

ಮಂಗಳೂರು : ಕರಾವಳಿ ಗೌರಿ ಗಣೇಶ ಹಬ್ಬದ ಸಡಗರದಲ್ಲಿದೆ. ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಜೋರಾಗಿದೆ. ಕಲಾವಿದರು ಗಣೇಶ ವಿಗ್ರಹಗಳಿಗೆ ಅಂತಿಮ ಸ್ಪರ್ಶ ನೀಡುತ್ತಿದ್ದಾರೆ. ಸಂಘ ಸಂಸ್ಥೆಗಳು ಆಯೋಜಿಸುವ ಸಾರ್ವಜನಿಕ ಗಣೇಶೋತ್ಸವಗಳ ಸಿದ್ಧತೆ ಭರದಿಂದ ಸಾಗಿದ್ದು, ಗೌರಿ ಹಬ್ಬದ ಮುನ್ನಾದಿನ ಭಾನುವಾರ ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಆರಂಭವಾಗಿದೆ. ಕರಾವಳಿಯಲ್ಲಿ ಮಂಗಳವಾರ ಗಣೇಶೋತ್ಸವ ಆಚರಿಸಲ್ಪಡುವುದರಿಂದ ಸೋಮವಾರ ಖರೀದಿ ಭರಾಟೆ ಹೆಚ್ಚಳವಾಗಲಿದೆ.
ಗ್ರಾಹಕರು ಹೂವು, ಸಿಹಿ ತಿಂಡಿ, ಕಬ್ಬು ಖರೀದಿ ಆರಂಭಿಸಿದ್ದಾರೆ. ಪೂರಕವಾಗಿ ತರಕಾರಿ, ಹೂವು ಗ್ರಾಹಕರಿಗೆ ಕೈಗೆಟಕುವ ದರದಲ್ಲಿದೆ. ಮಂಗಳೂರಿನ ಸ್ಟೇಟ್‌ಬ್ಯಾಂಕ್, ಕಾರ್‌ಸ್ಟ್ರೀಟ್, ಕಂಕನಾಡಿ, ಕದ್ರಿ ಮಾರುಕಟ್ಟೆಗಳಲ್ಲಿ ತರಕಾರಿ, ಹಣ್ಣು, ಹೂವುಗಳ ಬೃಹತ್ ಸಂಗ್ರಹವಿದೆ. ಸ್ಥಳೀಯ ತರಕಾರಿ ಧಾರಣೆ ಹೆಚ್ಚಳವಾಗಿದೆ. ಲಿಂಬೆ ದರ ದ್ವಿಗುಣಗೊಂಡಿದೆ. ಹಣ್ಣುಗಳ ದರ ಏರಿಕೆಯಾಗಿದೆ.
ತರಕಾರಿ ಯಾವುದಕ್ಕೆ ಎಷ್ಟು?: ಸ್ಥಳೀಯ ಹೀರೆಕಾಯಿ, ಬೀಟ್ರೋಟ್, ಗೆಣಸು, ಬಸಳೆ, ಹಣ್ಣು ಹಂಪಲುಗಳ ಬೆಲೆಗಳು ಹೆಚ್ಚಳವಾಗಿದೆ. ಆವರಣದಲ್ಲಿ ಕಳೆದ ವಾರದ ದರ ನೀಡಲಾಗಿದೆ - ಟೊಮ್ಯಾಟೋ 25 (20 ರೂ.), ಕ್ಯಾರೆಟ್ 90 (70), ನೀರುಳ್ಳಿ 38 (35), ಬೀನ್ಸ್ 75 (60), ಕಾಯಿಮೆಣಸು 100 (75), ತೊಂಡೆಕಾಯಿ ಸ್ಥಳೀಯ 100(85), ತೊಂಡೆಕಾಯಿ- ಘಾಟಿ 50 (40), ಸೌತೆಕಾಯಿ 20 (15), ಬಟಾಟೆ 35(32), ಬೆಂಡೆ ಸ್ಥಳೀಯ 180 (150), ಅಲಸಂಡೆ ಸ್ಥಳೀಯ 100(70), ತೆಂಗಿನಕಾಯಿ 30 (25), ಲಿಂಬೆ 180 (130) ಧಾರಣೆ ಮಂಗಳೂರಿನಲ್ಲಿದೆ.
