

ಮೈಸೂರು: ಗಣೇಶ ಉತ್ಸವ ನಮ್ಮೊಂದಿಗೆ ಸಾಮರಸ್ಯ ಉಂಟು ಮಾಡಿ, ಒಂದಾಗುವಂತೆ ಬಾಳುವಂತೆ ಮಾಡುತ್ತದೆ ಎಂದು ವಿಶ್ವ ಹಿಂದು ಪರಿಷತ್ ಮುಖಂಡ ಮನೋಹರ್ ಮಠದ್ ಹೇಳಿದರು.
ಸಾಮೂಹಿಕ ಗಣೇಶೋತ್ಸವದ ಮೆರವಣಿಗೆ ಅಂಗವಾಗಿ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಬಹಿರಂಗ ಸಭೆ ಉದ್ದೇಶಿಸಿ ಮಾತನಾಡಿದರು.
ಕಾಮ, ಕ್ರೋಧಗಳನ್ನು ದೂರ ಮಾಡುತ್ತಾ, ಮನುಷ್ಯ ಸಂಬಂಧಗಳನ್ನು ಗಟ್ಟಿಗೊಳಿಸುವ ಗಣೇಶೋತ್ಸವವನ್ನು ಭಾರತವಷ್ಟೇ ಅಲ್ಲದೆ ಜಗತ್ತಿನ 60 ದೇಶಗಳಲ್ಲಿ ಆಚರಿಸಲಾಗುತ್ತದೆ. ಸಮಾಜದಲ್ಲಿ ಮೇಲು, ಕೀಳು, ಜಾತಿಯತೆ, ಅಸ್ಪಶ್ಯತೆ ಇದೆ. ಇದೆಲ್ಲವನ್ನು ನೋಡದೆ ಆಚರಣೆ ಮಾಡುವ ಹಬ್ಬ ಗಣೇಶ ಹಬ್ಬ. ಗಣೇಶ ಎಲ್ಲರನ್ನೂ ಒಗ್ಗೂಡಿಸುತ್ತಾನೆ ಎಂದರು.
ಪೂನಾದಲ್ಲಿ ಆರಂಭದ ಗಣೇಶ ಉತ್ಸವ, ಇವತ್ತು ದೇಶದ ಮೂಲೆ ಮೂಲೆಗೆ ಹಬ್ಬಿದೆ. ಏಕತೆಗೆ ಇನ್ನೊಂದು ಹೆಸರು ಯಾವುದೆಂದರೆ ಅದು ಗಣಪತಿ. ಗಣೇಶ ಉತ್ಸವ ನಮ್ಮೊಂದಿಗೆ ಸಾಮರಸ್ಯ ಉಂಟು ಮಾಡಿ, ಒಂದಾಗಿ ಬಾಳುವಂತೆ ಮಾಡುತ್ತದೆ ಎಂದರು.
ನಮ್ಮ ಕುಟುಂಬ ಅಂದರೆ ತಂದೆ ತಾಯಿ ಮಕ್ಕಳು ಅಲ್ಲ, ಅಖಂಡ ಭಾರತ, ಹಿಂದು ಧರ್ಮ ನಮ್ಮ ಕುಟುಂಬ. ವಿಶ್ವವೇ ಒಂದು ಕುಟುಂಬ, ಅದನ್ನು ಸಾರ್ಥಕ ಎಂದು ಭಾರತೀಯರು ಬದುಕುತ್ತಿದ್ದೇವೆ. 33 ಕೋಟಿ ದೇವರುಗಳನ್ನು ಪೂಜೆ ಮಾಡುತ್ತೇವೆ ಎಂದು ಹೇಳಿದರು.
ಭಾರತದಲ್ಲಿ ಕೋಮು ದ್ವೇಷ ಇದ್ದಿದ್ದರೆ, ಅನ್ಯಧರ್ಮೀಯರು ಉಳಿಯುತ್ತಿಲ್ಲ. ಭಾರತದಲ್ಲಿ ಧರ್ಮ ನಾಶವಾಗುವುದಿಲ್ಲ. ಧರ್ಮವು ಇಲ್ಲದಿದ್ದರೆ ಜಗತ್ತಿನಲ್ಲಿ ಎಲ್ಲವೂ ನಾಶವಾಗುತ್ತದೆ ಎಂದರು.
ಭಾರತ, ಪಾಕಿಸ್ತಾನ ಇಬ್ಭಾಗವಾದಾಗ ಭಾರತದಲ್ಲಿರುವ ಮುಸ್ಲಿಮರು ಪಾಕಿಸ್ತಾನಕ್ಕೆ ಹೋಗಬೇಕು, ಪಾಕಿಸ್ತಾನದದಲ್ಲಿರುವ ಹಿಂದು ಗಳು ಭಾರತಕ್ಕೆ ಹೋಗಬೇಕು ಎಂದು ಒಪ್ಪಂದ ಆಗಿತ್ತು. ಆದರೆ ಪಾಕಿಸ್ತಾನದಲ್ಲಿರುವ ಹಿಂದುಗಳು ಭಾರತಕ್ಕೆ ಬಂದರೂ ರಾಜಕಾರಣಿಗಳು ಇಲ್ಲಿರುವ ಮುಸ್ಲಿಮರು ಇಲ್ಲೇ ಇರಿ ಎಂದು ಹೇಳುತ್ತಾರೆ. ಇದು ಯಾವ ನ್ಯಾಯ? ಎಂದು ಹೇಳಿದರು.
ಬಾಂಗ್ಲಾದೇಶ ಪ್ರದಾನಿ ಷೇಕ್ ಹಸೀನಾ ಅವರು ಅಲ್ಲಿರುವ ಹಿಂದುಗಳನ್ನು ಇಸ್ಲಾಂಗೆ ಮತಾಂತರ ಮಾಡಿದರು. ಈಗ ಅವರಿಗೆ ಯಾವ ಮುಸ್ಲಿಂ ರಾಷ್ಟ್ರಗಳು ರಕ್ಷಣೆ, ಆಶ್ರಯ ನೀಡಲಿಲ್ಲ. ಅವರಿಗೆ ರಕ್ಷಣೆ ನೀಡಿದ್ದೇ ಹಿಂದು ರಾಷ್ಟ್ರ ಎಂದರು.