

ಮಡಿಕೇರಿ:
ಸಮೀಪದ ಮೇಕೇರಿಯ ಶ್ರೀ ಗೌರಿ ಶಂಕರ ದೇವಾಲಯದಲ್ಲಿ ಶ್ರೀ ಗಣೇಶ ಸೇವಾ ಸಮಿತಿಯ ಆಶ್ರಯದಲ್ಲಿ 31ನೇ ವರ್ಷದ ಅದ್ದೂರಿ ಗೌರಿ ಗಣೇಶೋತ್ಸವ ಶ್ರದ್ಧಾ ಭಕ್ತಿಯೊಂದಿಗೆ ಮಂಗಳವಾರ ವೈಶಿಷ್ಟ್ಯ ಪೂರ್ಣವಾಗಿ ನಡೆಯಿತು.
ಶ್ರೀ ಗೌರಿ ಶಂಕರ ದೇವಾಲಯದಲ್ಲಿ ಮಂಗಳವಾರ ಬೆಳಗ್ಗಿನಿಂದಲೇ ವಿಶೇಷ ಪೂಜಾ ವಿಧಿಗಳು ನೇರವೇರಿದವು. ಬೆಳಗ್ಗೆ 9 ಗಂಟೆಯಿAದ ಗಣಪತಿ ಹೋಮ, ಶ್ರೀ ಗೌರಿ ಗಣೇಶ ಮೂರ್ತಿಯ ಪ್ರತಿಷ್ಠಾಪನೆ ನೆರವೇರಿತು. ಬಳಿಕ ನಡೆದ ಧಾರ್ಮಿಕ ಪ್ರವಚನದಲ್ಲಿ ಮಾತನಾಡಿದ ಸೇವಾ ಭಾರತಿಯ ಕೊಡಗು ಜಿಲ್ಲಾಧ್ಯಕ್ಷರಾದ ಟಿ.ಸಿ. ಚಂದ್ರನ್, ಇಂದಿನ ಆಧುನಿಕ ಯುಗದಲ್ಲಿ ಸಂಸ್ಕಾರಯುತ ಜೀವನ ಮರೆಯಾಗುತ್ತಿದ್ದು ಮಕ್ಕಳು ದುಶ್ಚ್ಚಟಗಳಿಗೆ ಒಳಗಾಗಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಮನೆಯಿಂದಲೇ ಮಕ್ಕಳಿಗೆ ಮೌಲ್ಯಯುತ ಜೀವನ ಸಿಗುವಲ್ಲಿ ಪೋಷಕರು ಶ್ರಮ ವಹಿಸಬೇಕು. ಮನಸ್ಸಿನ ಏಕಾಗ್ರತೆ ಪ್ರಮುಖವಾಗಿದ್ದು ದೇವರು, ಭಕ್ತಿ, ಸಂಸ್ಕೃತಿ, ಸನ್ನಢತೆಯ ಸಲುವಾಗಿ ಸದಾ ಜಾಗೃತವಾಗಿರಬೇಕು, ಒಳ್ಳೆಯ ವಿಚಾರಗಳಿಗಾಗಿ ನಮ್ಮ ಮನಸ್ಸನ್ನು ಅರ್ಪಣೆ ಮಾಡಬೇಕು ಎಂದರಲ್ಲದೆ ಮಾತೃ ಭಾಷೆ, ಉಡುಗೆ ತೊಡುಗೆ, ಭಜನೆ, ಮನೆಯಲ್ಲಿ ಸಹ ಭೋಜನ ಹಾಗೂ ಧಾರ್ಮಿಕ ಆಚರಣೆಗಳ ಮಹತ್ವದ ಕುರಿತು ವಿವರಣೆ ನೀಡಿದರು.
ಇದೇ ಸಂದರ್ಭ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗ್ರಾಮದ 16 ಮಂದಿ ಸಾಧಕರನ್ನು ಶ್ರೀ ಗಣೇಶ ಸೇವಾ ಸಮಿತಿಯ ಪದಾಧಿಕಾರಿಗಳು ಸನ್ಮಾನಿಸಿ ಗೌರವಿಸಿದರು. ಮೇಕೇರಿಯ ಗೌರಿ ಶಂಕರ ದೇವಾಲಯದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಕೆ.ಕೆ. ಪೂರ್ಣಯ್ಯ, ಹಾಕತ್ತೂರು ವಿ.ಎಸ್.ಎಸ್.ಎನ್. ನೂತನ ನಿರ್ದೇಶಕ ಚುನಾಯಿತರಾದ ಚೋಂಡಿರ ಜಿ. ಚಂಗಪ್ಪ, ತೋರೇರ ಅಯ್ಯಪ್ಪ, ಲೋಕೇಶ್ ಟಿ.ವಿ. ದೇವಾಲಯದ ಅರ್ಚಕÀ ಕೃಷ್ಣ ಭಟ್, ಗಣೇಶ ಸೇವಾ ಸಮಿತಿ ಸ್ಥಾಪಕ ಅಧ್ಯಕ್ಷ ಟಿ.ಕೆ. ದಿವಾಕರ್, ಸ್ಥಾಪಕ ಕಾರ್ಯದರ್ಶಿಗಳು ಹಾಗೂ ಗುತ್ತಿಗೆದಾರರಾದ ಪಿ.ಕೆ. ಬಾಲಕೃಷ್ಣ, 3 ಬಾರಿ ಕೊಡಗು ಜಿಲ್ಲಾ ಚುನಾವಣಾ ರಾಯಭಾರಿಯಾಗಿ ಕಾರ್ಯ ನಿರ್ವಹಿಸಿದ ಸಿ.ಕೆ. ಈಶ್ವರಿ, ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ರಕ್ತದಾನಿ ರಾಮಪ್ಪ, ರ‍್ಯಾಲಿ ಪಟು ಅಬೀನ್ ರೈ, ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕೆ.ಡಿ. ಇಂಪನ, ಲಿಪಿಕಾ ಕಾವೇರಮ್ಮ, ಪಿ.ಎ ದೀಕ್ಷಾ, ಕೆ.ಎಸ್ ಆರ್ಯ, ಎಸ್. ಮೇಘಾ ಹಾಗೂ ಟಿ.ಕೆ.ಯುಕ್ತಾ ಅವರುಗಳನ್ನು ಸನ್ಮಾನಿಸಲಾಯಿತು.
ಮಧ್ಯಾಹ್ನ ಶ್ರೀ ಗೌರಿ ಗಣೇಶ ಮೂರ್ತಿಗೆ ಮಹಾಮಂಗಳಾರತಿ ನಡೆದು ಸೇರಿದ್ದ ಸಹಸ್ರಾರು ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು. ಮಧ್ಯಾಹ್ನದ ನಂತರ ಶ್ರೀ ಗೌರಿ ಗಣೇಶ ಮೂರ್ತಿಯನ್ನು ಅಲಂಕೃತ ಮಂಟಪದಲ್ಲಿ ಕುಳ್ಳಿರಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಕೊಂಡೊಯ್ಯಲಾಯಿತು. ಮಂಗಳೂರಿನ ಖ್ಯಾತ ಧ್ವನಿವರ್ಧಕ ತಂಡದ ಸೌಂಡ್ಸ್ ಸಿಸ್ಟಮ್ ನೊಂದಿಗೆ ಮೆರವಣಿಗೆ ಸಾಗಿ ಸುಭಾಶ್ ನಗರದ ನದಿಯಲ್ಲಿ ಗೌರಿ ಗಣೇಶ ಮೂರ್ತಿಯನ್ನು ವಿಸರ್ಜಿಸಲಾಯಿತು.