

ಚಿಕ್ಕಬಳ್ಳಾಪುರ: ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆಯಲ್ಲಿ ನಾನಾ ಬಗೆಯ ಗಣಪನ ಮೂರ್ತಿಗಳು ಮಾರುಕಟ್ಟೆಗೆ ಬಂದಿವೆ. ಜಿಲ್ಲೆಯ ಪ್ರಮುಖ ಬೀದಿಬದಿಯ ಪಾದಚಾರಿ ಮಾರ್ಗ, ಖಾಸಗಿ ಮಳಿಗೆ ಹಾಗೂ ನಿವೇಶನಗಳು ಸೇರಿದಂತೆ ಹಲವೆಡೆ ಲೋಡುಗಟ್ಟಲೇ ಮೂರ್ತಿಗಳನ್ನು ತಂದು ವ್ಯಾಪಾರಸ್ಥರು ಮಾರಾಟಕ್ಕಿಟ್ಟಿದ್ದಾರೆ. ಈಗಾಗಲೇ ವಿವಿಧ ಪ್ರತಿಷ್ಠಾಪನಾ ಮಹೋತ್ಸವ ಸಮಿತಿಗಳು, ಯುವ ಬಳಗವು ಆಕರ್ಷಕ ಗಣಪನ ಆಯ್ಕೆಯಲ್ಲಿ ತೊಡಗಿದ್ದು ಮುಂಗಡ ಬುಕ್ಕಿಂಗ್ ಪ್ರಕ್ರಿಯೆ ಪ್ರಾರಂಭವಾಗಿದೆ.
*ಗಣಪನ ಕಡೆ ಗಮನ
ಪ್ರತಿ ವರ್ಷ ದೊಡ್ಡ ಬಜೆಟ್ ನಲ್ಲಿ ವಿಜೃಂಭನೆಯಿಂದ ಗಣಪತಿ ಉತ್ಸವವನ್ನು ಆಚರಿಸುವ ಸಂಘ ಸಂಸ್ಥೆಗಳು ಕಲಾವಿದರನ್ನು ಕರೆಸಿಕೊಂಡಿದ್ದು ನಿಗದಿತ ಸ್ಥಳದಲ್ಲಿ ಯೋಜನೆಯ ಮೂರ್ತಿಗಳನ್ನು ಆಕರ್ಷಕವಾಗಿ ತಯಾರಿಸುವ ಕೆಲಸವಾಗುತ್ತಿದೆ. ವಿರಾಜಮಾನವಾಗಿ ಗಮನ ಸೆಳೆಯುವ ಸಿಂಹಾಸನ, ಮಹಾ ಮಂಟಪಗಳು, ಕಲಾಕೃತಿಗಳು ನಿರ್ಮಾಣಗೊಳ್ಳುತ್ತಿವೆ. ಮತ್ತೊಂದೆಡೆ ಹೈದರಾಬಾದ್, ಬೆಂಗಳೂರು ಸೇರಿದಂತೆ ಮಹಾನಗರಗಳಲ್ಲಿ ತಯಾರಾಗಿರುವ ಮೂರ್ತಿಗಳನ್ನು ಲಾರಿಗಳನ್ನು ತರಿಸಿ, ಮಾರುವ ಪ್ರಕ್ರಿಯೆ ಪ್ರಾರಂಭವಾಗಿದೆ.
*ವಾತಾವರಣದ ಸಮಸ್ಯೆ
ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದಲೂ ಮೋಡ ಮುಸುಕಿದ ವಾತಾವರಣ ಇದೆ. ಜಡಿ ಮಳೆ ಸುರಿಯುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಗಣಪನ ಮೂರ್ತಿಗಳನ್ನು ಸಂರಕ್ಷಿಸಿ, ಮಾರಲು ವ್ಯಾಪಾರಿಗಳು ಹರಸಾಹಸ ಮಾಡುವಂತಾಗಿದೆ.
ಮಣ್ಣಿನ ವಿಗ್ರಹಗಳು ಮಳೆಗೆ ಬಿರುಕು ಬಿಡುವ, ಬಣ್ಣ ಅಳಸಿ ಹೋಗುವುದು ಸೇರಿದಂತೆ ಇತರ ಹಾನಿಗೊಳಗಾಗುವ ಸಾಧ್ಯತೆ ಇದೆ. ಇಂತಹವರನ್ನು ಖರೀದಿಸಲು ಜನರು ಬಯುಸುವುದಿಲ್ಲ. ಇನ್ನೂ ಸಾವಿರಾರು ಬಂಡವಾಳ ಹೂಡಿ, ತಂದ ಮೂರ್ತಿಗಳನ್ನು ಸುರಕ್ಷಿತವಾಗಿ ಕಾಪಾಡಿಕೊಳ್ಳುತ್ತ ಮಾರಬೇಕೆಂಬ ಭಾವನೆಯಲ್ಲಿ ಕಸರತ್ತು ನಡೆಸುತ್ತಿದ್ದಾರೆ. ಪ್ಲಾಸ್ಟಿಕ್ ಪೇಪರ್ ಹೊದಿಕೆಯನ್ನು ಹಾಕಿ, ಗ್ರಾಹಕರು ಬಂದಾಗ ತೆಗೆದು ವಿವರಿಸುತ್ತಿರುವ ದೃಶ್ಯ ಕಂಡು ಬರುತ್ತಿದೆ.