ಗಣೇಶೋತ್ಸವ, ಈದ್‌ ಮಿಲಾದ್‌ ಶಾಂತಿ ಸಭೆ

ganeshotsava-meeting
Published on

ಕಾರವಾರ: ಸಾರ್ವಜನಿಕ ಗಣೇಶೋತ್ಸವಕ್ಕೆ ಸಂಬಂಧಪಟ್ಟ ಎಲ್ಲ ಇಲಾಖೆಗಳಿಂದ ಏಕ ಗವಾಕ್ಷಿ ಒಪ್ಪಿಗೆ ಪಡೆಯುವುದು ಕಡ್ಡಾಯ ಎಂದು ಎಸ್‌ಪಿ ಎಂ.ನಾರಾಯಣ ಎಚ್ಚರಿಸಿದರು.
ಎಸ್‌ಪಿ ಕಚೇರಿಯಲ್ಲಿ ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ಸಂಬಂಧ ಜಿಲ್ಲಾ ಮಟ್ಟದ ಶಾಂತಿ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಗಣೇಶೋತ್ಸವ ಸಮಿತಿಗಳು ಸಂಬಂಧಪಟ್ಟ ನಗರ ಸ್ಥಳೀಯ ಸಂಸ್ಥೆ ಅಥವಾ ಗ್ರಾಪಂ, ಪೊಲೀಸ್, ಅಗ್ನಿಶಾಕ ಹಾಗೂ ಹೆಸ್ಕಾಂ ಇಲಾಖೆಗಳಿಗೆ ಸಂಬಂಧಿತ ದಾಖಲೆಗಳನ್ನು ಸಲ್ಲಿಸಿ ಪೂರ್ವಾನುಮತಿ ಪಡೆಯಬೇಕು.
ಮೆರವಣಿಗೆಯ ಸಂದರ್ಭದಲ್ಲಿ ಅಶ್ಲೀಲ ಹಾಗೂ ಪ್ರಚೋದನಕಾರಿ ಹಾಡುಗಳನ್ನು, ಹಾಕುವುದನ್ನು ನಿಷೇಧಿಸಲಾಗಿದೆ. ಮೆರವಣಿಗೆ ಹಾಗೂ ಪೂಜೆಯ ಸಂದರ್ಭದಲ್ಲಿ ಸಾಕಷ್ಟು ಕಾರ್ಯಕರ್ತರನ್ನು ನೇಮಿಸಿಕೊಳ್ಳಬೇಕು. ಅವರಿಗೆ ಒಂದೇ ಸ್ವರೂಪದ ಶರ್ಟ್ ನೀಡಿ, ಅದರ ಮೇಲೆ ಸಮಿತಿಯ ಚಿನ್ಹೆ ಅಥವಾ ಹೆಸರು ಇರುವಂತೆ ನೋಡಿಕೊಳ್ಳಬೇಕು.
ಪೆಂಡಾಲ್ ಹೊರಗೆ ಸಂಬಂಧಪಟ್ಟ ಸಮಿತಿಯ ಜವಾಬ್ದಾರಿಯುತ ವ್ಯಕ್ತಿಯ ಹೆಸರು ಮೊಬೈಲ್ ಸಂಖ್ಯೆ, ಸಂಬಂಧಪಟ್ಟ ಪೊಲೀಸ್ ಠಾಣೆಯ ಅಧಿಕಾರಿಯ ಮೊಬೈಲ್ ಸಂಖ್ಯೆಯಿರುವ ಬೋರ್ಡ್ ಹಾಕಬೇಕು. ಪಿಒಪಿ ಗಣೇಶ ಮೂರ್ತಿಗಳನ್ನು ನಿಷೇಧಿಸಲಾಗಿದ್ದು, ಅವುಗಳನ್ನು ಬಳಸುವಂತಿಲ್ಲ. ವಿಸರ್ಜನೆಯ ಸಮಯದಲ್ಲಿ ಮೂರ್ತಿ ಹೊರತುಪಡಿಸಿ, ಉಳಿದ ಪ್ಲಾಸ್ಟಿಕ್ ಹಾಗೂ ಇತರ ವಸ್ತುಗಳ ಸಮರ್ಪಕ ವಿಲೇವಾರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಬೇಕು ಎಂದು ತಿಳಿಸಿದರು. ವಿದ್ಯುತ್ ಅವಗಢಗಳು ನಡೆಯದಂತೆ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿಕೊಳ್ಳಬೇಕು. ಪೆಂಡಾಲ್‌ನಲ್ಲಿ ರಾತ್ರಿ ಹೊತ್ತು ಅಕ್ರಮ ಚಟುವಟಿಕೆಗಳು ನಡೆಯದಂತೆ ನೋಡಿಕೊಳ್ಳಬೇಕು ಎಂದು ಎಚ್ಚರಿಸಿದರು. ಎಂಎಲ್‌ಸಿ ಗಣಪತಿ ಉಳ್ವೇಕರ್, ಎಡಿಸಿ ಪ್ರಕಾಶ ರಜಪೂತ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಸ್ಟೆಲ್ಲಾ ವರ್ಗೀಸ್, ಹೆಚ್ಚುವರಿ ಎಸ್‌ಪಿ ದೇವರಾಜ್, ಇನಾಯತುಪ್ಪಾ ಶಾಬಂದ್ರಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net