

ಚನ್ನಗಿರಿ: ಚನ್ನಗಿರಿಯ ವಿಶ್ವ ಹಿಂದು ಪರಿಷತ್ ಹಾಗೂ ಬಜರಂಗ ದಳದ ಗಣಪತಿ ವಿಸರ್ಜನೆಗೆ ಮೈಸೂರು ಮಾಜಿ ಸಂಸದ ಪ್ರತಾಪ್ ಸಿಂಹ ವಾಹನ ಚಲಾಯಿಸುವ ಮೂಲಕ ಬುಧವಾರ ಚಾಲನೆ ನೀಡಿದರು.
ಶೋಭಾಯಾತ್ರೆಗೆ ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಹಾಗೂ ತುಮ್ೋಸ್ ಅಧ್ಯಕ್ಷ ಎಚ್.ಎಸ್. ಶಿವಕುಮಾರ್ ತೆಂಗಿನಕಾಯಿ ಒಡೆದು ಚಾಲನೆ ನೀಡಿದರು.
ಮೆರವಣಿಗೆಯು ಕಲ್ಲುಸಾಗರ ರಸ್ತೆ, ಗಣಪತಿ ವೃತ್ತ, ನೃಪತುಂಗ ರಸ್ತೆ, ಉಪ್ಪಾರ ಬೀದಿ ರಸ್ತೆ, ರಾಷ್ಟ್ರೀಯ ಹೆದ್ದಾರಿ, ಜೂನಿಯರ್ ಕಾಲೇಜು ರಸ್ತೆ, ಹಳೇ ತಾಲೂಕು ರಸ್ತೆ ಮೂಲಕ ಸಾಗಿತು. ನಾಸಿಕ್ ಡೋಲು, ಕೇರಳ ಚಂಡೆ, ಬೊಂಬೆ ಕುಣಿತ, ಡೊಳ್ಳು ಸೇರಿ ಅನೇಕ ಕಲಾತಂಡಗಳ ಶೋಭಾಯಾತ್ರೆಗೆ ಮೆರುಗು ತಂದವು.
ಶೋಭಾಯಾತ್ರೆಯಲ್ಲಿ ಶ್ರೀರಾಮ ಆಂಜನೇಯ ಸ್ವಾಮಿ, ಛತ್ರಪತಿ ಶಿವಾಜಿ ಮಹಾರಾಜ್, ಭಾರತಮಾತೆ, ಚಿತ್ರದುರ್ಗದ ಒನಕೆ ಓಬವ್ವನ ಪ್ರತಿಮೆಗಳನ್ನು ಅನಾವರಣ ಮಾಡಲಾಯಿತು. ಡಿಜೆಗಳಿಗೆ ಅವಕಾಶ ಇರದ ಕಾರಣ ಸ್ಥಳೀಯ ಕಲಾತಂಡಗಳ ನಾದಕ್ಕೆ ಯುವಕ- ಯುವತಿಯರು ಹೆಜ್ಜೆ ಹಾಕಿದರು.
ಮನೆ ಮುಂದೆ ಬಂದ ಗಣಪನಿಗೆ ಮನೆ ಒಡತಿಯರು ಪೂಜೆ ಸಲ್ಲಿಸಿದರು. ಪಟ್ಟಣದ ಎಲ್ಲೆಡೆ ಬಾಳೆ ಕಂದು, ಮಾವಿನಸೊಪ್ಪು ಕಟ್ಟಲಾಗಿತ್ತು ಮತ್ತು ಕೇಸರಿ ಬಾವುಟ, ಬಣ್ಣಗಳಿಂದ ಅಲಂಕಾರ ಮಾಡಲಾಗಿತ್ತು. ಗಣಪತಿ ವೃತ್ತ, ಬಸ್ನಿಲ್ದಾಣ ಮತ್ತು ಮುಖ್ಯ ವೃತ್ತಗಳಲ್ಲಿ ಶ್ರೀರಾಮ, ಆಂಜನೇಯ ಸ್ವಾಮಿಗಳ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿತ್ತು. ಪಟ್ಟಣದ ಗಣಪತಿ ಹೊಂಡದಲ್ಲಿ ಸಕಲ ಗೌರವದೊಂದಿಗೆ ವಿಸರ್ಜನೆ ಮಾಡಲಾಯಿತು.
