

ಮಂಡ್ಯ: ನಗರದಲ್ಲಿ ಭಾನುವಾರ ಸಾಮೂಹಿಕ ಗಣೇಶೋತ್ಸವ ಸಮಿತಿ ವತಿಯಿಂದ ಆಯೋಜಿಸಿದ್ದ ಗಣಪತಿ ಮೂರ್ತಿಗಳ ಸಾಮೂಹಿಕ ವಿಸರ್ಜನಾ ಕಾರ್ಯಕ್ರಮ ಸಂಭ್ರಮ, ಸಡಗರದಲ್ಲಿ ನಡೆಯಿತು.
ಹಲವು ವರ್ಷದ ಹಿಂದೆ ಸಾಮೂಹಿಕವಾಗಿ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲಾಗುತ್ತಿತ್ತು. ಆದರೆ ಬಳಿಕದ ವರ್ಷದಲ್ಲಿ ಆ ಸಂಪ್ರದಾಯ ಸ್ಥಗಿತಗೊಂಡಿತ್ತು. ಈ ಹಿನ್ನೆಲೆಯಲ್ಲಿ ಹಿಂದಿನ ವೈಭವವನ್ನು ಮರುಕಳಿಸುವ ಉದ್ದೇಶದಿಂದ ಸಮಿತಿ ವತಿಯಿಂದ ನಗರದಲ್ಲಿ ಪ್ರತಿಷ್ಠಾಪಿಸಿ ಐದು ದಿನ ಪೂಜಾ ಕಾರ್ಯವನ್ನು ಯಶಸ್ವಿಯಾಗಿ ಪೂರೈಸಿದವರೆಲ್ಲರೂ ಒಟ್ಟಿಗೆ ಸೇರಿಸಿ ವಿಸರ್ಜನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಅದರಂತೆ 6ಕ್ಕೂ ಹೆಚ್ಚು ಗಣಪತಿ ಮೂರ್ತಿಗಳನ್ನು ವಿಸರ್ಜನೆ ಮಾಡಲಾಯಿತು.
ನಗರದಲ್ಲಿ ವಿವಿಧ ಸಮಿತಿಗಳ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಗಳನ್ನು ಮಧ್ಯಾಹ್ನ 1.30ರ ವೇಳೆಗೆ ಸರ್ ಎಂ.ವಿ. ಕ್ರೀಡಾಂಗಣಕ್ಕೆ ತರಲಾಯಿತು. ಮಧ್ಯಾಹ್ನ 3 ಗಂಟೆಗೆ ಕ್ರೀಡಾಂಗಣದಿಂದ ಜಾನಪದ ಕಲಾತಂಡಗಳೊಂದಿಗೆ ಗಣೇಶ ಮೂರ್ತಿಗಳ ಮೆರವಣಿಗೆಗೆ ಚಾಲನೆ ನೀಡಲಾಯಿತು. ಆರ್.ಪಿ. ರಸ್ತೆ, ವಿ.ವಿ. ರಸ್ತೆ, ಮಹಾವೀರ ವೃತ್ತ, ಜೈನರಬೀದಿ, ಕಾಮನ ವೃತ್ತ, ಹಳೇ ಎಂ.ಸಿ ರಸ್ತೆ ವಾರ್ಗವಾಗಿ ಕೋಣನಹಳ್ಳಿಕೆರೆ ಬಳಿಗೆ ಕೊಂಡೊಯ್ಯಲಾಯಿತು.
ಗಣೇಶ ಮೂರ್ತಿಗಳನ್ನು ವಿವಿಧ ಜಾನಪದ ಕಲಾತಂಡಗಳಾದ ಪೂಜಾ ಕುಣಿತ, ಮರಗಾಲು ಕುಣಿತ, ಗಾರುಡಿಗೊಂಬೆ, ಕೀಲು ಕುದುರೆ, ಸೋಮನ ಕುಣಿತ, ವೀರಭದ್ರ ಕುಣಿತ, ಮಂಗಳವಾದ್ಯ ಸಮೇತ ಮೆರವಣಿಗೆಯಲ್ಲಿ ಕೊಂಡೊಯ್ದು ವಿವಿಧ ಧಾರ್ಮಿಕ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದ ಬಳಿಕ ಕೋಣನಹಳ್ಳಿ ಕೆರೆಯಲ್ಲಿ ವಿಸರ್ಜನೆ ವಾಡಲಾಯಿತು. ಮೆರವಣಿಗೆಯಲ್ಲಿ ಕರಾವಳಿ ಚೆಂಡೆ ಮುದ್ದಳೆ ವಿಶೇಷ ಗಮನ ಸೆಳೆಯಿತು. ಇನ್ನು ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಪಿ.ಉಮೇಶ್, ಮಂಡ್ಯ ವಿಶ್ವವಿದ್ಯಾನಿಲಯದ ಯೋಜನೆ, ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಮಂಡಳಿಯ ನಾಮನಿರ್ದೇಶಕ ಡಾ.ಇಂದ್ರೇಶ್ ಸೇರಿದಂತೆ ಹಲವು ಗಣ್ಯರು ಮೆರವಣಿಗೆಯಲ್ಲಿ ಕುಣಿದು ಕುಪ್ಪಳಿಸಿದರು.
ನಗರಸಭಾ ಸದಸ್ಯರಾದ ಎಂ.ಪಿ.ಅರುಣ್ಕುವಾರ್, ಪ್ರಸನ್ನ, ವಿಸರ್ಜನಾ ಸಮಿತಿಯ ದೊಡ್ಡಾಚಾರಿ, ನೃಪತುಂಗ, ಸರ್ವೇಶ್, ಪಂಚಾಕ್ಷರಿ ಗಂಗಡ್ಕರ್, ಎಚ್.ಆರ್.ಅಶೋಕ್, ಪ.ಲಿ. ಕೃಷ ಇತರರಿದ್ದರು.