ಗಣೇಶೋತ್ಸವ: ಭಾವಿ ಕಾರ್ಪೊರೇಟರ್‌ಗಳಿಗೆ ದೇಣಿಗೆ ಭಾರ

ganesha idol - 2
Published on

ಬೆಂಗಳೂರು: ಗ್ರೇಟರ್ ಬೆಂಗಳೂರು ಅಡಿಯಲ್ಲಿ ರಚನೆಯಾಗಲಿರುವ ಹೊಸ ಪಾಲಿಕೆಗಳಿಗೆ ಶೀಘ್ರವೇ ಚುನಾವಣೆ ನಡೆಯುವ ಹಿನ್ನೆಲೆ, ಭಾವಿ ಕಾರ್ಪೊರೇಟರ್ ಆಗಲಿರುವ ರಾಜಕೀಯ ಮುಖಂಡರು ಗಣಪತಿ ಸಂಘಗಳಿಗೆ ದೇಣಿಗೆ ನೀಡುವಲ್ಲಿ ಹೈರಾಣರಾಗಿದ್ದಾರೆ.

ಬಿಬಿಎಂಪಿಗೆ ಐದು ವರ್ಷ ಚುನಾವಣೆ ನಡೆಯದ ಕಾರಣ ಆ ಅವಧಿಯಲ್ಲಿ ಸಾರ್ವಜನಿಕ ಗಣೇಶೋತ್ಸವ, ರಾಜ್ಯೋತ್ಸವಕ್ಕೆ ರಾಜಕಾರಣಿಗಳಿಗೆ ಚಂದಾ ಬಿಸಿ ತಟ್ಟಿರಲಿಲ್ಲ. ಕಳೆದ ವಾರ ಡಿಸಿಎಂ 5 ಪಾಲಿಕೆಗಳಿಗೆ ಈ ವರ್ಷಾಂತ್ಯಕ್ಕೆ ಎಲೆಕ್ಟನ್ ನಡೆಸಿಯೇ ಸಿದ್ಧ ಎಂಬ ಹೇಳಿಕೆ ಬೆನ್ನಲ್ಲೇ, ಗಣಪತಿ ಸಂಘಗಳು ದೇಣಿಗೆಗಾಗಿ ಭಾವಿ ಪುರಪಿತೃಗಳ ಮೊರೆ ಹೋಗಿದ್ದಾರೆ. ಗಣೇಶೋತ್ಸವಕ್ಕೆ ಇನ್ನು ಎರಡೇ ದಿನ ಬಾಕಿ ಇರುವುದರಿಂದ ಸ್ಥಳೀಯ ಮುಖಂಡರ ಮನೆ, ಕಚೇರಿ ಎದಿರು ಸಂಘಟನೆಗಳ ಪ್ರತಿನಿಧಿಗಳ ಜನಜಾತ್ರೆ ಕಂಡಿದೆ.

ನಗರದಲ್ಲಿ ವರ್ಷದಿಂದ ವರ್ಷಕ್ಕೆ ಗಣೇಶೋತ್ಸವ ಕ್ರೇಜ್ ಹೆಚ್ಚಾಗುತ್ತಿದೆ. ಸಂಘ-ಸಂಸ್ಥೆಗಳು ಸೇರಿ ವಿವಿಧ ಬಡಾವಣೆಗಳಲ್ಲಿ ಯುವಕರ ಗುಂಪುಗಳು ಬೀದಿಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಹಬ್ಬ ಆಚರಿಸುತ್ತಾರೆ. ಹಲವು ಸಂಘಟನೆಗಳು ವಾರ ಕಾಲ ಉತ್ಸವ ಆಚರಿಸುವುದುಂಟು. ಪ್ರತಿದಿನ ಪೂಜೆ, ಪ್ರಸಾದ ಹಂಚಿಕೆ ಬಳಿಕ ಆರ್ಕೆಸ್ಟ್ರಾ, ಸಂಗೀತ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾರೆ. ಇಂತಹ ಪ್ರೋಗ್ರಾಂಗಳಿಗೆ ಸಾರ್ವಜನಿಕರು, ಸ್ಥಳೀಯ ಮುಖಂಡರು ಚಂದಾ ನೀಡುವುದುಂಟು. ರಾಜಕೀಯ ನಾಯಕರ ಬೆಂಬಲಿಗರು ತಮ್ಮ ಬಡಾವಣೆಗಳಲ್ಲಿ ಜನಬೆಂಬಲ ಪಡೆಯಲು ಗಣೇಶೋತ್ಸವದ ಖರ್ಚು-ವೆಚ್ಚಗಳನ್ನು ನೋಡಿಕೊಳ್ಳುವ ಪರಿಪಾಠ ಬೆಳೆದುಬಂದಿದೆ. ಇದಕ್ಕೆ ಪ್ರತಿಯಾಗಿ ಅಂತಹ ಸಂಘಟನೆಗಳ ಯುವಕರನ್ನು ಚುನಾವಣೆ ವೇಳೆ ಬಳಸಿಕೊಳ್ಳಲಾಗುತ್ತದೆ.

