

ಪ್ರಶಾಂತ ಭಾಗ್ವತ ಉಡುಪಿ
ಸ್ನೇಹ ಅಥವಾ ಸ್ನೇಹಿತರೆಂದರೆ ಎಂದೂ ಮರೆಯಾಲಾಗದ ಬಾಂಧವ್ಯ. ನಿತ್ಯವೂ ನವನವೀನ. ಒಟ್ಟಿಗೇ ಐದು ವರ್ಷ ಕಲಿತು ಪರವೂರುಗಳಲ್ಲಿದ್ದ ವಿವಿಧ ವೃತ್ತಿ ನಿರತ ಚಿತ್ರಕಲಾ ಸ್ನೇಹಿತರು 18 ವರ್ಷದ ಬಳಿಕ ಮತ್ತದೇ ಶಾಲೆಯಲ್ಲಿ ಗಣೇಶನಿಗಾಗಿ ಬೆರೆತಿದ್ದಾರೆ.
ಉಡುಪಿಯ ಜಂಗಮ ಮಠದ ಚಿತ್ರಕಲಾ ಮಂದಿರದ 2002-2007ನೇ ಸಾಲಿನ ಹಳೆಯ ವಿದ್ಯಾರ್ಥಿಗಳು ಕಲಾ ಶಾಲೆಯ ವಿಭೂತಿ ಆರ್ಟ್ ಗ್ಯಾಲರಿಯಲ್ಲಿ ಸಂಗಮಗೊಂಡಿದ್ದಾರೆ. ಚೌತಿ ಹಬ್ಬದ ನಿಮಿತ್ತ ವಿವಿಧ ಸ್ವರೂಪೀ ಗಣೇಶನನ್ನು ಚಿತ್ರಿಸಿ, ಸಮೂಹ ಕಲಾಪ್ರದರ್ಶನ ಏರ್ಪಡಿಸಿದ್ದಾರೆ.
ಪೂರ್ಣ ಪ್ರಮಾಣದ ಕಲಾಕಾರರಾಗಿ ವಿವಿಧ ಮಾಧ್ಯಮ, ಕಲಾ ಕ್ಷೇತ್ರಗಳಲ್ಲಿ ದುಡಿಯುತ್ತಿರುವ 13 ಸ್ನೇಹಿತರು ಕಲಿತ ಶಾಲೆಯಲ್ಲಿ ಹಿಂದಿನ ಸವಿಸವಿ ನೆನಪು ಮೆಲುಕು ಹಾಕಿದ್ದಾರೆ. ಬಗೆಬಗೆಯ ವಿನಾಯಕನನ್ನು ಚಿತ್ರಿಸಿ, ಗಣೇಶ ಹಬ್ಬದ ನಿಮಿತ್ತ ಸಾರ್ವಜನಿಕ ವೀಕ್ಷಣೆಗೆ ಅವಕಾಶವನ್ನೂ ಕಲ್ಪಿಸಿದ್ದಾರೆ.
ಉಡುಪಿಯ ಚಿತ್ರಕಲಾ ಮಂದಿರದಲ್ಲಿ ನಾವು 15 ವಿದ್ಯಾರ್ಥಿಗಳು 5 ವರ್ಷ ಕಲಾ ತರಬೇತಿ ಪಡೆದಿದ್ದೆವು. ಬೇರೆ ಬೇರೆ ಕಡೆಯಿದ್ದ 13 ವಿದ್ಯಾರ್ಥಿಗಳು ಗಣೇಶನ ಹಬ್ಬದ ಸಂದರ್ಭದಲ್ಲಿ ಸೇರಿದ್ದೇವೆ. ಕಲಾಭೀಷ್ಮ ದಿ. ಕೆ.ಎಲ್. ಭಟ್ ಸ್ಮರಣೆಯೊಂದಿಗೆ ನಮಗೆ ಕಲಾವಿದ್ಯೆ ನೀಡಿದ ಗುರುಗಳನ್ನು ಗೌರವಿಸಿದ್ದೇವೆ. ಕಲೆಯ ಪ್ರದರ್ಶನದ ಮೂಲಕ ಗುರುಗಳಿಗೆ ನಮನ ಸಲ್ಲಿಸಿದ್ದೇವೆ. | ಡಾ. ಜನಾರ್ದನ ರಾವ್ ಹಾವಂಜೆ. ಕಾವಿ ಕಲಾವಿದ ಮಕ್ಕಳಿಗೆ ಗಣೇಶನ ಪುರಾಣೇತಿಹಾಸ ಪರಿಚಯಿಸುವುದೇ ಈ ಕಲಾ ಪ್ರದರ್ಶನದ ಪ್ರಮುಖ ಉದ್ದೇಶ. ಇಂದಿನ ಮಕ್ಕಳಿಗೆ ಪಾಲಕರೂ ಸಹ ಮೊಬೈಲ್ನಲ್ಲಿ ಆಟ ಆಡುವುದನ್ನೇ ರೂಢಿಸಿದ್ದಾರೆ. ಅವರಿಗೆ ನಮ್ಮ ಹಬ್ಬ-ಸಂಪ್ರದಾಯದ ಅರಿವು ಮೂಡಿಸಿ ಇಂತಹ ಕಲೆಗಳತ್ತ ಆಸಕ್ತಿ ಮೂಡಿಸುವುದು ನಮ್ಮ ಆಶಯವಾಗಿದೆ. | ಯಶೋದಾ ಎಸ್. ಸನಿಲ್. ಚಿತ್ರ ಕಲಾವಿದೆ.