7ನೇ ದಿನದ ಗಣೇಶ ವಿಸರ್ಜನೆ

25 vikram 7
Published on

ಧಾರವಾಡ: ಗಣೇಶ ಚತುರ್ಥಿ ಅಂಗವಾಗಿ ನಗರದ ವಿವಿಧ ಬಡಾವಣೆಗಳಲ್ಲಿ ಪ್ರತಿಷ್ಠಾಪಿಸಿದ್ದ ಸಾರ್ವಜನಿಕ ಗಣೇಶ ಮೂರ್ತಿಗಳನ್ನು 7ನೇ ದಿನವಾದ ಸೋಮವಾರ ಶ್ರದ್ಧಾ ಭಕ್ತಿಯಿಂದ ವಿಸರ್ಜನೆ ಮಾಡಲಾಯಿತು.
ಮಂಗಳವಾರಪೇಟ್, ಗುಲಗಂಜಿಕೊಪ್ಪ, ಕಮಲಾಪುರ, ನೆಹರು ಮಾರುಕಟ್ಟೆ, ಸೂಪರ್ ಮಾರುಕಟ್ಟೆ, ಗಾಂಧಿಚೌಕ್, ಸಾಧನಕೇರಿ ಸೇರಿ ವಿವಿಧ ಬಡಾವಣೆಗಳಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಗಳನ್ನು ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸುವ ಮೂಲಕ ಹೊಸಯಲ್ಲಾಪುರ ನುಚ್ಚಂಬ್ಲಿ, ಕೆಲಗೇರಿ ಕೆರೆ ಸೇರಿ ಇತರ ಕಡೆಗಳಲ್ಲಿ ವಿಸರ್ಜನೆ ಮಾಡಲಾಯಿತು.
ರಾತ್ರಿ 10 ಗಂಟೆಗೆ ಬಳಿಕ ಡಿಜೆ ಬಳಸಲು ಅವಕಾಶ ಇಲ್ಲದ ಕಾರಣ ಬಹುತೇಕ ಗಣೇಶ ಮೂರ್ತಿಗಳ ಮೆರವಣಿಗೆಯನ್ನು ಸಂಜೆ 6 ಗಂಟೆ ಹೊತ್ತಿಗೆ ಆರಂಭಿಸಲಾಗಿತ್ತು. ಕೆಲ ಮೂರ್ತಿಗಳನ್ನು ಸಂಜೆ 8 ಗಂಟೆ ಹೊತ್ತಿಗೆ ವಿಸರ್ಜನೆ ಸಹ ಮಾಡಲಾಗಿತ್ತು.
ಸ್ಥಳದಲ್ಲೇ ವಿಸರ್ಜನೆ: ನಗರದ ಸುಭಾಷ್ ರಸ್ತೆ ಹಾಗೂ ಸೂಪರ್ ಮಾರುಕಟ್ಟೆಯಲ್ಲಿ ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿಗಳನ್ನು ಸ್ಥಳದಲ್ಲೇ ವಿಸರ್ಜನೆ ಮಾಡಲಾಯಿತು. ಈ ಮೂರ್ತಿಗಳನ್ನು ಯಾವುದೇ ಆಡಂಬರದ ಮೆರವಣಿಗೆ ಇಲ್ಲದೆ ವಿಸರ್ಜಿಸಲಾಯಿತು. ಪ್ರತಿಷ್ಠಾಪನೆ ಮಾಡಿದ್ದ ಸ್ಥಳದಲ್ಲೇ ನೀರು, ಹಾಲು, ಅರಿಷಿನ, ಕುಂಕುಮದ ನೀರಿನ ಮೂಲಕ ಮೂರ್ತಿ ಕರಗಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net