

ಶ್ರವಣಬೆಳಗೊಳ: ದೇಶದ ಸ್ವಾತಂತ್ರೃ ಸಂಗ್ರಾಮದಲ್ಲಿ ಗಣಪತಿ ಪ್ರತಿಷ್ಠಾಪನೆ, ಆರಾಧನೆ, ಪೂಜೆ ಫಲವಾಗಿ ದೇಶದ ಜನರೆಲ್ಲರೂ ಒಗ್ಗೂಡಿ ಸ್ವಾತಂತ್ರೃ ಚಳವಳಿಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಯಿತು ಎಂದು ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.
ಪಟ್ಟಣದ ಗಣಪತಿ ಪೆಂಡಾಲ್ನಲ್ಲಿ ಬುಧವಾರ ಆಯೋಜಿಸಿದ್ದ ಗಣಪತಿ ಪ್ರತಿಷ್ಠಾಪನಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಬ್ರಿಟಿಷರ ಆಳ್ವಿಕೆಯಿಂದ ಮುಕ್ತರಾಗಲು, ನಮ್ಮ ದೇಶಕ್ಕೆ ಸ್ವಾತಂತ್ರೃ ಪ್ರಾಪ್ತವಾಗಲು ಮಹಾ ಗಣಪತಿಯ ಪ್ರತಿಷ್ಠಾಪನೆ ಹಾಗೂ ಆರಾಧನೆಯೊಂದಿಗೆ ಸ್ವಾತಂತ್ರೃ ಚಳವಳಿಯ ಬಗ್ಗೆ ಚರ್ಚಿಸಲು ಅವಕಾಶ ದೊರಕಿತು. ಸ್ವಾತಂತ್ರ್ಯ ಹೋರಾಟಗಾರರು ಮಾಡಿದ ತ್ಯಾಗದ ಪ್ರತಿಫಲವಾಗಿ ನಮಗೆ ಸ್ವಾತಂತ್ರೃ ಲಭಿಸಿತು ಎಂದು ಹೇಳಿದರು.
ನಮ್ಮೆಲ್ಲರ ಮಾನ್ಯತೆ, ಉದ್ದೇಶ ಒಂದೇ ಆಗಿದ್ದು, ಜೈನ ಆಗಮದ ಪ್ರಕಾರ ಕ್ಷೇತ್ರಪಾಲಕರಿಗೆ ಮೊದಲ ಪೂಜೆ ಸಲ್ಲಿಸಲಾಗುತ್ತದೆ. ಅದೇ ರೀತಿ ನಮ್ಮೆಲ್ಲ ಕಷ್ಟಗಳನ್ನು, ವಿಘ್ನಗಳನ್ನು ನಿವಾರಿಸುವ ವಿನಾಯಕ ಕ್ಷೇತ್ರಪಾಲಕನಾಗಿ ನಮ್ಮನ್ನು ಕಾಯುತ್ತಿದ್ದಾನೆ ಎಂದ ಅವರು, ಶ್ರವಣಬೆಳಗೊಳದ ವಿಶೇಷವೆಂದರೆ ಹಿಂದು, ಜೈನ, ಮುಸ್ಲಿಮರು ಒಗ್ಗಟ್ಟಾಗಿ ಗಣಪತಿ ಪೂಜೆ ಮಾಡುತ್ತಾರೆ. ಇಲ್ಲಿ ಎಲ್ಲರೂ ಧರ್ಮ, ಜಾತಿ ಎನ್ನದೆ ಒಟ್ಟಾಗಿ ಧಾರ್ಮಿಕ ಸಹಿಷ್ಣುತೆ ಸಾರುತ್ತಿರುವುದು ವಿಶೇಷ ಎಂದರು.
ಕಾರ್ಯಕ್ರಮದಲ್ಲಿ ಮುಖಂಡರಾದ ಎಸ್.ಪಿ.ಕೃಷ್ಣಪ್ಪ, ಅಬ್ದುಲ್ ಆಫೀಜ್, ಎಸ್.ಎಂ.ರಮೇಶ್, ಎಸ್.ಕೆ.ರಾಘವೇಂದ್ರ, ಎಸ್.ಎನ್.ರವಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಅಫ್ತಾಬ್ ಪಾಷಾ, ಗಣಪತಿ ಸೇವಾ ಸಮಿತಿಯ ಅಧ್ಯಕ್ಷ ಎಸ್.ಕೆ.ಅಶೋಕ್, ಕಾರ್ಯದರ್ಶಿ ಸುಕುಮಾರ್, ಖಜಾಂಚಿ ದಿನೇಶ್ ಬಾಬು, ಗ್ರಾಪಂ ಮಾಜಿ ಅಧ್ಯಕ್ಷ ಶರತ್ ಕುಮಾರ್ ಇತರರಿದ್ದರು.