

ಕೊಳ್ಳೇಗಾಲ: ಪಟ್ಟಣದ ಪ್ರಸನ್ನ ಶ್ರೀ ವೀರಾಂಜನೇಯಸ್ವಾಮಿ ದೇವಾಲಯ ಮುಂಭಾಗ 13 ಅಡಿ ಎತ್ತರದ ಗಣಪತಿ ಮೂರ್ತಿಯನ್ನು ಕೂರಿಸಲಾಗುತ್ತಿದ್ದು, ಆ.27ರಿಂದ ಸೆ.7ರವರೆಗೆ ವಿವಿಧ ಹೋಮ, ಹವನ ಪೂಜಾ ಕೈಂಕರ್ಯ ಹಮ್ಮಿಕೊಳ್ಳಲಾಗಿದೆ ಎಂದು ಪಟ್ಟಣದ ಪ್ರಸನ್ನ ಶ್ರೀ ವೀರಾಂಜನೇಯ ದೇವಾಲಯ ಪ್ರಧಾನ ಅರ್ಚಕ ಟಿವಿಎಸ್ ರಾಘವನ್ ಹೇಳಿದರು.
ಈ ಬಾರಿ ವಿಶೇಷವಾಗಿ ಶ್ರೀ ಗೌರಿ, ಗಣೇಶ ಹಬ್ಬ ಆಚರಣೆ ಮಾಡಲಾಗುತ್ತಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
13 ಅಡಿ ಎತ್ತರದ ಒಂದು ಗಣಪತಿ, 5 ಅಡಿ ಎತ್ತರದ 2 ಗಣಪತಿ ಸೇರಿದಂತೆ 14 ಗಣಪತಿಯನ್ನು ಕೂರಿಸಲಾಗುವುದು. ಪಿಒಪಿ ಗಣಪತಿ ನಿಷೇಧವಿರುವುದರಿಂದ ಪೂಜೆಗಷ್ಟೇ13 ಅಡಿಯ ಪಿಒಪಿ ಗಣಪತಿ ಮೂರ್ತಿಯನ್ನು ಬಳಸುತ್ತಿದ್ದೇವೆ. ಕೊನೆಗೆ ಪರಿಸರ ಪ್ರೇಮಿ ಮಣ್ಣಿನ ಗಣಪತಿಯನ್ನು ಮಾತ್ರ ವಿಸರ್ಜನೆ ಮಾಡುತ್ತೇವೆ. 12 ದಿನಗಳ ಕಾಲ ಭರತನಾಟ್ಯ, ಹರಿಕಥೆ, ಭಾವಗೀತೆ, ಜಾನಪದ ಗೀತೆ, ಭಕ್ತಿಗೀತೆ ಒಳಗೊಡಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.