ಶ್ರೀ ವಿಠಲ ರುಖುಮಾಯಿ ಕಲ್ಯಾಣ ಮಂದಿರದಲ್ಲಿ ಭಕ್ತರಿಗೆ ಊಟದ ವ್ಯವಸ್ಥೆಯನ್ನು ಸಮಿತಿಯವರು ಮಾಡಿದ್ದರು.
ಶೋಭಾಯಾತ್ರೆಯಲ್ಲಿ ಚನ್ನಗಿರಿ ಹಿರೇಮಠದ ಶ್ರೀ ಕೇದಾರಲಿಂಗ ಶಿವಶಾಂತವೀರ ಸ್ವಾಮೀಜಿ, ಹಾಲಸ್ವಾಮಿ ಮಠದ ಡಾ. ಬಸವ ಜಯಚಂದ್ರ ಸ್ವಾಮೀಜಿ, ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ, ಹೊನ್ನಾಳಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ಬಿಜೆಪಿ ಮುಖಂಡ ಮಾಡಾಳು ಮಲ್ಲಿಕಾರ್ಜುನ್, ವಿಶ್ವ ಹಿಂದು ಪರಿಷತ್ ಜಿಲ್ಲಾ ಗೌರವಾಧ್ಯಕ್ಷ ಮಂಜುನಾಥ್, ಜಿಲ್ಲಾ ಕಾರ್ಯದರ್ಶಿ ಎನ್. ರವಿಚಂದ್ರ, ಗಣಪತಿ ಸಮಿತಿ ಅಧ್ಯಕ್ಷ ಮಂಜುನಾಥ್ ಕಾಳೆ ಇದ್ದರು.
ಚನ್ನಗಿರಿ ಪಟ್ಟಣ ಸೇರಿದಂತೆ ಶಿವಮೊಗ್ಗ, ಭದ್ರಾವತಿ, ಹೊಳೆಹೊನ್ನೂರು, ದಾವಣಗೆರೆ, ಚಿಕ್ಕಮಗಳೂರು, ಚಿತ್ರದುರ್ಗ, ಹೊಳೆಲ್ಕೆರೆ, ಅಜ್ಜಂಪುರ, ಬೀರೂರು ಸೇರಿ ಸುತ್ತಮುತ್ತಲಿನ ಭಕ್ತರು ಮೆರವಣಿಗೆಗೆ ಆಗಮಿಸಿದ್ದರು.
ಪ್ರತಿವರ್ಷ ಡಿಜೆಯೊಂದಿಗೆ ಗಣೇಶ ವಿಸರ್ಜನೆ ನಡೆಯುತ್ತಿತ್ತು. ಆದರೆ ಡಿಜೆಗೆ ಅವಕಾಶ ಕೊಟ್ಟಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರ ವಂಶಾಡಳಿತದಲ್ಲಿ ಗಣೇಶ ಹಬ್ಬ ಆಚರಿಸುವುದು ಕಷ್ಟವಾಗಿದೆ. ಮುಂದಿನ ದಿನದಲ್ಲಿ ಚುನಾವಣೆಯಲ್ಲಿ ಹಿಂದುಗಳೆಲ್ಲ ಒಂದಾಗಿ ಸರಿಯಾದ ಪಾಠ ಕಲಿಸಬೇಕು. ಬಾನು ಮುಷ್ತಾಕ್ ಅವರು ವಿರೋಧದ ನಡುವೆ ಮೈಸೂರು ದಸರಾ ಉದ್ಘಾಟನೆಗೆ ಹಳದಿ ಬಣ್ಣದ ಸೀರೆಯುಟ್ಟು, ಮಲ್ಲಿಗೆ ಹೂ ಮುಡಿದು, ಆರತಿಯನ್ನು ಪಡೆದು ಪುಷ್ಪಾಚರಣೆ ಮಾಡಿರುವುದು ಸಂತೋಷ ತಂದಿದೆ. | ಪ್ರತಾಪ್ ಸಿಂಹ, ಮಾಜಿ ಸಂಸದ ಮೈಸೂರು.