ಗಣೇಶ ಹಬ್ಬ- ಮಾರುಕಟ್ಟೆಯಲ್ಲಿ ವ್ಯಾಪಾರ ಜೋರು! *ಜಿಲ್ಲಾಧ್ಯಂತ 2310 ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ

raichur
raichur
Published on

ರಾಯಚೂರು ಹಿಂದೂ ಧಾರ್ಮಿಕ ಹಬ್ಬಗಳಲ್ಲಿ ಒಂದಾದ ಗಣೇಶ ಚೌತಿಯನ್ನು ಪ್ರತಿ ವರ್ಷದಂತೆ ಅದ್ಧೂರಿಯಾಗಿ ನಡೆಸಲು ಗಜಾನನ ಸೇವಾ ಸಮಿತಿಗಳು ಸಿದ್ದತೆ ಮಾಡಿಕೊಂಡಿದ್ದು, ನಗರ ಸೇರಿದಂತೆ ಜಿಲ್ಲಾಧ್ಯಂತ ಯುವಕರಲ್ಲಿ ಹಾಗೂ ಮನೆಗಳಲ್ಲಿ ಹಬ್ಬದ ಸಂಭ್ರಮ ಮನೆಮಾಡಿದೆ.

ದೇಶ-ವಿದೇಶಗಳಲ್ಲೂ ಜನಪ್ರಿಯಗೊಂಡಿರುವ ಗಣೇಶ ಚತುರ್ಥಿ ಇಂದು ಸಾಂಸ್ಕೃತಿಕವಾಗಿ ಮತ್ತು ಧಾರ್ಮಿಕವಾಗಿ ತುಂಬಾ ಮಹತ್ವವನ್ನು ಪಡೆದುಕೊಂಡಿದೆ. ಗಣೇಶ ಚೌತಿ ಹಿಂದುಗಳ ಪವಿತ್ರ ಹಬ್ಬ. ಶ್ರೀ ವರಸಿದ್ಧಿ ವಿನಾಯಕ ವ್ರತವನ್ನು ಆಚರಿಸುವ ದಿನ. ಭಾದ್ರಪದ ಮಾಸದ ಶುಕ್ಲ ಚತುರ್ಥಿಯು ಶ್ರೀಗಣೇಶನ ಜನ್ಮ ದಿನ ಎನ್ನಲಾಗುತ್ತದೆ. ಹೀಗಾಗಿ ಇದು ಧಾರ್ಮಿಕ ಮಹತ್ವವಿರುವ ವಿಶೇಷ ಪೂಜಾ ಸಂದರ್ಭ ಇದಾಗಿದ್ದು,ಈ ಬಾರಿ ಗಣೇಶ ಚತುರ್ಥಿ ಹಬ್ಬವನ್ನು ರಾಯಚೂರು ಜಿಲ್ಲೆಯಲ್ಲಿ ಅದ್ದೂರಿ ಆಚರಣೆ ಮಾಡಲು ಬರದ ಸಿದ್ಧತೆ ನಡೆಸಲಾಗಿದೆ.

2310 ಗಣೇಶ ಮೂರ್ತಿಗಳು ನೋಂದಣಿ!

ವರ್ಷದಿಂದ ವರ್ಷಕ್ಕೆ ಗಣೇಶ ಹಬ್ಬವನ್ನು ಗಜಾನನ ಯುವಕ ಮಂಡಳಿಯವರು ಅದ್ದೂರಿಯಾಗಿ ಗಣೇಶ ಹಬ್ಬವನ್ನು ಆಚರಣೆ ಮಾಡುತ್ತಿದ್ದು, ಈ ಬಾರಿ ನಗರ ಸೇರಿದಂತೆ ಜಿಲ್ಲೆಯ 7 ತಾಲೂಕಿನಲ್ಲಿ ಒಟ್ಟು 231ಒ ಗಣೇಶ ಮಂಡಳಿಗಳಿಂದ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆಗೆ ನೋಂದಣಿ ಮಾಡಿಕೊಂಡಿದ್ದು, ಈ ಪೈಕಿ 56 ಅತಿ ಸೂಕ್ಷ್ಮ , 286 ಸೂಕ್ಷ್ಮ ಗಣೇಶ ಮೂರ್ತಿಗಳು ಹಾಗೂ 1970 ಸಾಮಾನ್ಯ ಗಣೇಶ ಮೂರ್ತಿಗಳನ್ನು ಸ್ಥಾಪನೆ ಮಾಡಲು ಜಿಲ್ಲಾ ಪೊಲೀಸ್ ಇಲಾಖೆ ಅನುಮತಿ ನೀಡಿದೆ.

ಪೊಲೀಸ್ ಸೂಕ್ತ ಬಂದೋಬಸ್ತ್

ಭಾವೈಕತೆಯಿಂದ ಕೂಡಿದ ಗಣೇಶ ಹಬ್ಬದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಜಿಲ್ಲಾ ಪೊಲೀಸ್ ಇಲಾಖೆ ಮುಂಜಾಗೃತೆಯಿಂದ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಈ ಪೈಕಿ ಇಬ್ಬರು ಎಎಸ್ಪಿ, 5 ಜನ ಡಿಎಸ್ಪಿ ಹಾಗೂ 1200 ಸಿಬ್ಬಂದಿಗಳು,400 ಜನ ಗೃಹರಕ್ಷಕ ದಳ, 3 ಕೆಎಸ್‌ಆರ್‌ಪಿ ತುಣುಕು,9 ಡಿಆರ್ ಪೊಲೀಸ್ ತುಣುಕುಗಳನ್ನು ನೇಮಕ ಮಾಡಲಾಗಿದೆ.

