

ಮಂಜುನಾಥ ಅಂಗಡಿ ಧಾರವಾಡ
ಗಣೇಶೋತ್ಸವ ಮತ್ತೆ ಬಂದಿದೆ. ರಾಜ್ಯಾದ್ಯಂತ ಪ್ಲಾಸ್ಟರ್ ಆಫ್ ಪ್ಯಾರಿಸ್ ಮೂರ್ತಿಗಳನ್ನು ನಿಷೇಽಸಿರುವುದು ಪರಿಸರ ಮಾಲಿನ್ಯ ತಡೆಗೆ ಮಾರ್ಗೋಪಾಯವಾಗಿದೆ. ಮತ್ತೊಂದೆಡೆ ಮಣ್ಣಿನ ಮೂರ್ತಿಗಳಿಗೆ ಆದ್ಯತೆ ದೊರೆತಿದ್ದು, ದೂರದ ಪಶ್ಚಿಮ ಬಂಗಾಳದ ಮೂರ್ತಿ ತಯಾರಕರ ಕಲಾಶ್ರೀಮಂತಿಕೆಗೆ ಭಾರಿ ಬೇಡಿಕೆ ಬಂದಿದೆ.
ಪಶ್ಚಿಮ ಬಂಗಾಳದ ಕೊಲ್ಕತ್ತಾದ ಮಣ್ಣಿನ ಮೂರ್ತಿ ತಯಾರಕರು ಕಳೆದ 6 ವರ್ಷಗಳಿಂದ ಸುಂದರವಾದ ಗಣೇಶನ ಮಣ್ಣಿನ ಮೂರ್ತಿಗಳಿಗೆ ಜೀವ ತುಂಬುವ ಕಾಯಕ ಮಾಡುತ್ತಿದ್ದಾರೆ. ಗಣೇಶೋತ್ಸವ ಸಂದರ್ಭದಲ್ಲಿ ನಗರದ ಚರಂತಿಮಠ ಗಾರ್ಡನ್‌ನಲ್ಲಿನ ಬಯಲು ಜಾಗದಲ್ಲಿ ಬೀಡು ಬಿಟ್ಟು ಮಣ್ಣಿನಿಂದ ಸುಂದರ ಮೂರ್ತಿಗಳನ್ನು ತಯಾರಿಸಿ ಜನಮನ ಗೆದ್ದಿದ್ದಾರೆ.
ಕೊಲ್ಕತ್ತಾ ಕಲಾವಿದರು ಗಣೇಶೋತ್ಸವಕ್ಕೂ 5- 6 ತಿಂಗಳ ಮೊದಲು ಆಗಮಿಸುತ್ತಾರೆ. ಇಲ್ಲಿನ ತಾತ್ಕಾಲಿಕ ಶೆಡ್‌ನಲ್ಲಿ 10ಕ್ಕೂ ಹೆಚ್ಚು ಕಾರ್ಮಿಕರು ಬೀಡು ಬಿಟ್ಟು ಮಣ್ಣಿನ ಮೂರ್ತಿಗಳನ್ನು ತಯಾರಿಸುತ್ತಿದ್ದಾರೆ. ೧೦೦ಕ್ಕೂ ಹೆಚ್ಚು ಬೃಹತ್ ಮೂರ್ತಿಗಳು ಇಲ್ಲಿ ಮಾರಾಟವಾಗುತ್ತವೆ.
ಕೊಲ್ಕತ್ತಾದ ಸಂಜಯ ಪಾಲ್ ಹಾಗೂ ಸುಭಾಸ ಕುಯ್ಲಾ ನೇತೃತ್ವದಲ್ಲಿ ತಯಾರಾದ ಗಣೇಶನ ಮೂರ್ತಿಗಳು ಹುಬ್ಬಳ್ಳಿ- ಧಾರವಾಡ ಅವಳಿನಗರ ಸೇರಿದಂತೆ ಸುತ್ತಲಿನ ಜಿಲ್ಲೆಗಳಲ್ಲಿ ಪ್ರತಿಷ್ಠಾಪನೆಗೊಳ್ಳುತ್ತವೆ. ಸಾರ್ವಜನಿಕ ಗಣೇಶೋತ್ಸವ ಮಂಡಳಿಯವರು ಈ ಬಾರಿ 100ಕ್ಕೂ ಹೆಚ್ಚು ಮೂರ್ತಿಗಳಿಗೆ 2- 3 ತಿಂಗಳು ಮೊದಲೇ ಬುಕ್ಕಿಂಗ್ ಮಾಡಿದ್ದಾರೆ. ಹೀಗಾಗಿ ಇಲ್ಲಿನ ಕಾರ್ಮಿಕರು ಹಗಲಿರುಳು ಕೆಲಸ ಮಾಡಿ ಮಂಡಳಿಗಳಿಗೆ ಹಸ್ತಾಂತರಿಸಿದ್ದಾರೆ.
ಅಲ್ಲಿಂದಲೇ ಬರುತ್ತದೆ ಮಣ್ಣು: ಕೊಲ್ಕತ್ತಾ ಕಲಾವಿದರು ಸಿದ್ಧಪಡಿಸುವ ಗಣೇಶನ ಮೂರ್ತಿಗಳಿಗೆ ಅಲ್ಲಿಂದಲೇ ಗುಣಮಟ್ಟದ ಮಣ್ಣು ತರುತ್ತಾರೆ. ಕೊಲ್ಕತ್ತಾದ ಜೇಡಿ ಮಣ್ಣನ್ನು ತರಿಸಿಕೊಂಡು ಮೂರ್ತಿಗಳನ್ನು ಸಿದ್ಧಪಡಿಸುತ್ತಾರೆ. ಸಂಪೂರ್ಣ ಮಣ್ಣಿನಿಂದ ಮಾಡುವುದರಿಂದ ಇವರ ಮೂರ್ತಿಗಳಿಗೆ ಭಾರಿ ಬೇಡಿಕೆ. ಮನೆಗಳಲ್ಲಿ ಪ್ರತಿಷ್ಠಾಪಿಸುವ ಸಣ್ಣ ಮೂರ್ತಿಗಳಿಂದ ೨೦ಕ್ಕೂ ಹೆಚ್ಚು ಅಡಿ ಎತ್ತರದ ಸಾರ್ವಜನಿಕ ಗಣೇಶ ಮೂರ್ತಿಗಳು ಇಲ್ಲಿ ಸಿದ್ಧಗೊಂಡಿವೆ.
4 ಲಕ್ಷ ರೂ. ದರ: ಬಂಗಾಳದ ಕಲಾವಿದರು ಸಿದ್ಧಪಡಿಸುವ ಸುಂದರ ಮೂರ್ತಿಗಳಿಗೆ ಭಾರಿ ಬೇಡಿಕೆ ಇದೆ. ಕೆಲವೊಮ್ಮೆ ಬೆಳಗಾವಿ, ವಿಜಯಪುರದ ಮಂಡಳಿಯವರೂ ಇಲ್ಲಿ ಬುಕ್ಕಿಂಗ್ ಮಾಡಿ ಮೂರ್ತಿಗಳನ್ನು ಸಿದ್ಧಪಡಿಸುತ್ತಾರೆ. ಈ ಮಣ್ಣಿನ ಮೂರ್ತಿಗಳಿಗೆ 3,000 ರೂಪಾಯಿಯಿಂದ 4 ಲಕ್ಷ ರೂ.ವರೆಗೆ ದರ ನಿಗದಿಯಾಗಿರುತ್ತದೆ.