

ಅಕ್ಕಿಆಲೂರ: ಪಟ್ಟಣದಲ್ಲಿ ಪ್ರತಿಷ್ಠಾಪಿಸಿರುವ ಸಾರ್ವಜನಿಕ ಗಣೇಶ ಮೂರ್ತಿಗಳ ಎದುರು ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ ಘೋಷ್ಯ ವಾದ್ಯದ ಮೂಲಕ ಗಣೇಶ ವಂದನೆ ಕಾರ್ಯಕ್ರಮ ಜರುಗಿತು.
ಬಸ್ ನಿಲ್ದಾಣದಲ್ಲಿ ಹಿಂದು ಯುವ ಸೇನೆಯಿಂದ ಪ್ರತಿಷ್ಠಾಪಿಸಿರುವ ಗಣೇಶ, ಪೇಟೆ ಓಣಿ, ಹಳೂರ ಓಣಿ, ವಿರಕ್ತಮಠ ಓಣಿ, ಕೆಳಗಿನ ಓಣಿ, ದುಂಡಿಬಸವೇಶ್ವರ ಓಣಿ, ಮಾರುತಿ ನಗರ, ಬಸವೇಶ್ವರ ನಗರ, ಚನ್ನವೀರೇಶ್ವರ ನಗರ, ವಡ್ಡರ ಓಣಿ, ಚಲವಾದಿ ಓಣಿ, ಕಮಾಟಿಗೇರಿ, ಇಂದಿರಾ ನಗರದ ಬಳಿ ಪ್ರತಿಷ್ಠಾಪಿಸಿದ ಗಣೇಶ ಮೂರ್ತಿಗಳ ಎದುರು ಹಾಗೂ ಗ್ರಾಮದೇವಿ ಪಾದಗಟ್ಟೆ ಬಳಿ ಆರ್ಎಸ್ಎಸ್ ಘೋಷ್ಯ ವಾದ್ಯದ ಮೂಲಕ ಗಣೇಶ ವಂದನೆ ಸಲ್ಲಿಸಿದ 25 ಗಣವೇಷಧಾರಿ ಸ್ವಯಂ ಸೇವಕರು, ಹಾನಕ, ಪಣವ, ವಂಶಿ, ಜಾಲರಿ, ಶಂಖ, ಪಂಜ ಮೂಲಕ ಸಂಘದ ಘೋಷ್ಯ ನುಡಿಸಿದರು.
ಕಿರಣ, ಭೋಪ, ಉದಯ, ಶ್ರೀರಾಮ, ಶಿವರಂಜಿ ಎಂಬ ತಾಳದಿಂದ ಗಣೇಶನಿಗೆ ಭಕ್ತಿಯ ವಂದನೆ ಸಲ್ಲಿಸಿ, ಕೇಸರಿಯ ಭಗವಾನ್ ಧ್ವಜಾರೋಹಣ ನೆರವೇರಿಸಿದರು. ಪ್ರತಿ ಗಣೇಶನ ಪೆಂಡಾಲ್ ಎದುರು 15 ನಿಮಿಷ ಘೋಷ್ಯ ಬಾರಿಸಿದ ನುಡಿಗಳು ಎಲ್ಲರ ಗಮನ ಸೆಳೆಯಿತು. ಒಂದು ಕಡೆಯಿಂದ ಮತ್ತೊಂದು ಕಡೆ ಘೋಷ್ಯ ವಾದ್ಯದ ಮೆರವಣಿಗೆ ಮೂಲಕ ಸಂಚರಿಸಿದ ಗಣವೇಷ ಧಾರಿ ಸ್ವಯಂ ಸೇವಕರ ಹಿಂದೆ ಸಾಗಿದ ವಿವಿಧ ಹಿಂದು ಪರ ಸಂಘಟನೆಗಳ ಕಾರ್ಯಕರ್ತರು, ಹಿಂದು ಧರ್ಮ ಮತ್ತು ಭಾರತ ಮಾತೆಯ ಜಯ ಘೋಷಗಳನ್ನು ಮೊಳಗಿಸಿದರು. ಪಟ್ಟಣದ ಎಲ್ಲ ಹಿಂದು ಪರ ಸಂಘಟನೆಗಳ ಕಾರ್ಯಕರ್ತರು ಉಪಸ್ಥಿತರಿದ್ದರು.