

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ ಶ್ರದ್ಧೆ, ಭಕ್ತಿ, ಸಡಗರದಿಂದ ಗಣೇಶೋತ್ಸವ ಆಚರಿಸಲಾಯಿತು.
ಜಿಲ್ಲೆಯಲ್ಲಿ 381 ಕಡೆ ಸಾರ್ವಜನಿಕ ಗಣೇಶೋತ್ಸವ ಆಚರಣೆ ನಡೆಯುತ್ತಿದೆ. ಮಂಗಳೂರು ಕಮಿಷನರೆಟ್ ವ್ಯಾಪ್ತಿಯಲ್ಲಿ (ಮೂಲ್ಕಿ, ಮೂಡುಬಿದಿರೆ, ಉಳ್ಳಾಲ, ಸುರತ್ಕಲ್, ಪಣಂಬೂರು) 166, ದ.ಕ. ಜಿಲ್ಲೆಯ ಗ್ರಾಮಾಂತರದಲ್ಲಿ 215 ಗಣೇಶೋತ್ಸವಗಳಲ್ಲಿ ವಿಗ್ರಹ ಪ್ರತಿಷ್ಠಾಪನೆ ಮಾಡಲಾಗಿದೆ.
ಪ್ರಮುಖ ಗಣಪತಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಗಣಯಾಗ, ರಂಗಪೂಜೆ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು. ಮನೆಮನೆಗಳಲ್ಲೂ ವಿನಾಯಕನಿಗೆ ವಂದನೆ ಸಲ್ಲಿಸಲಾಯಿತು. ಹಬ್ಬದ ಸಂಭ್ರಮ ಹಲವು ದಿನ ಮುಂದುವರಿಯಲಿದೆ. ಗಣೇಶನ ಮೂರ್ತಿಗಳನ್ನು ಹಲವು ಕಡೆ ಪ್ರತಿಷ್ಠಾಪಿಸಲಾಗಿದ್ದು, ಅದ್ದೂರಿ ಧಾರ್ಮಿಕ- ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಗಣಪತಿ ದೇವಸ್ಥಾನ ಮತ್ತು ಸಾರ್ವಜನಿಕ ಗಣೇಶೋತ್ಸವಗಳಿಗೆ ಸಾವಿರಾರು ಜನ ಆಗಮಿಸಿ, ಆದಿಪೂಜಿತನಿಗೆ ಪೂಜೆ ಸಲ್ಲಿಸಿದರು. ಶಾಲಾ ವಿದ್ಯಾರ್ಥಿಗಳಿಗೆ ಗಣೇಶನ ಚಿತ್ರ, ರಂಗೋಲಿ ಬಿಡಿಸುವ ಸ್ಫರ್ಧೆಗಳು, ಭಕ್ತಿಗೇತೆ ಗಾಯನ ಸ್ಪರ್ಧೆಗಳು ನಡೆದವು.
ಮನೆ ಮನೆಗಳಲ್ಲಿ ಗಣಪತಿಯ ವಿಗ್ರಹ ಇರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಕುಟುಂಬಸ್ಥರು ಸೇರಿ ಮನೆ ತುಂಬಿಸಿ, ಹೊಸ ಅಕ್ಕಿ ಊಟ ಮಾಡುವ ಕಾರ್ಯಕ್ರಮ ನಡೆಯಿತು. ಕೆಲವು ಕಡೆ ಮಂಗಳವಾರ ಸಾಯಂಕಾಲ ಸಾರ್ವಜನಿಕ ಗಣೇಶೋತ್ಸವದ ಮೂರ್ತಿಗಳನ್ನು ಜಲಸ್ತಂಭನಗೊಳಿಸಲಾಗಿದೆ. ಕೆಲವೆಡೆ ಮೂರು, ಐದು, ಏಳು ಹಾಗೂ ಒಂಬತ್ತನೇ ದಿನ ಮೂರ್ತಿಗೆ ಪೂಜೆ ಸಲ್ಲಿಸಿದ ಬಳಿಕ ವಿಸರ್ಜನೆ ಮಾಡಲಾಗುತ್ತದೆ. ಕೋಮು ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಪೊಲೀಸ್ ಬಲ ನಿಯೋಜಿಸಲಾಗಿದೆ.
ದೇವಸ್ಥಾನಗಳಲ್ಲಿ ವಿಶೇಷ ಪೂಜೆ
ಚೌತಿ ಹಿನ್ನೆಲೆಯಲ್ಲಿ ಕರಾವಳಿಯ ಪ್ರಮುಖ ಗಣೇಶ ದೇವಳಗಳಾದ ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನ, ಶರವು ಶ್ರೀ ಮಹಾಗಣಪತಿ, ಪೊಲೀಸ್ ಲೇನ್ ಶ್ರೀ ಮುನೀಶ್ವರ ಮಹಾಗಣಪತಿ ದೇವಸ್ಥಾನ, ಉಡುಪಿ ಜಿಲ್ಲೆಯ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನ, ಹಟ್ಟಿಯಂಗಡಿ ಸಿದ್ಧಿವಿನಾಯಕ ದೇವಸ್ಥಾನ, ಕಾಸರಗೋಡು ಜಿಲ್ಲೆಯ ಮಧೂರು ಸಿದ್ದಿವಿನಾಯಕ ಮುಂತಾದ ಗಣಪತಿ ದೇವಸ್ಥಾನಗಳಲ್ಲಿ ವಿಶೇಷ ಸೇವೆಗಳು ಜರುಗಿದವು. ಎಲ್ಲ ದೇಗುಲಗಳಲ್ಲೂ ಅಪಾರ ಸಂಖ್ಯೆಯ ಭಕ್ತರು ಸೇರಿದ್ದರು.