

ಚಿಕ್ಕಬಳ್ಳಾಪುರ: ದರ್ಬಾರ್ ಗಣಪ, ದಶಾವತಾರಿ ಗಣಪ, ಶಿವಲಿಂಗರೂಪಿ ಗಣಪ, ಸ್ವರ್ಣ ಗಣಪ, ಚಂದ್ರ ವಿಹಾರಿ ಗಣಪ.
ಇವು ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ವಿವಿಧೆಡೆ ಪ್ರತಿಷ್ಠಾಪನೆಯಲ್ಲಿ ಕಂಡು ಬರುತ್ತಿರುವ ಮನ ಮೋಹಕ ದೇವರ ಮೂರ್ತಿಗಳು. ವಿವಿಧ ಸಂಘ ಸಂಸ್ಥೆಗಳು, ಮಹೋತ್ಸವ ಆಚರಣಾ ಸಮಿತಿಗಳು ಪರಸ್ಪರ ಪೈಪೋಟಿಯಲ್ಲಿ ಗಮನ ಸೆಳೆಯುವ ರೀತಿಯಲ್ಲಿ ಉತ್ಸವವನ್ನು ಆಚರಿಸುತ್ತಿದ್ದು ಜನ ಮೆಚ್ಚುಗೆಗೆ ಪಾತ್ರವಾಗಿದೆ.
ಜಿಲ್ಲಾ ಕೇಂದ್ರದಲ್ಲಿನ ಕೋದಂಡರಾಮಸ್ವಾಮಿ ದೇವಾಲಯದ ಸಮೀಪ ಸ್ವಾಮಿ ವಿವೇಕಾನಂದ ಫೌಂಡೇಷನ್ ೧೧ ನೇ ವಾರ್ಷಿಕೋತ್ಸವದ ಅಂಗವಾಗಿ ದಶಾವತಾರ ಗಣಪತಿಯನ್ನು ಪ್ರತಿಷ್ಠಾಪಿಸಿದ್ದು ವಿಷ್ಣುವಿನ ನಾನಾ ಅವತಾರಗಳ ನಡುವೆ ನಾಗಶೇಷನ ನೆರಳಿನಲ್ಲಿ ಗಣಪನು ಸಿಂಹಾಸನದಲ್ಲಿ ವಿರಾಜಮಾನನಾಗಿದ್ದಾನೆ. ಪ್ರತಿ ವರ್ಷ ನಾನಾ ಸಂದೇಶಗಳ ಮೂಲಕ ಗಮನ ಸೆಳೆಯುತ್ತಿರುವ ಗಂಗಮ್ಮನ ಗುಡಿಯಲ್ಲಿ ನವಿಲು ಗರಿಗಳೊಂದಿಗೆ ದರ್ಬಾರ್ ನಡೆಸುತ್ತಿರುವ ಗಣಪನು ಸ್ವರ್ಣ ಮಂಟಪ, ಗಜಮುಖ ಅಲಂಕಾರಿಕ ಹಾರ, ಗಂಗಮ್ಮ ಮಾತೆಯೊಂದಿಗೆ ನೆಲೆಸಿದ್ದು ೨೩ ನೇ ವಾರ್ಡ್‌ನಲ್ಲಿನ ಚಾಮರಾಜಪೇಟೆಯಲ್ಲಿ ಶಿವ, ಬ್ರಹ್ಮ, ವಿಷ್ಣು ಮುಖ ದರ್ಶನದಲ್ಲಿ ಸಿಂಹಾಸನಾಧೀಶ ಗಣಪ, ದೊಡ್ಡಭಜನೆ ರಸ್ತೆಯಲ್ಲಿ ಶ್ರೀ ಗಜಗಣಪ ಗೆಳೆಯರ ಸಂಘವು ೪೦ ನೇ ವಾರ್ಷಿಕೋತ್ಸವದ ಅಂಗವಾಗಿ ಪ್ರತಿಷ್ಠಾಪನೆಯ ಗೌರಿ ಹಾಗೂ ಚಂದ್ರನ ಮೇಲೆ ಕುಳಿತಿರುವ ಗಣಪತಿ ಸೇರಿದಂತೆ ನಾನಾ ಮೂರ್ತಿಗಳು ಗಮನ ಸೆಳೆಯುತ್ತಿವೆ.