ವ್ಯಾಪಾರ ಜೋರು

ಈ ಬಾರಿ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದರಿಂದ ರೈತರು ಸೇರಿದಂತೆ ಸಾಮಾನ್ಯ ಜನರು ಗೌರಿ ಗಣೇಶ ಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತಿದ್ದು, ನಗರದಲ್ಲಿ ಮಾರುಕಟ್ಟೆಯಲ್ಲಿ ಜನ ಸಂದಣಿ ಹೆಚ್ಚಾಗಿ ಕಂಡುಬಂದಿತ್ತು. ಗಣೇಶ ಚತುರ್ಥಿಯ ಮುನ್ನಾ ದಿನವಾದ ಮಂಗಳವಾರ ನಗರದ ಮಾರುಕಟ್ಟೆ ಪ್ರದೇಶ, ಹಬ್ಬದ ನೆಪದಲ್ಲಿ ಹೂವು, ಹಣ್ಣುಗಳು ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗಿತ್ತು. ಹಣ್ಣು, ಹೂವಿನ ಬೆಲೆ ಕೇಳುತ್ತಿದ್ದಂತೆ ಹೌಹಾರುತ್ತಿದ್ದ ಗ್ರಾಹಕರು, ಹಬ್ಬ ಆಚರಣೆಗೆ ಅನಿವಾರ‌್ಯತೆಯ ಪರಿಣಾಮ ಕಡಿಮೆ ಪ್ರಮಾಣದಲ್ಲಿ ಹಣ್ಣು-ಹೂವು ಖರೀದಿಸುತ್ತಿದ್ದರು.

ಗಮನ ಸೆಳೆದ ಗಣೇಶ ಮೂರ್ತಿಗಳು

ಪ್ರತಿ ವರ್ಷ ಜಿಲ್ಲೆಯಲ್ಲಿ ವಿಭಿನ್ನವಾಗಿ ಗಣೇಶ ಹಬ್ಬವನ್ನು ಹಿಂದೂ ಪರ ಸಂಘಟನೆಗಳು ಆಚರಣೆ ಮಾಡುತ್ತಿದ್ದು,ಈ ಬಾರಿಯೂ ವಿಶಿಷ್ಟ ರೀತಿಯಲ್ಲಿ ಆಚರಣೆ ಮಾಡಲು ಮುಂದಾಗಿದ್ದು,ಶಿವನ ಅವತಾರ, ಶ್ರೀಕೃಷ್ಣ ಅರ್ಜುನನ ಸಾರಥಿ, ಸರ್ಪದ ಮೇಲೆ ನೃತ್ಯ ಮಾಡುವ ಗಣಪ,ವೆಂಕಟೇಶ್ವರ,ರಾಘವೇಂದ್ರ ಸ್ವಾಮೀಜಿ ಗಣಪ, ಮಹಾರಾಜನ ಅವತಾರ ಸೇರಿದಂತೆ ಹೀಗೆ ನಾನಾ ಅವತಾರದ ಗಣೇಶಮೂರ್ತಿಗಳು ಪ್ರತಿಷ್ಠಾಪನೆಗೆ ದೂರದ ಊರುಗಳಿಂದ ಗಜಾನನ ಸಮಿತಿಯವರು ಮೇರವಣಿಗೆ ಮೂಲಕ ಪ್ರತಿಷ್ಠಾಪನೆಗೆ ತರುತ್ತಿರುವುದು ಕಂಡುಬಂದಿತ್ತು. ಒಟ್ಟಿನಲ್ಲಿ ಗಣೇಶ ಚತುರ್ಥಿಗೆ ರಾಯಚೂರು ಜಿಲ್ಲೆ ಸಿದ್ಧಗೊಂಡಿದ್ದು, ಶಾಂತಿ- ಸುವ್ಯವಸ್ಥೆಯೊಂದಿಗೆ ಈ ಬಾರಿ ಗಣೇಶೋತ್ಸವ ಎಲ್ಲೆಡೆ ನಿರ್ವಿಘ್ನವಾಗಿ ನಡೆಯಲಿ ಎಂಬುದೇ ಎಲ್ಲರ ಆಶಯವಾಗಿದೆ.

ಈ ಬಾರಿ ಜಿಲ್ಲೆಯಲ್ಲಿ ಅಧಿಕೃತವಾಗಿ ಒಟ್ಟು 2310 ಗಣೇಶ ಮೂರ್ತಿಗಳು ಪ್ರತಿಷ್ಠಾಪನೆ ಮಾಡಲು ವಿವಿಧ ಗಜಾನನ ಸಮಿತಿಗಳು ನೋಂದಣಿ ಮಾಡಿಕೊಂಡಿವೆ. ಶಾಂತಿಯಿಂದ ಹಬ್ಬವನ್ನು ಆಚರಣೆ ಮಾಡಲು ಜಿಲ್ಲಾಧ್ಯಂತ ಸಭೆಗಳನ್ನು ಮಾಡಲಾಗಿದೆ. ಡಿಜೆಯನ್ನು ಸಂಪೂರ್ಣ ನಿಷೇದ ಮಾಡಲಾಗಿದೆ.

ಎಂ.ಪುಟ್ಟಮಾದಯ್ಯ ಎಸ್ಪಿ ರಾಯಚೂರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net