

ಮಂಡ್ಯ: ಇಲ್ಲಿನ ಕಲ್ಲಹಳ್ಳಿ ವಿ.ವಿ ನಗರದ ಬಡಾವಣೆಯಲ್ಲಿ ವಿನಾಯಕ ಗೆಳೆಯರ ಬಳಗದಿಂದ ಆರನೇ ವರ್ಷದ ಗಣೇಶ ಪ್ರತಿಷ್ಠಾಪನೆ ಅಂಗವಾಗಿ 70 ಯೂನಿಟ್ ರಕ್ತ ಸಂಗ್ರಹಿಸುವ ಮೂಲಕ ಮಾದರಿಯಾದರು.
ಗಣೇಶ ಪ್ರತಿಷ್ಠಾಪನೆ ಸ್ಥಳದಲ್ಲಿಯೇ ಆಯೋಜಿಸಿದ್ದ ಶಿಬಿರದಲ್ಲಿ 70 ಜನರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರು. ಅಂತೆಯೇ ಸಂಗ್ರಹವಾದ ರಕ್ತವನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಹಸ್ತಾಂತರ ಮಾಡಲಾಯಿತು. ಇದೇ ವೇಳೆ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವವರನ್ನು ಬಳಗದಿಂದ ಸನ್ಮಾನಿಸಲಾಯಿತು.
ಜೀವಧಾರೆ ಟ್ರಸ್ಟ್ ಅಧ್ಯಕ್ಷ ಎಂ.ಎಸ್.ನಟರಾಜು ಮಾತನಾಡಿ, ರಕ್ತದಾನ ಎನ್ನುವುದು ಮಾನವೀಯತೆಯ ಸಂಕೇತ. ಒಮ್ಮೆ ರಕ್ತದಾನ ಮಾಡಿದರೆ ಮೂರರಿಂದ ನಾಲ್ಕು ಜನರ ಪ್ರಾಣ ಉಳಿಸಬಹುದು. ರಕ್ತಕ್ಕೆ ರಕ್ತವೇ ದಿವ್ಯೌಷಧ. ರಕ್ತದಾನ ಮಾಡುವುದರಿಂದ ಆರೋಗ್ಯ ವೃದ್ದಿಸುವುದರ ಜತೆಗೆ ಜೀವ ಉಳಿಸಿದ ಆತ್ಮತೃಪ್ತಿ ಸಿಗಲಿದೆ. ಜತೆಗೆ ಇನ್ನೊಬ್ಬರಿಗೆ ಸಹಾಯ ಮಾಡಬೇಕೆನ್ನುವ ಮಾನವೀಯ ಮೌಲ್ಯ ಹೆಚ್ಚಿಸುತ್ತದೆ ಎಂದರು.
ಮಂಡ್ಯ ಉಪವಿಭಾಗದ ಡಿವೈಎಸ್ಪಿ ಲಕ್ಷ್ಮಿನಾರಾಯಣ ಪ್ರಸಾದ್ ಮಾತನಾಡಿದರು. ಸಿಪಿಐ ನವೀನ್ ಸುಪೇಕರ್, ಪಶ್ಚಿಮ ಠಾಣೆ ಎಸ್‌ಐ ರಂಗಪ್ಪ, ಬಳಗದ ರಾಘು, ಗಗನ್, ಹೇಮಂತ್, ಶ್ರೀನಿವಾಸ್, ಸ್ವಾಮಿ, ನಾಗೇಂದ್ರ, ಮಂಜು, ರಂಜು, ಪ್ರಶಾಂತ್, ಕೆ.ಪಿ.ಮನೋಹರ್, ಮಧು, ಲೋಕೇಶ್, ಅಭಿ, ಕೇಶವ. ಮೋಹನ್, ಕುಸುಮಾ ಇತರರಿದ್ದರು.