ಬೆನಕನ ಸ್ವಾಗತಕ್ಕೆ ಸಜ್ಜಾದ ಕೊಪ್ಪಳ ಜನತೆ

ganesh chatutri koppal festival celebration
Published on

ಕೊಪ್ಪಳ: ಜಿಲ್ಲಾದ್ಯಂತ ಬೆನಕನ ಬರ ಮಾಡಿಕೊಳ್ಳಲು ಜನತೆ ಸಜ್ಜಾಗಿದ್ದು, ಶುಕ್ರವಾರ ನಗರಾದ್ಯಂತ ಜನ ಜಂಗುಳಿ ಕಂಡುಬಂತು.

ಪ್ರಮುಖ ರಾಷ್ಟೀಯ ಹಬ್ಬಗಳಲ್ಲಿ ಒಂದಾದ ಗಣೇಶ ಚೌತಿಗೆ ನಗರ, ಗ್ರಾಮೀಣ ಭಾಗಗಳಲ್ಲಿ ವಿಶೇಷ ಸ್ಥಾನವಿದೆ. ಭಕ್ತರು ಶ್ರದ್ಧಾಬಕ್ತಿಯಿಂದ ಗಣೇಶ ಮೂರ್ತಿ ಕೊಂಡೊಯ್ದರು. ವಿವಿಧ ಬಡಾವಣೆ, ಮುಖ್ಯ ರಸ್ತೆ, ಗುಡಿ, ಸಾರ್ವಜನಿಕ ಸ್ಥಳ, ಉದ್ಯಾನಗಳಲ್ಲಿ ಗಣೇಶನ ಪ್ರತಿಷ್ಠಾಪನೆಗೆ ಬೃಹತ್​, ಮಧ್ಯಮ ಗಾತ್ರದ ವೇದಿಕೆಗಳು ಸಿದ್ಧಗೊಂಡಿವೆ. ಪಿಒಪಿ ಗಣೇಶ ಮೂರ್ತಿ ನಿಷೇಧವಿದ್ದರೂ ಮಾರುಕಟ್ಟೆಯಲ್ಲಿ ಬಹುಪಾಲು ವರ್ತಕರು ಇದೇ ಮೂರ್ತಿಗಳನ್ನು ಮಾರಾಟ ಮಾಡುತ್ತಿದ್ದಾರೆ. ಮಣ್ಣಿನಿಂದ ತಯಾರಿಸಿದ ಪರಿಸರ ಸ್ನೇಹಿ ಮೂರ್ತಿಗಳಿದ್ದರೂ ಕಾಳಜಿ ಇದ್ದವರು ಮಾತ್ರ ಕೊಳ್ಳುತ್ತಿದ್ದಾರೆ.

ಒಂದು ಸಾವಿರ ರೂ.ನಿಂದ ಹಿಡಿದು ಲಕ್ಷಾಂತರ ರೂ. ಮೌಲ್ಯದ ಮೂರ್ತಿಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಜಿಲ್ಲಾಡಳಿತ, ಪರಿಸರ ಇಲಾಖೆ ಅಧಿಕಾರಿಗಳು ಪತ್ರಿಕಾ ಪ್ರಕಟಣೆಗೆ ಸೀಮಿತವಾಗಿವೆ. ಮಾರುಕಟ್ಟೆಯಲ್ಲಿ ಅಂಗಡಿಗಳಿಗೆ ಭೇಟಿ ನೀಡಿ ಮಾರಾಟಗಾರರು ಹಾಗೂ ಸಾರ್ವಜನಿಕರಿಗೆ ಅರಿವು ಮೂಡಿಸುವ ಪ್ರಯತ್ನಗಳಾಗುತ್ತಿಲ್ಲ. ಇದರಿಂದ ಜಾಗೃತಿ ಕೇವಲ ಬಾಯಿ ಮಾತಿಗೆ ಸೀಮಿತವಾಗಿದೆ. ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಕತ್ತರಿ ಹಾಕಿದೆ. ಹಣ್ಣು, ಹೂ, ಬಾಳೆದಿಂಡು, ದಿನಸಿ ಬೆಲೆ ದುಪ್ಪಟ್ಟಾಗಿದ್ದು, ಸಾರ್ವಜನಿಕರು ಬೆಲೆ ಏರಿಕೆ ಬಿಸಿ ಅನುಭವಿಸುವಂತಾಗಿದೆ.

ತಿಂಗಳ ಹಿಂದಿದ್ದ ದಿನಸಿ ಬೆಲೆ ಗಣನೀಯವಾಗಿ ಹೆಚ್ಚಳವಾಗಿದೆ. 10 ರೂ. ಇದ್ದ ಮೊಳ ಹೂ 25ರೂ., 30ರೂ. ಡಜನ್​ ಇದ್ದ ಬಾಳೆ ಹಣ್ಣು 50ರೂ., 150ರೂ. ಕೆಜಿ ಇದ್ದ ಸೇಬು 200 ರೂ.ಗೆ ಏರಿದ್ದು ಗಣೇಶ ಚೌತಿ ಜನರಿಗೆ ದುಬಾರಿಯಾಗಿ ಪರಿಣಮಿಸುವಂತಾಗಿದೆ. ಕೊಪ್ಪಳ ಬಸ್​ ನಿಲ್ದಾಣ ಮುಂಭಾಗ, ಅಶೋಕ ವೃತ್ತ, ಸಾರ್ವಜನಿಕ ಮೈದಾನ ಸೇರಿ ವಿವಿಧೆಡೆ ಬಾಳೆ ದಿಂಡು, ಹೂ ಮಾರಾಟ ಮಾಡಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net