ಸೆ.7ರಿಂದ ಉಜಿರೆಯಲ್ಲಿ ಗಣೇಶೋತ್ಸವ

Bel_Ganesha
Published on

ಬೆಳ್ತಂಗಡಿ: ಉಜಿರೆಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ 18ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸೆ.7ರಿಂದ 9ರವರೆಗೆ ಉಜಿರೆ ಶ್ರೀ ಶಾರದಾ ಮಂಟಪದಲ್ಲಿ ವಿವಿಧ ಸ್ಪರ್ಧೆಗಳು, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

7ರಂದು ಬೆಳಗ್ಗೆ ಉಜಿರೆ ಶ್ರೀ ಜನಾರ್ದನ ಸ್ವಾಮಿ ಸನ್ನಿಧಿಯಲ್ಲಿ ಸಮಿತಿ ವತಿಯಿಂದ ಸಾಮೂಹಿಕ ಪ್ರಾರ್ಥನೆ, ಶ್ರೀ ಶಾರದಾ ಮಂಟಪದಲ್ಲಿ ಶ್ರೀಗಣಪತಿ ಹವನ, ಶ್ರೀ ಗಣಪತಿ ಮೂರ್ತಿ ಪ್ರತಿಷ್ಠಾಪನೆ ನಡೆಯಲಿದ್ದು, ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಪೂರಣ್ ವರ್ಮ, ಶ್ರೀ ಶಾರದಾ ಜುವೆಲ್ಲರ್ಸ್ ಮಾಲೀಕ ಆನಂದ ಆಚಾರ್ಯ ಮತ್ತು ಉದ್ಯಮಿ ಪ್ರವೀಣ್ ಶೆಟ್ಟಿ ಉಪಸ್ಥಿತರಿರುವರು. ಶಾಲಾ ಮಕ್ಕಳು ಹಾಗು ಸಾರ್ವಜನಿಕರಿಗೆ ಭಕ್ತಿಗೀತೆ ಸ್ಪರ್ಧೆ, ಭಾಷಣ ಸ್ಪರ್ಧೆ, ಪ್ರಬಂಧ ಸ್ಪರ್ಧೆ, ಮಧ್ಯಾಹ್ನ ರಂಗವಲ್ಲಿ ಸ್ಪರ್ಧೆ, ಶ್ರೀ ಸತ್ಯಸಾಯಿ ಸೇವಾ ಕ್ಷೇತ್ರದವರಿಂದ ಭಜನಾ ಕಾರ್ಯಕ್ರಮ, ಸಂಜೆ ವಿದುಷಿ ಕೆ.ಆರ್.ಶಾಂತ ಅವರ ಶಿಷ್ಯರಿಂದ ಲಘು ಸಂಗೀತ ಹಾಗೂ ಆಹ್ವಾನಿತ ಶಾಲಾ ತಂಡಗಳಿಂದ ನೃತ್ಯ ಕಾರ್ಯಕ್ರಮ ನಡೆಯಲಿದೆ.

8ರಂದು ಬೆಳಗ್ಗೆ ಶ್ರೀ ಗಣಪತಿ ಹವನ, ಆಹ್ವಾನಿತ ಭಜನಾ ತಂಡಗಳಿಂದ ಕುಳಿತು ಹಾಡುವ ಭಜನಾ ಸ್ಪರ್ಧೆ, ಸಾರ್ವಜನಿಕರಿಗೆ ಹಗ್ಗ ಜಗ್ಗಾಟ ಸಹಿತ ವಿವಿಧ ಆಟೋಟ ಸ್ಪರ್ಧೆಗಳು, ಸಂಜೆ ಭಗಿನಿ ಭಜನಾ ತಂಡ ಹಾಗೂ ಮಾತೃ ಮಂಡಳಿ ಭಜನಾ ತಂಡದವರಿಂದ ಭಜನಾ ಕಾರ್ಯಕ್ರಮ ಮತ್ತು ರಾತ್ರಿ ರಾಜ್ಯಮಟ್ಟದ ನೃತ್ಯ ಸ್ಪರ್ಧೆ ನೃತ್ಯಜ್ಯೋತಿ ನಡೆಯಲಿದೆ.

9ರಂದು ಬೆಳಗ್ಗೆ 108 ತೆಂಗಿನಕಾಯಿ ಶ್ರೀ ಗಣಪತಿಹವನ ಹಾಗೂ ಪೂರ್ಣಾಹುತಿ, ಮಧ್ಯಾಹ್ನ ಪಲ್ಲಪೂಜೆ, ಅಪರಾಹ್ನ ಕೀರ್ತನಾ ಕಲಾ ತಂಡ ಮುಂಡಾಜೆ ಅವರಿಂದ ಭಕ್ತಿಗಾನ ಯಕ್ಷನೃತ್ಯ ನಡೆಯಲಿದೆ. ಸಂಜೆ ಸಮಿತಿ ಅಧ್ಯಕ್ಷ ರಾಮಣ್ಣ ಗೌಡ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಸಮಿತಿ ಗೌರವಾಧ್ಯಕ್ಷ ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಗುರುವಾಯನಕೆರೆ ಎಕ್ಸೆಲ್ ಪ.ಪೂ.ಕಾಲೇಜು ಸಂಸ್ಥಾಪಕ ಸುಮಂತ್ ಕುಮಾರ್ ಜೈನ್, ಉಜಿರೆ ಗ್ರಾ.ಪಂ.ಅಧ್ಯಕ್ಷೆ ಉಷಾಕಿರಣ್ ಕಾರಂತ್ ಮತ್ತು ಕಾರ್ಯದರ್ಶಿ ಪ್ರವೀಣ್ ಎನ್.ಎಸ್.ಉಪಸ್ಥಿತರಿರಲಿದ್ದಾರೆ.

ಪ್ರತಿ ಮಧ್ಯಾಹ್ನ 12, ರಾತ್ರಿ 7.30ಕ್ಕೆ ಮಹಾಪೂಜೆ, ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ಮಹಾಪೂಜೆ ಬಳಿಕ ಆಕರ್ಷಕ ಸ್ತಬ್ಧಚಿತ್ರಗಳು, ಸುಡುಮದ್ದು ಪ್ರದರ್ಶನ ಹಾಗು ವಿವಿಧ ಸಾಂಸ್ಕೃತಿಕ ಕಲಾ ತಂಡಗಳ ಸಹಿತ ಉಜಿರೆ ನಗರದಲ್ಲಿ ಶ್ರೀ ಮಹಾಗಣಪತಿ ದೇವರ ಭವ್ಯ ಶೋಭಾಯಾತ್ರೆ ನಡೆದು ಮೂರ್ತಿ ವಿಸರ್ಜನೆ ನಡೆಯಲಿದೆ ಎಂದು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ರಾಮಣ್ಣ ಗೌಡ ಮತ್ತು ಕಾರ್ಯದರ್ಶಿ ಪ್ರವೀಣ್ ಎನ್.ಎಸ್.ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net