ಎಲೆಕ್ಷನ್‌ಗಾಗಿ ಸ್ವಯಂ ದೇಣಿಗೆ:

ಪ್ರಸ್ತುತ ಪಾಲಿಕೆ ಚುನಾವಣೆ ಎದಿರುಗೊಳ್ಳುವ ಹಿನ್ನೆಲೆ ಎಲೆಕ್ಷನ್ ವೇಳೆ ಕಾರ್ಯಕರ್ತರನ್ನು ಹಿಡಿದಿಟ್ಟುಕೊಳ್ಳುವುದು ಪ್ರಯಾಸದ ಕೆಲಸ. ಪಕ್ಷದ ಕಾರ್ಯಕರ್ತರ ಜತೆಗೆ ಸ್ಥಳೀಯವಾಗಿ ಪ್ರಭಾವುಳ್ಳ ಯುವಕರನ್ನು ಸೆಳೆಯಲು ಗಣೇಶೋತ್ಸವ, ಕನ್ನಡ ರಾಜ್ಯೋತ್ಸವ ಆಚರಣೆಗೆ ದೇಣಿಗೆ ನೀಡಲಾಗುತ್ತಿದೆ. ಈ ಬಾರಿ ಪಾಲಿಕೆ ಚುನಾವಣೆ ತುರರಿನ ಸ್ಪರ್ಧೆ ಕಾಣಲಿದ್ದು, ಪಾಲಿಕೆ ಸದಸ್ಯ ಸ್ಥಾನದ ಮೇಲೆ ಕಣ್ಣಿಟ್ಟಿರುವವರು ಸ್ವಯಂ ದೇಣಿಗೆ ಕೊಡಲಾರಂಭಿಸಿದ್ದಾರೆ.

ಗಣೇಶೋತ್ಸವ ಹಿನ್ನೆಲೆಯಲ್ಲಿ ಒಂದು ದಿನದ ಪೂಜೆ ಖರ್ಚು, ಪ್ರಸಾದ, ಮೆರವಣಿಗೆ ದಿನ ತಮಟೆ ವಾದ್ಯ, ಆರ್ಕೆಸ್ಟ್ರಾ, ಅಲಂಕಾರ ಸಾಮಗ್ರಿ, ಸಾಂಸ್ಕೃತಿ ಕಾರ್ಯಕ್ರಮಗಳ ಪೈಕಿ ಯಾವುದಾದರು ಒಂದು ಬಾಬ್ತಿನ ಖರ್ಚನ್ನು ಮುಖಂಡರು ಭರಿಸುವವರಿದ್ದಾರೆ. ಕೆಲವು ಕಡೆಗಳಲ್ಲಿ ಗಣೇಶ ಮೂರ್ತಿ ಖರೀದಿ ವೆಚ್ಚವನ್ನೇ ಕೊಡುಗೆಯಾಗಿ ನೀಡುವುದುಂಟು. ಹಣದ ರೂಪದಲ್ಲಾದರೆ 5 ಸಾವಿರ ರೂ.ನಿಂದ 1 ಲಕ್ಷ ರೂ. ವರೆಗೆ ದೇಣಿಗೆ ನೀಡಲಾಗುತ್ತದೆ. ಇದರ ಹೊರತಾಗಿಯೂ ಹಲವು ಸಂಘ-ಸಂಸ್ಥೆಗಳು ತಮ್ಮದೇ ಬಳಗದಲ್ಲಿ ಹಣ ಸಂಗ್ರಹಿಸಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವುದುಂಟು.

