರಾಪಂ ಕಚೇರಿ ಮುಂಭಾಗದಲ್ಲಿ ವಿವಿಧ ಸಂಘ-ಸಂಸ್ಥೆಗಳ ಹೆಸರಿನಲ್ಲಿ ಪ್ರತಿಷ್ಠಾಪಿಸಿರುವ ಬೃಹತ್ ಗಾತ್ರದ ಗಣೇಶ ಮೂರ್ತಿಗಳನ್ನು 3 ರಿಂದ 5 ದಿನಗಳ ಕಾಲ ಪೂಜಿಸಲಿದ್ದಾರೆ.
ವಿವಿಧ ಸ್ಪರ್ಧೆ: ಗಣೇಶ ಮೂರ್ತಿ ಪ್ರತಿಷ್ಠಾಪಿಸಿರುವ ಸಂಘದಿಂದ ಪ್ರಸಿದ್ಧ ವಾದ್ಯಗೊಷ್ಠಿ ಆಯೋಜನೆ ಜತೆಗೆ ಮಹಿಳೆಯರು ಮತ್ತು ಮಕ್ಕಳಿಗಾಗಿ ರಂಗೋಲಿ, ಗೀತಾಗಾಯನ, ನೃತ್ಯ ಇತ್ಯಾದಿ ಸಾಂಸ್ಕೃತಿಕ ಹಾಗೂ ಕ್ರೀಡಾ ಸ್ಪರ್ಧೆ ಆಯೋಜಿಸಿ, ಬಹುಮಾನ ವಿತರಣೆ ಮಾಡಲು ಮುಂದಾಗಿದ್ದಾರೆ.
ಪೊಲೀಸರ ಕಣ್ಗಾವಲು: ಹಬ್ಬ ಆಚರಣೆ ಹೆಸರಿನಲ್ಲಿ ಘರ್ಷಣೆ, ಗಲಾಟೆಗಳಿಗೆ ಅವಕಾಶ ಕೊಡಬಾರದೆಂಬ ಕಾರಣಕ್ಕೆ ಆಯಾ ವ್ಯಾಪ್ತಿಯ ಪೊಲೀಸರು ಕಣ್ಗಾವಲಿರಿಸಿದ್ದಾರೆ.