

ಲಕ್ಷ್ಮೇಶ್ವರ: ಪಟ್ಟಣದ ಭಾವಸಾರ ಕ್ಷತ್ರೀಯ ಮತ್ತು ಎಸ್‌ಎಸ್‌ಕೆ ಸಮಾಜದವರು ಶ್ರದ್ಧೆ, ಭಕ್ತಿ, ಸಂಪ್ರದಾಯ ಬದ್ಧವಾಗಿ ಪರಿಸರ ಸ್ನೇಹಿ ಗಣೇಶ ಮೂರ್ತಿಯನ್ನು ಐದು ದಿನಗಳವರೆಗೆ ಪ್ರತಿಷ್ಠಾಪಿಸಿ ಭಜನೆ, ಪ್ರಾರ್ಥನೆ, ಸಾಮೂಹಿಕ ನೃತ್ಯದೊಂದಿಗೆ ವಿಸರ್ಜನೆ ಮಾಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.
ಮೂರ್ತಿ ವಿಸರ್ಜನೆ ಮೆರವಣಿಗೆಗೆ ಚಾಲನೆ ನೀಡಿದ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡರ ಮಾತನಾಡಿ, ಐತಿಹಾಸಿಕ, ಧಾರ್ಮಿಕ, ಸಾಂಸ್ಕೃತಿಕ ಹಿನ್ನೆಲೆ ಹೊಂದಿರುವ ಭಾವಸಾರ ಕ್ಷತ್ರಿಯ ಮತ್ತು ಎಸ್‌ಎಸ್‌ಕೆ ಸಮಾಜ ಬಾಂಧವರು ವಾರಕರಿ ಸಂಪ್ರದಾಯದ ಪ್ರಕಾರ ತಾಳ ವಾದ್ಯ ಸಂಗೀತ ಭಜನೆ, ಸಾಮೂಹಿಕ ನೃತ್ಯದ ಮೂಲಕ ಗಣೇಶ ವಿಸರ್ಜನೆ ಮಾಡುತ್ತಿರುವುದು ಮಾದರಿಯಾಗಿದೆ. ಆಧುನಿಕತೆಯ ಅಬ್ಬರದಲ್ಲಿಯೂ ಸಂಪ್ರದಾಯವನ್ನು ಉಳಿಸಿಕೊಳ್ಳಬಹುದು ಎನ್ನುವದಕ್ಕೆ ಈ ಗಣೇಶ ವಿಸರ್ಜನೆ ಕಾರ್ಯಕ್ರಮ ಸಾಕ್ಷಿಯಾಗಿದೆ. ನಮ್ಮ ಸಂಸ್ಕೃತಿಯ ಪ್ರತೀಕವಾದ ಹಬ್ಬದ ಆಚರಣೆಗಳು ಅರ್ಥಪೂರ್ಣವಾಗಿರಬೆಕು. ಎಲ್ಲರಿಗೂ ಸಂತೋಷ, ಖುಷಿ ತರುವಂತಿರಬೇಕು ಎಂದರು.
ಜಮಖಂಡಿಯಿಂದ ಆಗಮಿಸಿದ ಪಾಂಡುರಂಗ ಭಜನಾ ಮಂಡಳಿಯವರು ವಾರಕರಿ ಸಂಪ್ರದಾಯದ ಪ್ರಕಾರ ತಾಳ ಮೃದಂಗ ಮೂಲಕ ಭಜನೆ ಮಾಡುತ್ತಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಸಮಾಜ ಬಾಂಧವರು ವಿಷ್ಣು-ಹರಿನಾಮ ಭಜನೆ ಮಾಡುತ್ತಾ ಸಾಗಿದ್ದು ಸಾರ್ವಜನಿಕರ ಗಮನ ಸೆಳೆಯಿತು.
ಮಾಜಿ ಶಾಸಕ ಜಿ.ಎಸ್ ಗಡ್ಡದೇವರಮಠ, ಜಿ.ಎಂ. ಮಹಾಂತಶೆಟ್ಟರ, ರಾಮಣ್ಣ ಲಮಾಣಿ, ಮಹೇಶ ಹೊಗೆಸೊಪ್ಪಿನ, ಗಂಗಾಧರ ಮೆಣಸಿನಕಾಯಿ, ಡಾ. ದೀಪಾ ಬಿಂಕದಕಟ್ಟಿ, ನಾರಾಯಣಸಾ ಪವಾರ, ಈಶ್ವರ ಮೆಡ್ಲೇರಿ, ಸಹನಾ ಠಿಕಾರೆ, ವಾಸು ಬೋಮಲೆ, ಪ್ರವೀಣ ಬೋಮಲೆ, ವೆಂಕಟೇಶ ಮಾತಾಡೆ, ಫಕೀರಪ್ಪ ಬೋಮಲೆ, ಪುಂಡಲೀಕ ಮಾತಾಡೆ, ಸೋಪಾನ ತಾಂದಳೆ, ಕಾಶಿನಾಥ ಬೋಮಲೆ, ಸಂಜೀವ ಮಾಂಡ್ರೆ, ಶಂಕರ ಹವಳೆ, ಪ್ರವೀಣ ಮಾತಾಡೆ, ಖಂಡೋಭಾ ನವಲೆ, ಪ್ರಭು ಬೋಮಲೆ, ಸಂತೋಷ ಸರ್ವದೆ ಇತರರು ಪಾಲ್ಗೊಂಡಿದ್ದರು.
ಗಣೇಶೋತ್ಸವ ನಿಮಿತ್ತ ಪಾಂಡುರಂಗ ದೇವಸ್ಥಾನದಲ್ಲಿ ರಂಗೋಲಿ ಸೇರಿ ವಿವಿಧ ಸ್ಪರ್ಧೆಗಳು ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಜರುಗಿತು. ಡಾ.ಮಲ್ಲಿಕಾರ್ಜುನ ಮನ್ಸೂರ್ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಶ್ರೀಧರ ಮಾಂಡ್ರೆ, ವಿಠ್ಠಲ ಶ್ರೀ ಪ್ರಶಸ್ತಿ ಪುರಸ್ಕೃತ ಜಿ.ಪಿ ಮಾಂಡ್ರೆ, ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ರಮೇಶ ಮಾಂಡ್ರೆ, ಶಿಕ್ಷಣ ಸೇವಾ ರತ್ನ ರಾಜ್ಯ ಪ್ರಶಸ್ತಿ ಪುರಸ್ಕೃತ ಸತೀಶ ಬೋಮಲೆ ಅವರನ್ನು ಸನ್ಮಾನಿಸಲಾಯಿತು.