50 ಸಾವಿರಕ್ಕೂ ಹೆಚ್ಚು ಪ್ರತಿಷ್ಠಾಪನೆ:

ಬಿಬಿಎಂಪಿ ವ್ಯಾಪ್ತಿಯಲ್ಲಿ ಕಳೆದ ವರ್ಷ 6 ಲಕ್ಷಕ್ಕೂ ಹೆಚ್ಚು ಗಣಪತಿ ಮೂರ್ತಿಗಳನ್ನು ವಿಸರ್ಜಿಸಲಾಗಿತ್ತು. ಇವುಗಳಲ್ಲಿ ಹೆಚ್ಚಿನವು ಮನೆಗಳಲ್ಲಿ ಪೂಜಿಸಿದ್ದವು ಅಧಿಕ ಸಂಖ್ಯೆಯವು ಎಂಬುದಾಗಿ ಪಾಲಿಕೆ ಮಾಹಿತಿ ನೀಡಿದೆ. ಪ್ರತಿ ವಾರ್ಡ್‌ನಲ್ಲಿ 100ಕ್ಕಿಂತ ಅಧಿಕ ಸ್ಥಳಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗುತ್ತದೆ. ಈ ಬಾರಿ ಐದು ಪಾಲಿಕೆಗಳಿಗೆ ಚುನಾವಣೆ ನಡೆಯಲಿರುವ ಹಿನ್ನೆಲೆ 50 ಸಾವಿರಕ್ಕೂ ಅಧಿಕ ಕಡೆ ಮೂರ್ತಿ ಪ್ರತಿಷ್ಠಾಪನೆಗೊಳ್ಳಲಿದೆ ಎಂದು ಅಂದಾಜಿಸಲಾಗಿದೆ.

ಬಿಬಿಎಂಪಿಗೆ ನಾಲ್ಕೈದು ವರ್ಷದಿಂದ ಚುನಾವಣೆ ನಡೆಯದ ಕಾರಣ ಗಣೇಶೋತ್ಸವಕ್ಕೆ ದೇಣಿಗೆ ನೀಡುವಂತೆ ಹೆಚ್ಚಿನ ಒತ್ತಡ ಇರಲಿಲ್ಲ. ಈ ವರ್ಷಾಂತ್ಯಕ್ಕೆ ಹೊಸ ಪಾಲಿಕೆಗಳಿಗೆ ಎಲೆಕ್ಷನ್​​ ನಡೆಸುವುದಾಗಿ ಸರ್ಕಾರ ಘೋಷಿಸಿದ ಬಳಿಕ ಯುವಕ ಸಂಘಗಳು, ಗಣಪತಿ ವೇದಿಕೆಗಳು ಚಂದಾ ಕೇಳಿದ್ದಾರೆ. ನಮ್ಮ ಕೈಲಾದಷ್ಟು ದೇಣಿಗೆ ನೀಡಿದ್ದೇವೆ. ಧಾರ್ಮಿಕ ಕೆಲಸಕ್ಕೆ ಒಂದಿಷ್ಟು ನೆರವು ನೀಡಿದ್ದೆವೆಯೆ ಹೊರತು ಚುನಾವಣೆಯಲ್ಲಿ ಗೆಲ್ಲಲು ಅಲ್ಲ.

- ಸುರೇಶ್​​, ಬೆಂ. ಉತ್ತರ ಪಾಲಿಕೆಯ ಟಿಕೆಟ್​​ ಆಕಾಂಕ್ಷಿ, ಬ್ಯಾಟರಾಯನಪುರ

Related Stories

No stories found.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net