ಗಣಪತಿ ವಿಗ್ರಹಗಳ ಖರೀದಿ
ನಗರದಲ್ಲಿ ಗಣಪತಿ ವಿಗ್ರಹಗಳ ಖರೀದಿ, ಮಾರಾಟ ಆರಂಭಗೊಂಡಿದೆ. ಕೊನೆಯ ದಿನಗಳಲ್ಲಿ ದಟ್ಟಣೆ ಆಗುವ ಕಾರಣ ಹಬ್ಬಕ್ಕೆ ಎರಡು ದಿನಗಳ ಮುನ್ನ ವಿಗ್ರಹ ಖರೀದಿಯಲ್ಲಿ ಜನತೆ ತೊಡಗಿಕೊಂಡಿದ್ದಾರೆ. ವಿವಿಧ ಸಂಘ, ಸಂಸ್ಥೆಗಳು, ಸಾರ್ವಜನಿಕ ಗಣೇಶೋತ್ಸವ, ಮನೆಗಳು ಸಹಿತ ಕಳೆದ ವರ್ಷದಂತೆ ಈ ಬಾರಿಯೂ ಗಣಪತಿ ವಿಗ್ರಹಕ್ಕೆ ಬೇಡಿಕೆ ಇದೆ. ಮನೆಗಳಲ್ಲಿ 3 ಅಡಿ ಗಣಪತಿಗೆ ಬೇಡಿಕೆ ಇದ್ದರೆ, ಸಂಘ ಸಂಸ್ಥೆಗಳಿಗೆ 7 ಅಡಿಯಿಂದ 10 ಅಡಿ ವಿಗ್ರಹಗಳಿಗೆ ಬೇಡಿಕೆ ಇದೆ. ಆದರೆ ಈ ಬಾರಿ ಬೃಹತ್ ಗಣಪತಿ ವಿಗ್ರಹಗಳ ಬದಲು, ಕಡಿಮೆ ಎತ್ತರದ ವಿಗ್ರಹಗಳ ತಯಾರಿಗೆ ಸಂಘ-ಸಂಸ್ಥೆಗಳು ಸೂಚಿಸಿವೆ.
ಹೂವು ದರ ಅಗ್ಗ
ಶ್ರೀಕೃಷ್ಣ ಜನ್ಮಾಷ್ಟಮಿ ಸಂದರ್ಭ ಇಳಿಕೆಯಾಗಿದ್ದ ಹೂವಿನ ದರ ಗಣೇಶನ ಹಬ್ಬಕ್ಕೂ ಕಾಯ್ದುಕೊಂಡಿದೆ. ಮಂಗಳೂರಿನಲ್ಲಿ ಸೇವಂತಿಗೆ, ಬಿಳಿ ಸೇವಂತಿಗೆ, ಚೆಂಟು ಹೂವು, ಕನಕಾಂಬರ, ಕಾಕಡ ಮಾರ್‌ಗೆ 50 ರೂ. ದರದಲ್ಲಿ ಮಾರಾಟವಾಗಿದೆ. ಆದರೆ ಭಾನುವಾರ ದೊಡ್ಡ ಮಟ್ಟದಲ್ಲಿ ವ್ಯಾಪಾರ ಆಗಿಲ್ಲ. ಸೋಮವಾರ ಬೇಡಿಕೆ ಹೆಚ್ಚಾದರೆ ದರ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಬೆಂಗಳೂರಿನಿಂದ ಬಂದ ವ್ಯಾಪಾರಿ ಗಣೇಶ್ ತಿಳಿಸಿದ್ದಾರೆ.
ಕಬ್ಬಿಗೆ ಭರ್ಜರಿ ಬೇಡಿಕೆ:
ಗಣೇಶನ ಹಬ್ಬದಂದು ಕಬ್ಬು ವಿಶೇಷ ಪಾತ್ರ ವಹಿಸುತ್ತದೆ. ಹೀಗಾಗಿ ಕಬ್ಬಿಗೆ ಭರ್ಜರಿ ಬೇಡಿಕೆ ಕುದುರಿದೆ. ಆದರೆ ಉತ್ತರ ಕರ್ನಾಟಕ ಭಾಗದಲ್ಲಿ ಮಳೆ ಇಲ್ಲದ ಕಾರಣ ಈ ಬಾರಿ ಕಬ್ಬು ಪೂರೈಕೆ ಕಡಿಮೆಯಾಗಿದೆ. ಬೇಡಿಕೆ ಹೆಚ್ಚಾದುದರಿಂದ ಮಂಗಳೂರು-ಉಡುಪಿಯಲ್ಲಿ ಕಬ್ಬು ಒಂದರ ದರ 50 ರೂ.ಗೆ ಏರಿಕೆ ಕಂಡಿದೆ.
ಹಣ್ಣುಹಂಪಲು ಧಾರಣೆ ಹೆಚ್ಚಳ:
ಕದಳಿ ಬಾಳೆ ಹಣ್ಣು ದರ 100 ರೂ, ನೇಂದ್ರ 70 ರೂ. ತಲುಪಿದೆ. ಮುಸಂಬಿ 70 ರೂ., ಕಿತ್ತಳೆ 80 ರೂ., ದಾಳಿಂಬೆ 100 ರೂ, ಸೇಬು 150 ರೂ, ದ್ರಾಕ್ಷಿ 120 ರೂ. ಕೆಜಿಗೆ ಮಾರಾಟವಾಗುತ್ತಿದೆ. ಹಲಸಿನ ಎಲೆ ಗುಂಡ ಹಾಗೂ ಮೂಡೆ ಎಲೆ ವ್ಯಾಪಾರವೂ ಭರದಿಂದ ನಡೆಯುತ್ತಿದೆ.